ಬೆಂಗಳೂರು, ಜನವರಿ 28: ಇತ್ತೀಚೆಗಷ್ಟೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಗರದ ಬೀದಿಬದಿ ವ್ಯಾಪಾರಿಗಳ ಸರ್ವೆ ಮಾಡಿತ್ತು. ಇದೀಗ ಬೀದಿ ಬದಿ ವ್ಯಾಪಾರಿಗಳಿಗೆ (Street Vendor) ಎಲೆಕ್ಟ್ರಿಕ್ ವಾಹನಗಳನ್ನ ನೀಡಲು ಸಜ್ಜಾಗಿದೆ. ಬಿಬಿಎಂಪಿ ವ್ಯಾಪ್ತಿಯ 10 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಇ-ಸಂತೆ ಹೆಸರಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿ ವೆಚ್ಚದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನ ವಿತರಿಸಲು ಸಜ್ಜಾಗಿದೆ.
ಆದರೆ, ಪಾಲಿಕೆಯ ಈ ಪ್ಲಾನ್ಗೆ ಸ್ವತಃ ಬೀದಿ ಬದಿ ವ್ಯಾಪಾರಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋಟಿ ಕೋಟಿ ಹಣ ಖರ್ಚು ಮಾಡಿ ವಾಹನಗಳನ್ನು ನೀಡುತ್ತಿರುವುದಕ್ಕೆ ಖುಷಿ ಇದೆ. ಹಾಗೇ ಇತರೆ ಸಮಸ್ಯೆಗಳನ್ನೂ ಬಗೆಹರಿಸಿ ಎಂದು ಆಗ್ರಹಿಸುತ್ತಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ, ಕೆ.ಆರ್. ಮಾರುಕಟ್ಟೆ ಸೇರಿದಂತೆ ಹಲವು ಏರಿಯಾಗಳಲ್ಲಿ ಬೀದಿಬದಿ ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದಾರೆ. ಫುಟ್ಪಾತ್ಗಳ ಮೇಲೆ, ತಳ್ಳುವಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಇದೀಗ ಪಾಲಿಕೆ ಹೈಟೆಕ್ ಸೌಕರ್ಯ ನೀಡಲು ಹೊರಟಿದೆ. ಸದ್ಯ ಬೀದಿ ಬದಿ ವ್ಯಾಪಾರಿಗಳ ಸರ್ವೆ ನಡೆಸಿರುವ ಪಾಲಿಕೆ, ಈಗ ಆಯ್ದ ಬೀದಿ ಬದಿ ವ್ಯಾಪಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ನೀಡಲು ತಯಾರಿ ನಡೆಸಿದೆ.
ಈ ಪ್ಲಾನ್ಗೆ ಬಿಬಿಎಂಪಿಯ ಬರೋಬ್ಬರಿ 40 ಕೋಟಿ ರೂಪಾಯಿ ಮೀಸಲಿಟ್ಟಿದೆ. ರಾಜಧಾನಿಯ ಎಲ್ಲ ವಲಯಗಳಿಂದ ಆಯ್ದ ಬೀದಿಬದಿ ವ್ಯಾಪಾರಿಗಳಿಗೆ ಎಲೆಕ್ಟ್ರಾನಿಕ್ ವಾಹನಗಳನ್ನು ವಿತರಿಸಲು ಬಿಬಿಎಂಪಿ ತಯಾರಿ ನಡೆಸಿದೆ. ಆದ್ರೆ ಇತ್ತ ಪಾಲಿಕೆಯ ಈ ಪ್ರಯೋಗಕ್ಕೆ ಬೀದಿ ಬದಿ ವ್ಯಾಪಾರಿಗಳಿಂದ ಆರಂಭದಲ್ಲೇ ಅಪಸ್ವರ ಕೇಳಿಬಂದಿದೆ.
ಇದನ್ನೂ ಓದಿ: ಸಾಕುಪ್ರಾಣಿಗಳಿಗೆ ರಕ್ಷಣಾ ಕೇಂದ್ರ ತೆರೆಯಲು ಮುಂದಾದ ಬಿಬಿಎಂಪಿ: ಸ್ಥಳೀಯ ಸಂಸ್ಥೆಯ ಪ್ರಯೋಗ ದೇಶದಲ್ಲೇ ಮೊದಲು
ಇದಕ್ಕೆ, ಕೋಟಿ ಕೋಟಿ ಖರ್ಚು ಮಾಡುವ ಬದಲು ಬೀದಿ ಬದಿ ವ್ಯಾಪಾರಿಗಳಿಗೆ ಸಿಗಬೇಕಾದ ಮೂಲಭೂತ ಸೌಲಭ್ಯ ನೀಡಿ, ಜೊತೆಗೆ ಯಾವುದೇ ಕಿರುಕುಳ ಕೊಡದಂತೆ ವ್ಯಾಪಾರ ಮಾಡಲು ಅವಕಾಶ ನೀಡಿ ಅಂತ ಬೀದಿಬದಿ ವ್ಯಾಪಾರಿಗಳು ಆಗ್ರಹಿಸಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ಈಗಾಗಲೇ ಹಲವೆಡೆ ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡುವುದರ ಜೊತೆಗೆ ಫುಟ್ಪಾತ್ಗಳಲ್ಲಿ ವ್ಯಾಪಾರಕ್ಕೂ ಕೊಕ್ ನೀಡಲಾಗಿದೆ. ಇನ್ನು, ಎಲೆಕ್ಟ್ರಿಕ್ ವಾಹನಗಳು ಎಲ್ಲರಿಗೂ ಸಿಗುವಂತಾಗಬೇಕು ಎಂದು ಬೀದಿ ಬದಿ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.