Bengaluru Weather Today: ವಿಪರೀತ ಚಳಿಗೆ ನಡುಗಿದ ಬೆಂಗಳೂರು; ದಶಕದಲ್ಲೇ ಇಂದು ಅತಿ ಕಡಿಮೆ ತಾಪಮಾನ ದಾಖಲು

| Updated By: ಸುಷ್ಮಾ ಚಕ್ರೆ

Updated on: Nov 21, 2022 | 2:30 PM

Weather Forecast: 2012ರ ನವೆಂಬರ್ 21ರಂದು ಬೆಂಗಳೂರಿನಲ್ಲಿ 13.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಅದಾದ ಬಳಿಕ ನವೆಂಬರ್ ತಿಂಗಳಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನ ಇದಾಗಿದೆ.

Bengaluru Weather Today: ವಿಪರೀತ ಚಳಿಗೆ ನಡುಗಿದ ಬೆಂಗಳೂರು; ದಶಕದಲ್ಲೇ ಇಂದು ಅತಿ ಕಡಿಮೆ ತಾಪಮಾನ ದಾಖಲು
ಬೆಂಗಳೂರು ಹವಾಮಾನ
Follow us on

ಬೆಂಗಳೂರು: ಭಾರತದ ಐಟಿ ಸಿಟಿ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ (Bangalore Weather) ಇಂದು (ಸೋಮವಾರ) ವಿಪರೀತ ಚಳಿ ಉಂಟಾಗಿತ್ತು. ಚುಮುಚುಮು ಚಳಿಗೆ ತತ್ತರಿಸಿದ ಬೆಂಗಳೂರಿನಲ್ಲಿ ಮುಂಜಾನೆ ಮಂಜು ಕವಿದಿತ್ತು, ಗಂಟೆ ಹತ್ತಾದರೂ ಹಲವೆಡೆ ಸೂರ್ಯನ ದರ್ಶನವೇ ಆಗಿರಲಿಲ್ಲ. ಗಿರಿಧಾಮಗಳಲ್ಲಿ ಇರುವಷ್ಟೇ ತಾಪಮಾನ ಬೆಂಗಳೂರಿನಲ್ಲೂ ದಾಖಲಾಗಿತ್ತು. ಬೆಂಗಳೂರಿನಲ್ಲಿ ಇಂದು ಕನಿಷ್ಠ 13.9 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ. ಅಂದಹಾಗೆ, ಈ ತಾಪಮಾನ ಕಳೆದ 1 ದಶಕದಲ್ಲಿ ನವೆಂಬರ್‌ನಲ್ಲಿ ದಾಖಲಾದ ಅತಿ ಕನಿಷ್ಟ ತಾಪಮಾನವಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಇಂದು ಉದ್ಯಾನನಗರಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25.2 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 13.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದರೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಇದನ್ನೂ ಓದಿ: Karnataka Rain: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಬೆಂಗಳೂರು, ಕರಾವಳಿ ಸೇರಿ ಹಲವೆಡೆ ನಾಳೆಯಿಂದ ಭಾರೀ ಮಳೆ

2012ರ ನವೆಂಬರ್ 21ರಂದು ಬೆಂಗಳೂರಿನಲ್ಲಿ 13.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಅದಾದ ಬಳಿಕ ನವೆಂಬರ್ ತಿಂಗಳಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನ ಇದಾಗಿದೆ. 1967ರ ನವೆಂಬರ್ 15ರಂದು ಬೆಂಗಳೂರಿನಲ್ಲಿ 9.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಉಂಟಾಗುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿತ್ತು.

ಒಂದೆಡೆ ಚಳಿಯಾದರೆ ಇನ್ನೊಂದೆಡೆ ನಾಳೆಯಿಂದ ಬೆಂಗಳೂರಿನಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ಮತ್ತೊಮ್ಮೆ ಸಿಲಿಕಾನ್ ಸಿಟಿಯ ಜನರು ಮಳೆ ಆರ್ಭಟಕ್ಕೆ ಸಾಕ್ಷಿಯಾಗಲಿದ್ದಾರೆ. ಬೆಂಗಳೂರಿನಲ್ಲಿ ನವೆಂಬರ್ 24 ರವರೆಗೆ ಲಘು ಮಳೆ ಮುಂದುವರಿಯುವ ನಿರೀಕ್ಷೆಯಿದೆ. ಈ ದಿನಗಳಲ್ಲಿ ಕನಿಷ್ಠ ತಾಪಮಾನ 18ರಿಂದ 19 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 25ರಿಂದ 26 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ