ಬೆಂಗಳೂರು, ಜನವರಿ 22: ಬಿಟಿಎಂ ಲೇಔಟ್ 29ನೇ ಮುಖ್ಯ ಜಂಕ್ಷನ್‌ನಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವುದರಿಂದ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಹಾಗೇ ಪರ್ಯಾಯ ಮಾರ್ಗವನ್ನು ಬೆಂಗಳೂರು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸರು ಟ್ವಿಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಬನ್ನೇರುಘಟ್ಟ ಮುಖ್ಯ ರಸ್ತೆಯ, ಜಯದೇವಾ ಜಂಕ್ಷನ್‌ನಲ್ಲಿ ಔಟರ್ ರಿಂಗ್ ರಸ್ತೆಯ ಸಿಲ್ಕ್ ಬೋರ್ಡ ಜಂಕ್ಷನ್ನಿಂದ ಬರುವ ವಾಹನಗಳು ಮುಕ್ತ ಎಡ ತಿರುವು ಪಡೆಯಲು ಅವಕಾಶ ನೀಡಲಾಗಿದೆ. ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ ಜಂಕ್ಷನ್ನಿಂದ ಜಯದೇವ ಜಂಕ್ಷನ್ ಕಡೆಗೆ ಬರುವ ವಾಹನಗಳು ರಿಂಗ್ ರಸ್ತೆಯನ್ನು ತಲುಪಲು ಜಯದೇವ ಜಂಕ್ಷನ್‌ನ ಸರ್ವಿಸ್ ರಸ್ತೆಯ ಮುಖಾಂತರ ಚಲಿಸಿ ಮುಕ್ತ ಎಡ ತಿರುವು ಪಡೆದು ಬನಶಂಕರಿ ಕಡೆಗೆ ಚಲಿಸಬಹುದಾಗಿದೆ.
ಔಟರ್ ರಿಂಗ್ ರಸ್ತೆಯಲ್ಲಿ ಬಿಟಿಎಂ 29ನೇ ಮೇನ್ ಜಂಕ್ಷನ್ ನಿಂದ ಬನ್ನೇರುಘಟ್ಟ ಮುಖ್ಯ ರಸ್ತೆಯ ರೂಬಿ-2 ಜಂಕ್ಷನ್‌ವರೆಗೆ.
ಬನ್ನೇರುಘಟ್ಟ ರಸ್ತೆಯ ಜಯದೇವ ಜಂಕ್ಷನ್‌ನಲ್ಲಿ ರಿಂಗ್ ರಸ್ತೆಯಲ್ಲಿ ಬರುವ ವಾಹನಗಳಿಗೆ ಮುಕ್ತ ಎಡ ತಿರುವು ಕಲಿಸಲಾಗಿದ್ದು ಸಾಯಿರಾಂ ಜಂಕ್ಷನ್‌ನಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರಸ್ತುತ ಸಾಯಿರಾಂ ಜಂಕ್ಷನ್‌ನಲ್ಲಿ ಬನ್ನೇರುಘಟ್ಟ ಮುಖ್ಯರಸ್ತೆಯ ರಸ್ತೆ ವಿಭಜಕವನ್ನು ಮುಚ್ಚಲಾಗಿದೆ.
ಔಟರ್ ರಿಂಗ್ ರಸ್ತೆಯ ಸಿಲ್ಕ್ ಬೋರ್ಡ ಜಂಕ್ಷನ್ನಿಂದ ಜಯದೇವಾ ಜಂಕ್ಷನ್ ಕಡೆಗೆ ಚಲಿಸುವ ವಾಹನಗಳು 29ನೇ ಮುಖ್ಯ ರಸ್ತೆ ಔಟರ್ ರಿಂಗ್ ರಸ್ತೆ ಜಂಕ್ಷನ್‌ನಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಯುಕ್ತ ಮುಚ್ಚಲಾಗಿರುವ ರಸ್ತೆಗೆ ಪರ್ಯಾಯವಾಗಿ ಬಿಟಿಎಂ 16ಮೇನ್ ಜಂಕ್ಷನ್ ಮುಖಾಂತರವಾಗಿ ನೇರವಾಗಿ ಚಲಿಸಿ ಜಯದೇವಾ ಜಂಕ್ಷನ್ ತಲುಪಿ ಮುಕ್ತ ಎಡ ತಿರುವು ಪಡೆದು ಬನ್ನೇರುಘಟ್ಟ ಮುಖ್ಯ ರಸ್ತೆಯನ್ನು ತಲುಪಬಹುದಾಗಿದೆ.
ಬನ್ನೇರುಘಟ್ಟ ಮುಖ್ಯ ರಸ್ತೆಯ ವೆಗಾ ಸಿಟಿ ಮಾಲ್ ಜಂಕ್ಷನ್ನಿಂದ ಜಯದೇವಾ ಜಂಕ್ಷನ್ ಕಡೆಗೆ ಚಲಿಸುವ ವಾಹನಗಳು ಸಾಯಿರಾಂ ಜಂಕ್ಷನ್‌ನಲ್ಲಿ ಜಯದೇವಾ ಫ್ಲೈ ಔವರ್‌ನ ಸರ್ವಿಸ್ ರಸ್ತೆಯಲ್ಲಿ ಚಲಿಸಿ ಔಟರ್ ರಿಂಗ್ ರಸ್ತೆಯನ್ನು ತಲುಪಬಹುದಾಗಿದೆ.
ಸಾಯಿರಾಂ ಜಂಕ್ಷನ್‌ನಲ್ಲಿ ಬನ್ನೇರುಘಟ್ಟ ಮುಖ್ಯರಸ್ತೆಯ ರಸ್ತೆ ವಿಭಜಕವನ್ನು ಮುಚ್ಚಲಾಗಿದ್ದು ಪರ್ಯಾಯವಾಗಿ ಬನ್ನೇರುಘಟ್ಟಿ ಮುಖ್ಯ ರಸ್ತೆಯ ಶಿಲ್ಪಕಲಾ ಜಂಕ್ಷನ್‌ನಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ವೆಸ್ಟ್ ಆಫ್ ಕಾರ್ಡ್ ರೋಡ್ (WOC)ನಲ್ಲಿ ವಿಜಯನಗರದ ಎಂ.ಸಿ. ಸರ್ಕಲ್ ಅಂಡರ್ ಪಾಸ್ ನಿಂದ ಪಿ & ಟಿ ಜಂಕ್ಷನ್ ವರೆಗೆ (ಹೊಸಹಳ್ಳಿ ಮೆಟ್ರೋ) ಸುಮಾರು 270 ಮೀ ಉದ್ದದ ವೈಟ್ ಟಾಪಿಂಗ್ ಕಾಮಗಾರಿ ನಡೆಯಲಿರುವುದರಿಂದ, ಸಾರ್ವಜನಿಕರು ಮತ್ತು ವಾಹನಗಳ ಸವಾರರ ಹಿತದೃಷ್ಟಿಯಿಂದ ಈ ರಸ್ತೆಯಲ್ಲಿ ರಾತ್ರಿ 10:00 ಗಂಟೆಯಿಂದ ವಾಹನಗಳ ಸಂಚಾರವನ್ನು ನಿರ್ಭಂದಿಸಲಾಗಿದೆ. ಪರ್ಯಾಯ ಮಾರ್ಗ ಇಲ್ಲಿದೆ.
ವೆಸ್ಟ್ ಆಫ್ ಕಾರ್ಡ್ ರೋಡ್ನಲ್ಲಿ ಎ.ಎಸ್.ಸಿ. ಕಾಲೇಜು ರಾಜಾಜಿನಗರ ಜಂಕ್ಷನ್ ನಿಂದ ಪಿ & ಟಿ ಜಂಕ್ಷನ್‌ವರೆಗೆ (ರಾಜಾಜಿನಗರ ಕಡೆಯಿಂದ ವಿಜಯನಗರ ಕಡೆಗೆ) ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ವೆಸ್ಟ್ ಆಫ್ ಕಾರ್ಡ್ ರೋಡ್ ಮೂಲಕ ವಿಜಯನಗರ, ಚಂದ್ರಾಲೇಔಟ್, ಮೈಸೂರು ರಸ್ತೆ ಕಡೆಗೆ ಚಲಿಸುವ ಎಲ್ಲಾ ವಾಹನಗಳು ವೆಸ್ಟ್ ಆಫ್ ಕಾರ್ಡ್ ರೋಡ್ ಎ.ಸಿ.ಸಿ. ಕಾಲೇಜು (ರಾಜಾಜಿನಗರ) ಜಂಕ್ಷನ್‌ನಲ್ಲಿ ಸರ್ವಿಸ್ ರಸ್ತೆಗೆ ಸಾಗಿ, ಮುಂದೆ ಎಂ.ಸಿ. ಸರ್ಕಲ್ (ಮಾಗಡಿರಸ್ತೆ ಟೋಲ್‌ಗೇಟ್ ಸರ್ಕಲ್) ಮೂಲಕ ಸರ್ವಿಸ್ ರಸ್ತೆಯ ಮೂಲಕ ಪಿ & ಟಿ ಜಂಕ್ಷನ್ ವರೆಗೆ ಹೋಗಿ ಮತ್ತೆ ವೆಸ್ಟ್ ಆಫ್ ಕಾರ್ಡ್ ರೋಡ್ ಸೇರಿ ಮುಂದೆ ಸಂಚರಿಸಬಹುದಾಗಿದೆ.