ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ (Traffic Fine) ಬಾಕಿ ಉಳಿಸಿಕೊಂಡವರಿಗೆ ಕರ್ನಾಟಕ ಸರ್ಕಾರವು (Karnataka Government) ಶೇ 50 ರಷ್ಟು ರಿಯಾಯಿತಿಯನ್ನು ಘೋಷಿಸಿದ ನಂತರ ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಗುರುವಾರ (ಜು.6) ಮೊದಲ ದಿನ 22.49 ಲಕ್ಷ ರೂಪಾಯಿ ದಂಡವನ್ನು ಸಂಗ್ರಹಿಸಿದ್ದಾರೆ. ಫೆಬ್ರವರಿ 11, 2023 ರಂದು ಅಥವಾ ಅದಕ್ಕೂ ಮೊದಲು ದಾಖಲಾದ ಪ್ರಕರಣಗಳಿಗೆ ಸರ್ಕಾರವು ಬುಧವಾರ ರಿಯಾಯಿತಿಯನ್ನು ಘೋಷಿಸಿತ್ತು. ಬಾಕಿ ಇರುವ ದಂಡವನ್ನು ಪಾವತಿಸಲು ಸೆಪ್ಟೆಂಬರ್ 9ರ ಗಡುವು ನೀಡಿದೆ.
ನಿಯಮ ಉಲ್ಲಂಘಿಸಿದವರಿಂದ 22,49,600 ರೂಪಾಯಿ ದಂಡ ವಸೂಲಿ ಮಾಡಲಾಗಿದ್ದು, 7,216 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ನಿಯಮ ಉಲ್ಲಂಘಿಸಿದವರು ವೈಯಕ್ತಿಕ ಡಿಜಿಟಲ್ ಸಹಾಯಕ (PDA), ಕರ್ನಾಟಕ ರಾಜ್ಯ ಪೊಲೀಸ್ (KSP) ಮೊಬೈಲ್ ಅಪ್ಲಿಕೇಶನ್, ಆಟೊಮೇಷನ್ ಕೇಂದ್ರಗಳು ಮತ್ತು ಬೆಂಗಳೂರು ಒನ್ ಮೂಲಕ ಜನರು ಬಾಕಿ ಪಾವತಿಸಿದ್ದಾರೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru News: ನಗರವಾಸಿಗಳಿಗಾಗಿ ಬಿಬಿಎಂಪಿ ಪರಿಚಯಿಸಿದೆ ಕ್ಯೂಆರ್ ಕೋಡ್ ಸ್ಕ್ಯಾನರ್; ಏನಿದರ ವಿಶೇಷತೆ ಇಲ್ಲಿದೆ ಮಾಹಿತಿ
ಕರ್ನಾಟಕ ಸರ್ಕಾರವು ಸಂಚಾರ ನಿಯಮ ಉಲ್ಲಂಘಿಸಿದವರಿಗೆ ರಿಯಾಯಿತಿಯನ್ನು ನೀಡುತ್ತಿರುವುದು ಇದು ಮೂರನೇ ಬಾರಿ ಆಗಿದೆ. ಈ ರಿಯಾಯಿತಿಯನ್ನು ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ಈ ವರ್ಷದ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಘೋಷಿಸಿತ್ತು. ಇದರಿಂದ ಬಾಕಿ ಉಳಿದಿರುವ 120 ಕೋಟಿ ರೂ. ದಂಡ ಸಂಗ್ರಹವಾಗಿತ್ತು. ಬಳಿಕ ಮಾರ್ಚ್‌ನಲ್ಲಿ ಮತ್ತೆ 15 ದಿನಗಳ ಕಾಲ ರಿಯಾಯಿತಿ ನೀಡಲಾಗಿತ್ತು.
ಜುಲೈ 6 ಮತ್ತು ಸೆಪ್ಟೆಂಬರ್ 9 ರ ನಡುವೆ ಬಾಕಿಯನ್ನು ಪಾವತಿಸಬಹುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 080-22942883 ಅಥವಾ 080-22943381 ಅನ್ನು ಸಂಪರ್ಕಿಸಬಹುದು ಎಂದೂ ಅವರು ಹೇಳಿದ್ದಾರೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:35 pm, Fri, 7 July 23