ಬೆಂಗಳೂರಿನಲ್ಲಿ ಇನ್ನೂ ಮುಗಿಯದ ಇ ಖಾತಾ ಸಂಕಷ್ಟ: ಗೊಂದಲ ಬಗೆಹರಿಸಲು ಬಿಬಿಎಂಪಿ ಸರ್ಕಸ್
ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರ ಇ ಖಾತಾ ಸಂಕಷ್ಟ ಮುಗಿಯದ ಕತೆಯಾಗಿದೆ. ಇ-ಖಾತಾ ನೋಂದಣಿಯ ಸಮಸ್ಯೆ ಬಗೆಹರಿಸಿದ್ದೇವೆ ಎಂದು ಪಾಲಿಕೆ ಅದೆಷ್ಟೋ ಬಾರಿ ಹೇಳಿದರೂ, ಗೊಂದಲ ಮಾತ್ರ ನಿವಾರಣೆಯಾಗಿಲ್ಲ. ಇತ್ತ ಇ-ಖಾತಾ ನೊಂದಣಿ ಪರದಾಟದ ಮಧ್ಯೆಯೇ ಬಿಬಿಎಂಪಿ ಹಾಗೂ ಸರ್ಕಾರ ಇ-ಖಾತಾ ವ್ಯವಸ್ಥೆಯನ್ನು ತೆರಿಗೆ ವ್ಯಾಪ್ತಿಗೆ ತರಲು ಹೊರಟಿವೆ. ಇತ್ತ ಆಸ್ತಿದಾರರು ಮಾತ್ರ ಸಂಕಷ್ಟದ ಸುಳಿಯಲ್ಲೇ ಇದ್ದಾರೆ.
ಬೆಂಗಳೂರು, ಜನವರಿ 22: ರಾಜಧಾನಿ ಬೆಂಗಳೂರಿನಲ್ಲಿ ಆಸ್ತಿ ಮಾರಾಟ, ಖರೀದಿ ಸೇರಿದಂತೆ ಇತರೆ ಕೆಲಸಗಳಿಗೆ ಇ-ಖಾತಾ ಕಡ್ಡಾಯಗೊಳಿಸಲಾಗಿದೆ. ಇತ್ತ ಇ-ಖಾತಾ ಪಡೆಯಲು ಪ್ರತಿ ವಾರ್ಡ್ನ ಬಿಬಿಎಂಪಿಯ ಕಚೇರಿಗಳಲ್ಲಿ ಅವಕಾಶ ಕಲ್ಪಿಸಿದರೂ, ಬೆಂಗಳರು ಒನ್ ಕೇಂದ್ರಗಳಲ್ಲಿ ಇ-ಖಾತಾ ಪಡೆಯಲು ಅವಕಾಶ ನೀಡಿದ್ದರೂ ನಗರವಾಸಿಗಳಿಗೆ ಮಾತ್ರ ಸಮಸ್ಯೆ ತಪ್ಪದಂತಾಗಿದೆ. ದಾಖಲೆಗಳು ಸರಿಯಿದ್ದರೆ ಸರ್ವರ್ ಸರಿ ಇರಲ್ಲ, ಸರ್ವರ್ ಸರಿಯಿದ್ದರೆ ದಾಖಲೆ ಇಲ್ಲ ಎಂಬಂಥ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿರುವ ಜನ ಇ-ಖಾತಾ ಪಡೆಯಲು ಪರದಾಡುತ್ತಿದ್ದಾರೆ.
ಇನ್ನು ಕೃಷಿಭೂಮಿಯಿಂದ ಪರಿವರ್ತನೆಯಾದ ಜಾಗಗಳು, ಬಿಡಿಎ ಸ್ವಾಧೀನದ ಬಳಿಕ ಕೈಬಿಟ್ಟ ಜಾಗಗಳು, ಎ ಖಾತಾ , ಬಿ ಖಾತಾ ಪಡೆಯುವಾಗ ಮ್ಯಾನುವಲ್ ಇದ್ದಿದ್ದರಿಂದ ಕೆಲ ದಾಖಲೆಗಳು ಇಲ್ಲದಿದ್ರೂ ಖಾತಾ ಲಭ್ಯವಾಗಿದೆ. ಆದರೆ, ಇದೀಗ ಇ-ಖಾತಾ ಮಾಡಿಸಲು ಕೆಲವು ದಾಖಲೆಗಳು ಸೂಕ್ತ ರೀತಿಯಲ್ಲಿ ಒದಗಿಸಲು ಆಗದೇ ಇರುವುದು ಜನರಿಗೆ ಸಂಕಷ್ಟ ತಂದಿಟ್ಟಿದೆ.
ಹೊಸ ವೆಬ್ಸೈಟ್ ಆರಂಭಿಸಿದರೂ ಬಗೆಹರಿಯದ ಸಮಸ್ಯೆ
ಮತ್ತೊಂದೆಡೆ, ಇ-ಖಾತಾ ಇಲ್ಲದ ಸುಮಾರು 5 ಲಕ್ಷ ಆಸ್ತಿಗಳನ್ನು ಗುರುತಿಸಿರುವ ಪಾಲಿಕೆ, ಇತ್ತೀಚೆಗಷ್ಟೇ ಇ-ಖಾತಾ ಪಡೆಯಲು ಹೊಸ ವೆಬ್ಸೈಟ್ ಕೂಡ ಬಿಡುಗಡೆ ಮಾಡಿತ್ತು. ಆದರೆ, ಎಷ್ಟೇ ಸರ್ಕಸ್ ಮಾಡಿದರೂ ಕೂಡ ನೀರಿಕ್ಷಿತಮಟ್ಟದಲ್ಲಿ ಜನರಿಗೆ ಇ-ಖಾತಾ ತಲುಪಿಸುವುದರಲ್ಲಿ ಪಾಲಿಕೆ ಯಶಸ್ವಿ ಆಗಿಲ್ಲ.
ಈಡೇರದ ತಾತ್ಕಾಲಿಕ ಕೇಂದ್ರ ತೆರೆಯುವ ಭರವಸೆ
ಇತ್ತೀಚೆಗೆಷ್ಟೇ ಇ-ಖಾತಾ ತೆರೆಯಲು ಪಾಸ್ಪೋರ್ಟ್ ಕಚೇರಿ ಮಾದರಿಯಲ್ಲಿ ತಾತ್ಕಾಲಿಕ ಕೇಂದ್ರಗಳನ್ನು ತೆರೆಯುತ್ತೇವೆ ಎಂದಿದ್ದ ಪಾಲಿಕೆಯ ಮಾತು ಬರೀ ಮಾತಾಗಿಯೇ ಉಳಿದಿದೆ. ಇತ್ತ ಇ-ಖಾತಾ ಪಡೆಯುವ ಸರ್ಕಸ್ನಲ್ಲಿ ಬೇಸತ್ತ ಜನರು ಇ-ಖಾತಾ ಇಲ್ಲದೇ ಇರುವುದರಿಂದ ಆಸ್ತಿಗಳನ್ನು ಮಾರಾಟ ಮಾಡಲೂ ಪರದಾಡುತ್ತಿದ್ದಾರೆ. ಸದ್ಯ ಇ-ಖಾತಾ ಸಮಸ್ಯೆಗಳ ಮಧ್ಯೆ ಬರೀ ಮಾತಿನ ಭರವಸೆಗಳ ಕತೆ ಹೇಳುತ್ತಿರುವ ಪಾಲಿಕೆ ನಡೆಗೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಬಿ ಖಾತಾವನ್ನು ಎ ಖಾತಾಗೆ ವರ್ಗಾಯಿಸಲು ಏನು ಮಾಡಬೇಕು?
ಇ-ಖಾತಾ ಸಮಸ್ಯೆಗೆ ಸಹಾಯವಾಣಿ ಬಿಟ್ಟು ಮೌನವಾಗಿರುವ ಪಾಲಿಕೆ ಸಮಸ್ಯೆ ಬಗೆಹರಿಸಲು ಎಷ್ಟೇ ಸರ್ಕಸ್ ಮಾಡಿದರೂ ಪರಿಹಾರ ಸಿಗದಂತಾಗಿದೆ. ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ಅರ್ಜಿಗಳಿಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 46,962 ಅರ್ಜಿಗಳು ಬಂದಿದ್ದು, ಈ ಪೈಕಿ ಈಗಾಗಲೇ 39,784 ಅರ್ಜಿಗಳಿಗೆ ಅನುಮೋದನೆ ನೀಡಿ ಅಂತಿಮ ಇ-ಖಾತಾ ನೀಡಲಾಗಿದೆ. ಆದರೆ ಇನ್ನೂ ಲಕ್ಷಗಟ್ಟಲೇ ಆಸ್ತಿ ಮಾಲೀಕರು ಇ-ಖಾತಾ ಪಡೆಯಲು ಪರದಾಡುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ