ಸಾಕುಪ್ರಾಣಿಗಳಿಗೆ ರಕ್ಷಣಾ ಕೇಂದ್ರ ತೆರೆಯಲು ಮುಂದಾದ ಬಿಬಿಎಂಪಿ: ಸ್ಥಳೀಯ ಸಂಸ್ಥೆಯ ಪ್ರಯೋಗ ದೇಶದಲ್ಲೇ ಮೊದಲು

ಬೆಂಗಳೂರಿನಲ್ಲಿ ಗಾಯಗೊಂಡ ಪ್ರಾಣಿಗಳು, ಮಾಲೀಕರಿಲ್ಲದ ಬೀದಿನಾಯಿಗಳಿಗೆ ರಕ್ಷಣೆ ನೀಡಲು ಬಿಬಿಎಂಪಿ ತಯಾರಿ ನಡೆಸಿದೆ. ಗಾಯಗೊಂಡ ಪ್ರಾಣಿಗಳು, ಮನೆಯಿಂದ ಹೊರಹಾಕಲ್ಪಟ್ಟ ಸಾಕುಪ್ರಾಣಿಗಳು ಮತ್ತು ಆರೈಕೆಯ ಅಗತ್ಯವಿರುವ ಪ್ರಾಣಿಗಳನ್ನು ಖಾಸಗಿ ರಕ್ಷಣಾ ಕೇಂದ್ರಗಳಿಗೆ ಕಳುಹಿಸುವ ಬದಲು ಪ್ರಾಣಿಗಳ ಕಲ್ಯಾಣ ಕೇಂದ್ರ ಸ್ಥಾಪಿಸಲು ಪಾಲಿಕೆ ಸಜ್ಜಾಗಿನಿಂತಿದೆ.

ಸಾಕುಪ್ರಾಣಿಗಳಿಗೆ ರಕ್ಷಣಾ ಕೇಂದ್ರ ತೆರೆಯಲು ಮುಂದಾದ ಬಿಬಿಎಂಪಿ: ಸ್ಥಳೀಯ ಸಂಸ್ಥೆಯ ಪ್ರಯೋಗ ದೇಶದಲ್ಲೇ ಮೊದಲು
ಸಾಂದರ್ಭಿಕ ಚಿತ್ರ
Follow us
ಶಾಂತಮೂರ್ತಿ
| Updated By: Ganapathi Sharma

Updated on: Jan 23, 2025 | 7:58 AM

ಬೆಂಗಳೂರು, ಜನವರಿ 23: ಪ್ರಾಣಿ ರಕ್ಷಣೆಯ ಕಾರ್ಯದಲ್ಲಿ ಹೊಸ ಹೆಜ್ಜೆ ಇಡಲು ಮುಂದಾಗಿರುವ ಬಿಬಿಎಂಪಿ ಸಾಕುಪ್ರಾಣಿಗಳಿಗೆ ರಕ್ಷಣಾ ಕೇಂದ್ರ ತೆರೆಯಲು ಮುಂದಾಗಿದೆ. ದಾಸರಹಳ್ಳಿ, ಪೂರ್ವ ವಲಯ ಹಾಗೂ ದಕ್ಷಿಣ ವಲಯದಲ್ಲಿ ಪ್ರಾಣಿಗಳ ರಕ್ಷಣಾ ಕೇಂದ್ರ ಸ್ಥಾಪಿಸಲು ಪಾಲಿಕೆ ಮುಂದಾಗಿದ್ದು, ಆ ಮೂಲಕ ಸ್ಥಳೀಯ ಸಂಸ್ಥೆಯ ಮೂಲಕ ಸ್ಥಾಪಿಸಲ್ಪಟ್ಟ ದೇಶದ ಮೊದಲ ಪ್ರಾಣಿ ಸಂರಕ್ಷಣಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಬೆಂಗಳೂರಿನಲ್ಲಿ ಅನಾಥವಾಗಿ ಅಲೆಯುವ ಸಾಕುಪ್ರಾಣಿಗಳಿಗೆ ಗಾಯಗೊಂಡಾಗ ರಕ್ಷಣೆ ನೀಡುವುದರ ಜೊತೆಗೆ ಆರೈಕೆ ನೀಡುವುದು ಪ್ರಾಣಿ ಸಂರಕ್ಷಣಾ ಕೇಂದ್ರ ಸ್ಥಾಪನೆಯ ಉದ್ದೇಶವಾಗಿದೆ. ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಪರಿತ್ಯಕ್ತ ಸಾಕು ಪ್ರಾಣಿಗಳಿಗೆ ಹಾಗೂ ಬೀದಿನಾಯಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಅರಿತ ಪಾಲಿಕೆಯ ಪಶುಪಾಲನಾ ವಿಭಾಗ, ಮೂರು ವಲಯಗಳಲ್ಲಿ ಪ್ರಾಣಿಗಳ ಆರೈಕೆಗೆ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ.

500ಕ್ಕೂ ಹೆಚ್ಚು ಪ್ರಾಣಿಗಳಿಗೆ ಆಶ್ರಯದ ಗುರಿ

ಬಿಬಿಎಂಪಿ ಪ್ರತಿ ಕೇಂದ್ರದಲ್ಲಿ 200 ಪ್ರಾಣಿಗಳನ್ನು ನಿರ್ವಹಿಸುವ ಗುರಿ ಹೊಂದಿದ್ದು, ಒಟ್ಟಾರೆ, ಈ ಮೂರು ಕೇಂದ್ರಗಳಲ್ಲಿ ಪ್ರತಿ ತಿಂಗಳು 500 ಕ್ಕೂ ಹೆಚ್ಚು ಪ್ರಾಣಿಗಳಿಗೆ ಆಶ್ರಯ ನೀಡಲು ಚಿಂತನೆ ನಡೆಸಿದೆ.

ಇದುವರೆಗೂ ಬಿಬಿಎಂಪಿ ತನ್ನದೇ ಆದ ಪ್ರಾಣಿ ರಕ್ಷಣಾ ಕೇಂದ್ರವನ್ನು ಹೊಂದಿರಲಿಲ್ಲ. ಪಶುಸಂಗೋಪನಾ ಇಲಾಖೆಗೆ ಪ್ರಾಣಿಗಳ ರಕ್ಷಣೆಗಾಗಿ ಕರೆ ಬಂದಾಗ ಅಥವಾ ಕೈಬಿಟ್ಟ ಮತ್ತು ಗಾಯಗೊಂಡ ಸಾಕುಪ್ರಾಣಿಗಳನ್ನ ನೋಡಿಕೊಳ್ಳಲು ಮನವಿ ಬಂದಾಗಲೆಲ್ಲ ಖಾಸಗಿ ಕೇಂದ್ರದ ಮೊರೆಹೋಗುತ್ತಿತ್ತು.

ಯಾವೆಲ್ಲ ಪ್ರಾಣಿಗಳಿಗೆ ಸಿಗಲಿದೆ ಆರೈಕೆ?

ಗಾಯಗೊಂಡ ಬೆಕ್ಕುಗಳು, ಬೀದಿನಾಯಿಗಳಿಗೆ ಪಾಲಿಕೆಯ ಈ ರಕ್ಷಣಾ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲು ಉದ್ದೇಶಿಸಲಾಗಿದ್ದು, ಅವುಗಳು ಚೇತರಿಸಿಕೊಂಡ ಬಳಿಕ ಮೊದಲು ಎಲ್ಲಿದ್ದವೋ ಅದೇ ಜಾಗಕ್ಕೆ ಮರಳಿ ಬಿಡಲು ಚಿಂತನೆ ನಡೆಸಲಾಗಿದೆ. ಸದ್ಯ ಈಗಾಗಲೇ ಎರಡು ವಲಯಗಳಲ್ಲಿ ಕೇಂದ್ರ ತೆರೆಯಲು ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಪಾಲಿಕೆ ಕೂಡ ಸಾಧ್ಯಾಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ವಿಶೇಷ ಆಯುಕ್ತ ಸೂರಲ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಈ ದಿನಗಳಲ್ಲಿ ಕೆಂಪೇಗೌಡ ಏರ್‌ಪೋರ್ಟ್​ನಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ

ಇತ್ತೀಚೆಗಷ್ಟೇ ಸಮುದಾಯ ಪ್ರಾಣಿಗಳ ಸಂರಕ್ಷಣೆ ಹೆಸರಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುವುದರ ಜೊತೆಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಪಾಲಿಕೆ ಮಾಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ