
ಬೆಂಗಳೂರು, ಜನವರಿ 14: ನಗರದಲ್ಲಿ ಕಳೆದ ಎರಡು ವಾರದಿಂದ ಚಳಿ ಪ್ರಮಾಣ ಹೆಚ್ಚಾಗಿದ್ದು, ಅತಿಯಾದ ಚಳಿ ಜನರಲ್ಲಿ ಸಾಂಕ್ರಾಮಿಕ ರೋಗಗಳ ಜೊತೆ ಐಎಲ್ಐ ಸಾರಿ ವೈರಲ್ ಫ್ಲೂ ಕೇಸಗಳ ಸಂಖ್ಯೆ ಹೆಚ್ಚಾಗಿವೆ. ಅತಿಯಾದ ಚಳಿಯಿಂದ ರಾಜ್ಯದಲ್ಲಿ ಕಳೆದೊಂದು ವಾರದಿಂದ ನಿರಂತರ ಕೆಮ್ಮು, ನೆಗಡಿ, ಜ್ವರ ಹಾಗೂ ಸಾರಿ ಐಎಲ್ಐ (SARI-ILI) ಕೇಸ್ಗಳು ಹೆಚ್ಚಾಗಿವೆ. ಕಳೆದ ಒಂದು ವಾರದಲ್ಲಿ ಜನರಲ್ಲಿ 135 SARI , 35 ILI ಹಾಗೂ 3327 ಅಕ್ಯೂಟ್ ಡೈಯಾರಿಯಲ್ ಡಿಸೀಜ್ಗಳು ಕಂಡುಬಂದಿದ್ದು, ಆರೋಗ್ಯ ಇಲಾಖೆ ನಿಗಾವಹಿಸಿದೆ.
ರಾಜ್ಯದಲ್ಲಿ ಹವಮಾನ ಸಮಸ್ಯೆಯಿಂದ ಸೀಸನಲ್ ಫ್ಲೂ ಭೀತಿ ಇದ್ದು, ನಗರವಾಸಿಗಳಲ್ಲಿ ಜ್ವರ, ಕೆಮ್ಮು, ನೆಗಡಿ, ಹಸಿವು ಆಗದಿರುವುದು, ಮೈಕೈ ನೋವು, ಶೀತ, ಒಣ ಕೆಮ್ಮಿನಂತಹ ಲಕ್ಷಣಗಳು ಕಂಡುಬರುತ್ತಿವೆ. ಈ ಗುಣಲಕ್ಷಣಗಳು ಕಂಡುಬಂದಲ್ಲಿ ಗರ್ಭಿಣಿಯರು, ಹೈ ರಿಸ್ಕ್ ರೋಗಿಗಳು ಸೂಕ್ತ ಲಸಿಕೆ ಪಡೆಯುವಂತೆ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಚಳಿಯ ಜೊತೆಗೆ ಬದಲಾಗುತ್ತಿರುವ ಹವಮಾನ ಹಿನ್ನಲೆ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಕೆಸಿ ಜನರಲ್ ಆಸ್ಪತ್ರೆಯ ವೈದ್ಯ ಡಾ ಮುರಳೀಧರ್ ಎಚ್ಚರಿಸಿದ್ದಾರೆ. ಚಳಿಗಾಲ ಮುಗಿಯುವವರೆಗೂ ಹೊರಗಡೆಯ ಆಹಾರ ಎಣ್ಣೆಯುಕ್ತ ತಿಂಡಿ ಹಾಗೂ ಅತಿಯಾದ ಸಿಹಿ ತಿನಿಸು ತಿನ್ನದೆ, ಮನೆಯ ಊಟವನ್ನೇ ಹೆಚ್ಚಾಗಿ ಸೇವಿಸುವಂತೆ ತಿಳಿಸಿದ್ದಾರೆ.
ಕಳೆದ ವರ್ಷ 1,79,028 ADD (Acute Diarrheal Disease) ಕೇಸ್ಗಳು ಕಂಡುಬಂದಿದ್ದವು. ಆದರೆ ಈ ವರ್ಷ ಕೇವಲ ಕಳೆದ ಐದು ದಿನದಲ್ಲಿ 3327 ಕೇಸ್ಗಳು ಕಂಡುಬಂದಿವೆ. ಕಳೆದ ವರ್ಷ 9400 ಐಎಲ್ಐ (Influenza-like illness) ಕೇಸ್ಗಳಿದ್ದರೆ, ಈ ಬಾರಿ ಕೇವಲ 5 ದಿನಗಳಲ್ಲಿ 135 ಕೇಸ್ಗಳು ಕಂಡುಬಂದಿವೆ. ಕಳೆದ ಐದು ದಿನದಲ್ಲಿ 25 ಸಾರಿ (Severe Acute Respiratory Infections) ಕೇಸ್ಗಳು ಬೆಳಕಿಗೆ ಬಂದಿದ್ದು, ಕಳೆದ ವರ್ಷ 4479 ಕೇಸ್ಗಳು ಪತ್ತೆಯಾಗಿದ್ದವು. ಹೀಗಾಗಿ ಜನರು ಚಳಿಗಾಲ ಮುಗಿಯುವವರೆಗೂ ಸ್ವಚ್ಛತೆ ಕಾಪಾಡುವುದು, ಬಿಸಿ ನೀರು ಕುಡಿಯುವುದರೊಂದಿಗೆ ಆರೋಗ್ಯಕರ ಆಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.