ಬೆಂಗಳೂರು, ಸೆ.26: ಇತ್ತೀಚೆಗೆ ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ (Social Media) ಲವ್ ಜಿಹಾದ್ (Love Jihad) ಆರೋಪ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿ ಪೋಸ್ಟ್ ಹಾಕಿದ್ದರು. ಇದನ್ನು ಗಮನಿಸಿದ ನಗರ ಪೊಲೀಸರು (Bengaluru Police) ಯುವತಿಯಿಂದ ಹೇಳಿಕೆ ಪಡೆದು ಕಾಶ್ಮೀರ್ ಮೂಲದ ಯುವಕನ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದರು. ಸದ್ಯ ಈಗ ಘಟನೆಯ ಸತ್ಯಾಂಶ ಬಯಲಾಗಿದೆ. ಈ ಪ್ರಕರಣದಲ್ಲಿ ಲವ್ ಜಿಹಾದ್ ಆರೋಪ ಸುಳ್ಳು ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
37 ವರ್ಷದ ಬೆಂಗಳೂರು ಮಹಿಳೆಯ ‘ಲವ್ ಜಿಹಾದ್’ ಆರೋಪದ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಪೊಲೀಸರು, ಈ ಪ್ರಕರಣದಲ್ಲಿ ಯಾವುದೇ ರೀತಿಯಲ್ಲೂ ಲವ್ ಜಿಹಾದ್ ಆಯಾಮ ಕಂಡು ಬಂದಿಲ್ಲ. ಕಾಶ್ಮೀರ್ ಯುವಕ ಹಾಗೂ ಬೆಂಗಳೂರು ಯುವತಿ ಇಬ್ಬರೂ ಎರಡು ವರ್ಷದ ಹಿಂದೆಯೇ ಬ್ರೇಕ್ ಆಪ್ ಆಗಿದ್ದಾರೆ. ಸದ್ಯ ಈಗ ಯುವಕ ಬೇರೆ ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ ಎಂದು ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರು ಯುವತಿ ಲವ್ ಜಿಹಾದ್ ಆರೋಪ ಮಾಡಿದ್ದಾರೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಲವ್ ಜಿಹಾದ್ ಆರೋಪ ಮಾಡಿ ಯುವತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ ಪೊಲೀಸರು ಯುವತಿಯನ್ನು ಪತ್ತೆ ಮಾಡಿ ಹೇಳಿಕೆ ಪಡೆದು ಯುವಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಆರಂಭಿಸಿದ್ದ ಪೊಲೀಸರು ಕಳೆದ ವಾರ ಕಾಶ್ಮೀರದ ಶ್ರೀನಗರದ ಜಕುರಾ ಪ್ರದೇಶದ ಮೊಜಿಫ್ ಅಶ್ರಫ್ ಬೇಗ್ (32) ಎಂಬಾತನನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದರು. ಬಳಿಕ ಭಾರತೀಯ ದಂಡ ಸಂಹಿತೆಯಡಿ ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ, ಕ್ರಿಮಿನಲ್ ಬೆದರಿಕೆ ಮತ್ತು ವಂಚನೆಗೆ ಸಂಬಂಧಿಸಿದ ಆರೋಪಗಳು ಹಾಗೂ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕಾಯಿದೆಯಡಿ ಅಕ್ರಮ ಮತಾಂತರಕ್ಕೆ ಯತ್ನಿಸಿದ ಆರೋಪದಡಿ ಅಶ್ರಫ್ ಬೇಗ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ: ಮಣಿಪುರ: ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಹತ್ಯೆ, ಶವದ ಚಿತ್ರಗಳು ವೈರಲ್
ಸದ್ಯ ತನಿಖೆ ನಂತರ ಈ ಪ್ರಕರಣದಲ್ಲಿ ಯಾವುದೇ ‘ಲವ್ ಜಿಹಾದ್’ ಆಯಾಮವಿಲ್ಲ. ಆದ್ದರಿಂದ ನಾವು ಆರೋಪಗಳನ್ನು ಕೈಬಿಡುತ್ತಿದ್ದೇವೆ. ಆದರೆ ಅಶ್ರಫ್ ಬೇಗ್ ವಿರುದ್ಧ ಅತ್ಯಾಚಾರ, ವಂಚನೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳು ಇರಲಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಯುವತಿ ಹಾಗೂ ಯುವಕ ಇಬ್ಬರೂ ಟೆಕ್ಕಿಗಳಾಗಿದ್ದು, ಬೆಂಗಳೂರು ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2018ರಲ್ಲಿ ಇಬ್ಬರಿಗೂ ಪರಿಚಯವಾಗಿ ಪ್ರೇಮ ಶುರುವಾಗಿತ್ತು. ಬಳಿಕ ಮೂರು ವರ್ಷ ಲೀವಿಂಗ್ ಟು ಗೆದರ್ ಇದ್ದು ಬ್ರೇಕ್ ಅಪ್ ಆಗಿದ್ದಾರೆ. ಅಶ್ರಫ್ ಕೆಲಸದ ನಿಮಿತ್ತ ಪುಣೆಗೆ ತೆರಳಿದ್ದ. ಬ್ರೇಕ್ ಅಪ್ ಆದರೂ ಫೋನ್ ಕರೆಗಳ ಮೂಲಕ ಇಬ್ಬರೂ ಸಂಪರ್ಕದಲ್ಲಿದ್ದರು. ಆದರೆ ಇತ್ತೀಚೆಗೆ ಅಶ್ರಫ್ ತನ್ನ ಊರಲ್ಲೇ ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಈ ವಿಚಾರ ಬೆಂಗಳೂರಿನಲ್ಲಿದ್ದ ಯುವತಿಗೆ ತಿಳಿಯುತ್ತಿದ್ದಂತೆ ಆಕೆ ಅಶ್ರಫ್ ವಿರುದ್ಧ ಲವ್ ಜಿಹಾದ್ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಳು. ಇನ್ನು ಯುವತಿ ಯುವಕನಿಗಿಂತ ಐದು ವರ್ಷ ದೊಡ್ಡವರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:16 am, Tue, 26 September 23