ಫೋನ್ ಪೇ, ಗೂಗಲ್​ ಪೇಯಲ್ಲೇ ಲಂಚ ತಗೊಳ್ತಾರೆ ಬೆಂಗಳೂರು ಟ್ರಾಫಿಕ್ ಪೊಲೀಸ್!

| Updated By: Ganapathi Sharma

Updated on: Feb 26, 2025 | 11:15 AM

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಸಂಚಾರ ಪೊಲೀಸರು ಫೋನ್‌ಪೇ ಮತ್ತು ಗೂಗಲ್‌ಪೇ ಮೂಲಕ ಲಂಚ ಪಡೆಯುತ್ತಿರುವ ಆರೋಪ ಕೇಳಿಬಂದಿದೆ. ಒಬ್ಬ ವಾಹನ ಸವಾರ, ಟ್ರಾಫಿಕ್ ನಿಯಮ ಉಲ್ಲಂಘನೆಗೆ 500 ರೂಪಾಯಿಗಳನ್ನು ಫೋನ್‌ಪೇ ಮೂಲಕ ಪೊಲೀಸರಿಗೆ ಪಾವತಿಸಲಾಗಿದೆ ಎಂದು ದೂರಿದ್ದು, ಎಸಿಪಿಗೆ ಮೇಲ್ ಮಾಡಿದ್ದಾರೆ. ಈ ಘಟನೆಯ ಬಗ್ಗೆ ಎಸಿಪಿ ತನಿಖೆಗೆ ಆದೇಶಿಸಿದ್ದಾರೆ.

ಫೋನ್ ಪೇ, ಗೂಗಲ್​ ಪೇಯಲ್ಲೇ ಲಂಚ ತಗೊಳ್ತಾರೆ ಬೆಂಗಳೂರು ಟ್ರಾಫಿಕ್ ಪೊಲೀಸ್!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಫೆಬ್ರವರಿ 26: ಬೆಂಗಳೂರು ಸಂಚಾರ ಪೊಲೀಸರ ವಿರುದ್ಧ ಲಂಚದ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಆದರೆ, ಈ ಬಾರಿ ಬೆಂಗಳೂರು ಟ್ರಾಫಿಕ್ ಪೊಲೀಸರ ವಿರುದ್ಧದ ಆರೋಪ ಕೇಳಿದರೆ ಅಚ್ಚರಿಯಾಗುವುದಂತೂ ಗ್ಯಾರಂಟಿ! ಏಕೆಂದರೆ, ಫೋನ್ ಪೇ, ಗೂಗಲ್​ ಪೇಯಲ್ಲೇ ಅವರು ಲಂಚ ಪಡೆಯುತ್ತಿರುವುದು ಬಯಲಾಗಿದೆ.

ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡ ವಿಧಿಸುವ ನೆಪದಲ್ಲಿ ಬೆಂಗಳೂರಿನ ವೈಟ್​ಫೀಲ್ಡ್ ಸಂಚಾರ ಪೊಲೀಸರು ಪೋನ್ ಪೇ, ಗೂಗಲ್ ಪೇ ಮೂಲಕ ತಮ್ಮ ವೈಯಕ್ತಿಕ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಫೋನ್​ ಪೇ ಮೂಲಕ 500 ರೂ. ವರ್ಗಾಯಿಸಿಕೊಂಡಿದ್ದ ಕಾನ್ಸ್​ಟೇಬಲ್

ಫೆಬ್ರವರಿ 21 ರಂದು ವಾಹನ ಸವಾರರೊಬ್ಬರು ವರ್ತೂರು ಕರೆ ಬಳಿ ಓನ್ ವೇಯಲ್ಲಿ ಬಂದಿದ್ದರು. ರಾಚಮಲ್ಲ‌ ಎಂಬಾತ ಓನ್ ವೇಯಲ್ಲಿ ಬಂದು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್​ಟೇಬಲ್ ಮಂಜುನಾಥ್ ವಾಹನವನ್ನು ಅಡ್ಡ ಹಾಕಿ ನಿಲ್ಲಿಸಿದರು. ವಾಹನ ಸವಾರ 1500 ರೂಪಾಯಿ ದಂಡ ಪಾವತಿಸಲು ಸಿದ್ಧರಾಗಿದ್ದರು. ಆದರೆ, ವಾಹನ ಸವಾರನಿಗೆ ದಂಡದ ರಸೀದಿ ನೀಡಲು ಮಂಜುನಾಥ್ ಸಿದ್ಧರಿರಲಿಲ್ಲ. ಕೊನೆಗೆ 500 ರೂಪಾಯಿ ಫೋನ್ ಪೇ ಮಾಡಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ.

ವೈಟ್ ಫೀಲ್ಡ್ ಸಂಚಾರಿ ಠಾಣೆಯಲ್ಲಿ ದೂರು ದಾಖಲು

ವೈಟ್​ಫೀಲ್ಡ್ ಸಂಚಾರ ಪೊಲೀಸರ ಲಂಚಾವಾತರದ ಬಗ್ಗೆ ವಾಹನ ಸವಾರ ರಾಚಮಲ್ಲ ಎಸಿಪಿಗೆ ಇ-ಮೇಲ್ ಮೂಲಕ ದೂರು ನೀಡಿದ್ದಾರೆ. ಕಾನ್ಸ್​ಟೇಬಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಚಮಲ್ಲ ದೂರಿನಲ್ಲಿ ಆಗ್ರಹಿಸಿದ್ದಾರೆ. ಇ ಮೇಲ್ ಮೂಲಕ ಎಸಿಪಿ ರಮೇಶ್ ದೂರು ಸ್ವೀಕಾರ ಮಾಡಿದ್ದು, ತನಿಖೆ ನಡೆಸಿ ವರದಿ ನೀಡುವಂತೆ ವೈಟ್ ಫೀಲ್ಡ್ ಸಂಚಾರಿ ಠಾಣೆ ಇನ್ಸ್​​ಪೆಕ್ಟರ್​​ಗೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ಕೆಲವು ಪ್ರದೇಶಗಳಲ್ಲಿ ಸಂಚಾರ ಪೊಲೀಸರೂ ಅದರ ಲಾಭ ಪಡೆದು ಲಂಚ ಪಡೆಯುತ್ತಾರೆ.

ಇದನ್ನೂ ಓದಿ: ಬೆಂಗಳೂರಿನ ಟ್ರಾಫಿಕ್​ ನಿಯಂತ್ರಣಕ್ಕೆ AI ಆಧಾರಿತ ಸಿಗ್ನಲ್​: 125 ಜಂಕ್ಷನ್​ಗಳಲ್ಲಿ ಅಳವಡಿಕೆ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರಿಗೆ 1.6 ಲಕ್ಷ ರೂ. ದಂಡ ವಿಧಿಸಿದ ಬಗ್ಗೆ ಕೆಲವು ದಿನಗಳ ಹಿಂದೆ ಸುದ್ದಿಯಾಗಿತ್ತು. ಕೊನೆಗೆ ಅವರು ದಂಡದ ಮೊತ್ತ ವತಿಸಿದ್ದರು. ಸ್ಕೂಟರ್ ಚಾಲಕ ದಂಡದ ಮೊತ್ತವನ್ನು ಪಾವತಿಸಿದ ನಂತರ, ಪೊಲೀಸರು ವಶಪಡಿಸಿಕೊಂಡಿದ್ದ ವಾಹನವನ್ನು ಹಿಂದಿರುಗಿಸಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಿದ್ದರು. ದಂಡದ ಮೊತ್ತದ ರಶೀದಿ ಸುಮಾರ್ 20 ಮೀಟರ್‌ಗಳಷ್ಟು ಉದ್ದ ಇದ್ದು ಗಮನ ಸೆಳೆದಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ