Bengaluru Water Crisis: ಬೆಂಗಳೂರಿನಲ್ಲಿ ಟ್ಯಾಂಕರ್ ಕಳ್ಳಾಟಕ್ಕೆ ಬ್ರೇಕ್, ಕೊನೆಗೂ ಟ್ಯಾಂಕರ್ ನೀರಿಗೆ ದರ ಫಿಕ್ಸ್: ಇಲ್ಲಿದೆ ದರ ವಿವರ

| Updated By: Ganapathi Sharma

Updated on: Mar 07, 2024 | 12:46 PM

Tanker Water Rate in Bengaluru: ಬೆಂಗಳೂರು ನೀರಿನ ಬಿಕ್ಕಟ್ಟು ತೀವ್ರಗೊಂಡಿರುವ ಸಂದರ್ಭದಲ್ಲಿ ಟ್ಯಾಂಕರ್ ಮಾಫಿಯಾಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಪ್ರತಿ ಟ್ಯಾಂಕರ್ ನೀರಿಗೆ ಸರಬರಾಜು ಮಾಡಲಿರುವ ದೂರದ ಆಧಾರದಲ್ಲಿ ದರ ನಿಗದಿಪಡಿಸಿ ಬೆಂಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಟ್ಯಾಂಕರ್​ ನೀರಿನ ದರ ವಿವರ ಇಲ್ಲಿದೆ.

Bengaluru Water Crisis: ಬೆಂಗಳೂರಿನಲ್ಲಿ ಟ್ಯಾಂಕರ್ ಕಳ್ಳಾಟಕ್ಕೆ ಬ್ರೇಕ್, ಕೊನೆಗೂ ಟ್ಯಾಂಕರ್ ನೀರಿಗೆ ದರ ಫಿಕ್ಸ್: ಇಲ್ಲಿದೆ ದರ ವಿವರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮಾರ್ಚ್​ 7: ಬೆಂಗಳೂರು ನಗರದಲ್ಲಿ ನೀರಿನ ಬಿಕ್ಕಟ್ಟು (Bengaluru Water Crisis) ತೀವ್ರಗೊಂಡಿರುವ ಮಧ್ಯೆಯೇ ಟ್ಯಾಂಕರ್​ಗಳು (Water Tanker) ದುಬಾರಿ ದರ ವಸೂಲಿ ಮಾಡುತ್ತಿರುವ ಬಗ್ಗೆಯೂ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಇತ್ತೀಚೆಗೆ ನೀರಿನ ಸಮಸ್ಯೆಗೆ ಸಂಬಂಧಿಸಿ ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಸಹ ಟ್ಯಾಂಕರ್ ಮಾಫಿಯಾ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದರು. ಇದೀಗ ಕೊನೆಗೂ ಟ್ಯಾಂಕರ್ ನೀರಿಗೆ ದರ ನಿಗದಿಪಡಿಸಿ ಬೆಂಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಟ್ಯಾಂಕರ್ ಮಾಲೀಕರ ಜೊತೆ ಮೂರ್ನಾಲ್ಕು ಬಾರಿ ಸಭೆ ನಡೆಸಿದ ನಂತರ ಜಿಲ್ಲಾಡಳಿತ ಬೆಲೆ ನಿಗದಿ ಮಾಡಿ ಆದೇಶ ಹೊರಡಿಸಿದೆ.

ಟ್ಯಾಂಕರ್ ನೀರಿನ ದರ ವಿವರ ಇಲ್ಲಿದೆ

  • 6 ಸಾವಿರ ಲೀಟರ್ ಟ್ಯಾಂಕರ್​ಗೆ 600 ರೂ. ದರ ನಿಗದಿ. ಇದು 5 ಕಿಲೋ ಮೀಟರ್ ಒಳಗಡೆಗೆ ಮಾತ್ರ ಅನ್ವಯವಾಗಲಿದೆ.
  • 6 ಸಾವಿರ ಲೀಟರ್ ಟ್ಯಾಂಕರ್ ಗೆ 750 ರೂ. ದರ ನಿಗದಿ. ಇದು 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅನ್ವಯವಾಗಲಿದೆ.
  • 8 ಸಾವಿರ ಲೀಟರ್ ಟ್ಯಾಂಕರ್​ಗೆ 700 ರೂ. ದರ ನಿಗದಿ‌‌ ಮಾಡಲಾಗಿದ್ದು, ಇದು 5 ಕಿಲೋ ಮೀಟರ್ ಒಳಗೆ ಅನ್ವಯವಾಗಲಿದೆ.
  • 8 ಸಾವಿರ ಲೀಟರ್​ಗೆ 850 ರೂ. ದರ ನಿಗದಿ ಮಾಡಲಾಗಿದ್ದು, 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ದರ ಪಡೆಯಬಹುದಾಗಿದೆ.
  • 5 ಕಿಲೋ ಮೀಟರ್ ವ್ಯಾಪ್ತಿಗೆ 1,200 ಲೀಟರ್ ಟ್ಯಾಂಕರ್​​ಗೆ 1000 ರೂ. ದರ ನಿಗದಿ ಮಾಡಲಾಗಿದೆ.
  • 1200 ಲೀಟರ್ ಟ್ಯಾಂಕರ್​​​ಗೆ 1200 ರೂ. ದರ ಫಿಕ್ಸ್ ಮಾಡಲಾಗಿದ್ದು 10 ಕಿಲೋ ಮೀಟರ್ ವ್ಯಾಪ್ತಿಗೆ ಅನ್ವಯವಾಗಲಿದೆ.

ಜಿಎಸ್​​ಟಿ ಸೇರಿಸಿ ಈ ದರ ಫಿಕ್ಸ್ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ತಿಂಗಳ ಬಾಡಿಗೆ ಒಪ್ಪಿಕೊಳ್ಳುವವರಿಗೆ 5 ಕಿಲೋ ಮೀಟರ್​​​ಗೆ 510 ರೂ. ನಿಗದಿಪಡಲಾಗಿದೆ. 10 ಕಿಲೋ ಮೀಟರ್ ಹೋದರೆ 650 ರೂ. ದರ ಫಿಕ್ಸ್ ಮಾಡಲಾಗಿದೆ.

ಟ್ಯಾಂಕರ್​ ಮಾಫಿಯಾಕ್ಕೆ ಕಡಿವಾಣ ಹಾಕುವ ಸಂಬಂಧ ಇತ್ತೀಚೆಗಷ್ಟೇ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಆ ಸಭೆಯಲ್ಲಿ, ನೀರಿನ ಟ್ಯಾಂಕರ್‌ಗಳ ಮಾಲೀಕರು ಇಂದಿನ (ಮಾರ್ಚ್​ 7) ಗಡುವಿನ ಒಳಗೆ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ದರ ನಿಗದಿ ಸಂಬಂಧ ಈ ಸೂಚನೆ ನೀಡಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಂಡು ಕೇಳರಿಯದ ನೀರಿನ ಬಿಕ್ಕಟ್ಟು, ಇಲ್ಲಿವೆ ಪ್ರಮುಖ ಕಾರಣಗಳು

ಬೆಂಗಳೂರು ನಗರದಲ್ಲಿ ಒಟ್ಟು 3,500 ನೀರಿನ ಟ್ಯಾಂಕರ್‌ಗಳ ಪೈಕಿ ಶೇ 10ರಷ್ಟು ಅಂದರೆ 219 ಟ್ಯಾಂಕರ್‌ಗಳು ಮಾತ್ರ ನೋಂದಣಿಯಾಗಿವೆ. ಗಡುವಿನೊಳಗೆ ನೋಂದಣಿ ಮಾಡದಿದ್ದರೆ ಸರ್ಕಾರ ಅವುಗಳನ್ನು ವಶಪಡಿಸಿಕೊಳ್ಳಲಿದೆ. ನೀರು ಯಾವುದೇ ವ್ಯಕ್ತಿಯ ಸ್ವತ್ತಲ್ಲ, ಅದು ಸರ್ಕಾರಕ್ಕೆ ಸೇರಿದ ಸಂಪನ್ಮೂಲವಾಗಿದೆ. ಜಲಮೂಲಗಳ ಮೇಲೆ ಹಿಡಿತ ಸಾಧಿಸುವ ಹಕ್ಕು ಸರ್ಕಾರಕ್ಕಿದೆ ಎಂದು ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:46 pm, Thu, 7 March 24