ಬೆಂಗಳೂರು, ಅಕ್ಟೋಬರ್ 31: ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಚರಣೆ ನಡೆಸಿರುವ ಬೆಂಗಳೂರು ಸಂಚಾರ ಪೊಲೀಸರು ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ, ನೋ ಎಂಟ್ರಿ ಪ್ರದೇಶದಲ್ಲಿ ವಾಹನ ನುಗ್ಗಿಸುವುದು, ದ್ವಿಚಕ್ರ ವಾಹನಗಳಲ್ಲಿ ಟ್ರಿಪಲ್ ರೈಡಿಂಗ್ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ಧ ಟ್ರಾಫಿಕ್ ಪೊಲೀಸರು ಮಂಗಳವಾರ ಕಾರ್ಯಾಚರಣೆ ನಡೆಸಿದ್ದರು. ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ 1,055 ಪ್ರಕರಣಗಳು ದಾಖಲಾಗಿವೆ.
ಇವುಗಳಲ್ಲಿ 812 ವಾಹನ ಚಾಲಕರ ವಿರುದ್ಧ ಏಕಮುಖ ಸಂಚಾರ ಇರುವಲ್ಲಿ ನಿಯಮ ಉಲ್ಲಂಘಿಸಿ ಎದುರಿನಿಂದ ಬಂದ ಮತ್ತು ನಿರ್ಬಂಧಿತ ರಸ್ತೆಗಳಲ್ಲಿ ವಾಹನ ಚಲಾಯಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ. 127 ಚಾಲಕರಿಗೆ ಫುಟ್‌ಪಾತ್‌ನಲ್ಲಿ ವಾಹನ ನಿಲುಗಡೆ ಮಾಡಿದ್ದಕ್ಕಾಗಿ ಒಟ್ಟು 64,000 ರೂ. ದಂಡ ವಿಧಿಸಲಾಗಿದೆ.
ಬೆಂಗಳೂರಿನಲ್ಲಿ ರೋಡ್ ರೇಜ್ ಹಾವಳಿ ಇನ್ನೂ ಕಡಿಮೆಯಾಗಿಲ್ಲ. ದೀಪಾವಳಿ ಶಾಪಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ದಂಪತಿಯ ಕಾರು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ ಘಟನೆ ಬುಧವಾರ ರಾತ್ರಿ 9.30ಕ್ಕೆ ಕಸವನಹಳ್ಳಿ ಅಮೃತ ಕಾಲೇಜ್ ಬಳಿ ನಡೆದಿದೆ. ಮಕ್ಕಳ ಜೊತೆ ದಂಪತಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪುಂಡರು ಆವಾಜ್ ಹಾಕಿದ್ದಾರೆ. ಕಾರು ಅಡ್ಡಗಟ್ಟಿ ಗ್ಲಾಸ್ ಇಳಿಸುವಂತೆ ಆವಾಜ್ ಹಾಕಿದ್ದಾರೆ. ಈ ವೇಳೆ ಹೆದರಿದ ಅನೂಪ್ ಜಾರ್ಜ್, ಜಿಸ್ ದಂಪತಿ ಕಾರಿನ ಗ್ಲಾಸು ತೆರೆದಿಲ್ಲ. ಇದರಿಂದ ಸಿಟ್ಟಿಗೆದ್ದ ಪುಂಡರು ಕಾರನ್ನು ಫಾಲೋ ಮಾಡಿ ಕಲ್ಲು ತೂರಿ ಪರಾರಿಯಾಗಿದ್ದಾರೆ.
ಬಳ್ಳಾರಿ ರಸ್ತೆಯ ವಿಮಾನ ನಿಲ್ದಾಣದ ಟೋಲ್ ಬೂತ್ ಬಳಿ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಚಿಕ್ಕಬಳ್ಳಾಪುರದ ವಕೀಲರೊಬ್ಬರು ಮೃತಪಟ್ಟಿದ್ದಾರೆ. ಕನ್ನಮಂಗಲದ ಶಾಲೆಯೊಂದರ ಬಳಿ ರಸ್ತೆಯ ಎಡಭಾಗದಲ್ಲಿರುವ ಲೋಹದ ಗ್ರಿಲ್ ಬ್ಯಾರಿಕೇಡ್‌ಗಳಿಗೆ ಬೈಕ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು 25 ವರ್ಷದ ರಾಹುಲ್ ಮೃತಪಟ್ಟಿದ್ದಾರೆ ಎಂದು ದೇವನಹಳ್ಳಿ ಸಂಚಾರ ಪೊಲೀಸರು ತಿಳಿಸಿದ್ದಾರೆ.
ವಿಡಿಯೋ ನೋಡಿ: ಬೆಂಗಳೂರಿನಲ್ಲಿ ರೋಡ್ ರೇಜ್ಗೆ ಬೆಚ್ಚಿಬಿದ್ದ ದಂಪತಿ
ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡಲು ರಾಹುಲ್ ಯತ್ನಿಸಿದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಹುಲ್ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ವಕೀಲರಾಗಿ ಉದ್ಯೋಗದಲ್ಲಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ