ಬೆಂಗಳೂರಿನಲ್ಲಿ ಹೆಚ್ಚಾದ ಜ್ವರ, ಸಾಂಕ್ರಾಮಿಕ ರೋಗ: ವೈರಲ್ ಫಿವರ್ ಪ್ರಕರಣಗಳಲ್ಲಿ ಏರಿಕೆ
ಒಮ್ಮೆ ಮಳೆ ಮತ್ತೊಮ್ಮೆ ಬಿಸಿಲು, ಸೆಖೆ, ಚಳಿ ಜನರನ್ನು ಹೈರಾಣು ಮಾಡಿ ಹಾಕಿದ್ದರೆ, ಸದ್ಯದ ಬೆಂಗಳೂರಿನ ವಾತಾವರಣದಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಸಿಲಿಕಾನ್ ಸಿಟಿ ಜನರಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿರುವುದರ ಜೊತೆ ವೈರಲ್ ಜ್ವರದ ಪ್ರಕರಣಗಳೂ ಹೆಚ್ಚಾಗಿವೆ. ಇಂಥ ಜನರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಏನು? ವೈದ್ಯರು ಹೇಳುವುದೇನು ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಜನವರಿ 22: ಪದೇ ಪದೇ ಬದಲಾಗುತ್ತಿರುವ ವಾತಾವರಣದಿಂದಾಗಿ ಮತ್ತು ಇತರ ಕಾರಣಗಳಿಂದ ಬೆಂಗಳೂರಿನಲ್ಲಿ ಜ್ವರ ಪ್ರಕರಣಗಳು ಹೆಚ್ಚಾಗಿವೆ. ಮಕ್ಕಳಲ್ಲಿ ಜ್ವರ, ಕೆಮ್ಮು, ಗಂಟಲು ನೋವು, ಕೆಮ್ಮು, ಶೀತ, ನೆಗಡಿ ವಾಂತಿ ಪ್ರಕರಣಗಳು ಹೆಚ್ಚಾಗಿದೆ. ಬದಲಾದ ವಾತವರಣ ಹಿನ್ನಲೆ ವೈರಲ್ ಜ್ವರ ಕೂಡಾ ಕಾಣಿಸಿಕೊಳ್ಳುತ್ತಿರುವುದು ಆಸ್ಪತ್ರೆಗಳ ಅಂಕಿಅಂಶಗಳಿಂದ ತಿಳಿದುಬಂದಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಕಳೆದ ಕೆಲವು ವಾರಗಳಿಂದ ಒಂದು ವಾರ ಮಳೆ ಬಂದರೆ, ಮತ್ತೊಂದು ವಾರ ಬಿಸಿಲು, ದಿಢೀರ್ ಮಳೆ, ಸೆಖೆ ಹಾಗೂ ಜನರಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ಹೆಚ್ಚಾಗಿದೆ. ಕ್ಷಣ ಕ್ಷಣಕ್ಕೂ ಬದಲಾಗುವ ವಾತಾವರಣದಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ನಿಗಾವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ವೈದ್ಯರು ಹೇಳಿದ್ದೇನು?
ಮಕ್ಕಳಲ್ಲಿ ನ್ಯುಮೊನಿಯಾ, ಉಸಿರಾಟದ ಸಮಸ್ಯೆ ಹಾಗೂ ವೈರಲ್ ಫಿವರ್ ಹೆಚ್ಚಾಗಿದೆ. ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆ ಹೆಚ್ಚುತ್ತಿದೆ. ಮಕ್ಕಳ ಜೊತೆ ಪೋಷಕರಲ್ಲಿಯೂ ಹೆಚ್ಚು ಆರೋಗ್ಯದ ಸಮಸ್ಯೆ ಕಾಡುತ್ತಿದೆ. ಅತಿಯಾದ ವಾತವರಣ ಬದಲಾವಣೆಯಿಂದ ಮಕ್ಕಳು ಜ್ವರ, ಕೆಮ್ಮಿನಂಥ ಸಮಸ್ಯೆಯಿಂದ ಬಳಲುತ್ತಿದ್ದು ಆಸ್ಪತ್ರೆಗಳ ಒಪಿಡಿಯಲ್ಲಿ ರೋಗಿಗಳ ಏರಿಕೆ ಕಂಡಿದೆ. ಈ ಹಿನ್ನೆಲೆ ಚಳಿಗಾಲದಲ್ಲಿ ಮಕ್ಕಳನ್ನು ಬಹಳ ಜಾಗೃತಿಯಿಂದ ನೋಡಿಕೊಳ್ಳುವಂತೆ ಹಾಗೂ ವೈರಲ್ ಫಿವರಗಳ ಬಗ್ಗೆ ಜಾಗ್ರತೆ ವಹಿಸುವಂತೆ ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆ ವೈದ್ಯ ಡಾ. ಸುರೇಶ್ ಎಚ್ಚರಿಕೆ ನೀಡಿದ್ದಾರೆ.
ವೈದ್ಯರ ಪ್ರಕಾರ ಏನೇನು ಮುನ್ನೆಚ್ಚರಿಕೆ ವಹಿಸಬೇಕು?
ಜನರು ಮನೆ ಸುತ್ತ ಸ್ವಚ್ಛತೆ ಕಾಪಾಡುವುದು ಅಗತ್ಯ. ಜತೆಗೆ ಬಿಸಿ ನೀರನ್ನೇ ಕುಡಿಯುವುದು ಉತ್ತಮ. ಆರೋಗ್ಯಕರ ಆಹಾರ ಸೇವನೆ ಮಾಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಾದ್ಯಂತ ಚುಮುಚುಮು ಚಳಿ, ಬೆಚ್ಚನೆಯ ಬಿಸಿಲು, ಆಹ್ಲಾದಕರ ವಾತಾವರಣ
ಒಟ್ಟಿನಲ್ಲಿ ಮಳೆ, ಬಿಸಿಲು, ಚಳಿಯಿಂದಾಗಿ ಸಂಕಷ್ಟಕ್ಕೀಡಾಗಿರುವ ಬೆಂಗಳೂರು ಜನರಿಗೆ ಇದೀಗ ಆರೋಗ್ಯ ಸಮಸ್ಯೆಗಳು ಮತ್ತೊಂದು ರೀತಿ ತಲೆ ನೋವಾಗಿ ಪರಿಣಮಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ