ಬೆಂಗಳೂರು ಏರ್ ಶೋ ವೇಳೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಬಂದ್: ಇಲ್ಲಿದೆ ವಿವರ
ಬೆಂಗಳೂರು ಏರ್ ಶೋ ‘ಏರೋ ಇಂಡಿಯಾ 2025’ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಮತ್ತೊಂದೆಡೆ, ಏರ್ ಶೋ ವೇಳೆ ಅತ್ತ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಪ್ರಯಾಣಿಕ ವಿಮಾನಗಳ ಹಾರಾಟದಲ್ಲಿ ತುಸು ವ್ಯತ್ಯಯಕ್ಕೂ ಕಾರಣವಾಗಲಿದೆ. ಏರ್ ಶೋ ನಡೆಯುವ ಸಂದರ್ಭಗಳಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ. ಟೇಕಾಫ್, ಲ್ಯಾಂಡಿಂಗ್ ಸ್ಥಗಿತದ ದಿನಾಂಕ ಮತ್ತು ಸಮಯ ವಿವರ ಇಲ್ಲಿದೆ.
![ಬೆಂಗಳೂರು ಏರ್ ಶೋ ವೇಳೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಬಂದ್: ಇಲ್ಲಿದೆ ವಿವರ](https://images.tv9kannada.com/wp-content/uploads/2025/01/kempegowda-airport.jpg?w=1280)
ಬೆಂಗಳೂರು, ಜನವರಿ 28: ‘ಏರೋ ಇಂಡಿಯಾ 2025’ ಏರ್ ಶೋಗೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 10 ರಿಂದ 14 ರವರಗೆ ಯಲಹಂಕದಲ್ಲಿ ಏರ್ ಶೋ ನಡೆಯಲಿರುವ ಕಾರಣ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಿಮಾನಗಳ ಕಾರ್ಯಾಚರಣೆ ಮೇಲೆಯೂ ಪರಿಣಾಮವಾಗಲಿದೆ. ಏರ್ ಶೋ ವೇಳೆ ನಿಗದಿತ ಸಮಯದಲ್ಲಿ ವಿಮಾನಗಳ ಹಾರಾಟ ಬಂದ್ ಆಗಲಿದೆ. ಲ್ಯಾಂಡಿಂಗ್ ಹಾಗೂ ಟೇಕಾಫ್ಗಳು ಇರುವುದಿಲ್ಲ. ಹೀಗಾಗಿ ಏರ್ಲೈನ್ಸ್ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಬರುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.
ಏರ್ ಶೋ ವೇಳೆ ವಾಯುಪಡೆ ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಕೆಂಪೇಗೌಡ ಏರ್ಪೋರ್ಟ್ನಿಂದ ಟೇಕಾಫ್ ಮತ್ತು ಲ್ಯಾಂಡಿಂಗ್ ಸ್ಥಗಿತಗೊಳಿಸಲಾಗುತ್ತದೆ.
ಯಾವಾಗಲೆಲ್ಲ ವಿಮಾನ ಸಂಚಾರ ಬಂದ್?
ಪೆಬ್ರವರಿ 5 ರಿಂದ 8 ರವರೆಗೆ ಬೆಳಗ್ಗೆ 9 ಗಂಟೆಯಿಂದ 12 ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆವರೆಗೂ ವಿಮಾನಗಳ ಹಾರಾಟಕ್ಕೆ ನಿರ್ಬಂಧವಿದೆ. ಪೆಬ್ರವರಿ 09 ರಂದು ಬೆಳಗ್ಗೆ 9 ರಿಂದ 12 ಗಂಟೆವರೆಗೂ ವಿಮಾನಗಳ ಹಾರಾಟ ಸ್ಥಬ್ದವಾಗಲಿದೆ.
ಪೆಬ್ರವರಿ 10 ರಂದು ಬೆಳಗ್ಗೆ 9 ಗಂಟೆಯಿಂದ 12 ಮತ್ತು ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆ ವರೆಗೂ ವಿಮಾನ ಕಾರ್ಯಾಚರಣೆ ಇರುವುದಿಲ್ಲ. ಫೆಬ್ರವರಿ 11 ಮತ್ತು 12 ರಂದು 12 ಗಂಟೆಯಿಂದ 3 ಗಂಟೆವರೆಗೂ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ.
ಪೆಬ್ರವರಿ 13 ಮತ್ತು 14 ರಂದು ಬೆಳಗ್ಗೆ 9 ರಿಂದ 12 ಗಂಟೆ ಮತ್ತು ಮದ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆವರೆಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆ ಇರುವುದಿಲ್ಲ.
ಇದನ್ನೂ ಓದಿ: ಏರ್ ಶೋಗೆ ಬರುವವರಿಗೆ ಬಿಎಂಟಿಸಿ ಉಚಿತ ಬಸ್ ವ್ಯವಸ್ಥೆ, ಈ ಜಾಗದಲ್ಲಿ ಪಾರ್ಕಿಂಗ್
ಏಷ್ಯಾದ ಅತಿ ದೊಡ್ಡ ಏರ್ ಶೋ ಯಲಹಂಕದ ವಾಯನೆಲೆಯಲ್ಲಿ ಫೆಬ್ರವರಿ 10 ರಿಂದ 14 ರವರಗೆ ನಡೆಯಲಿದ್ದು ದೇಶ ವಿದೇಶಗಳ ಅನೇಕ ಗಣ್ಯರು, ಉದ್ಯಮಿಗಳು, ವಾಯುಪಡೆಗಳ ಸಿಬ್ಬಂದಿ ಆಗಮಿಸಲಿದ್ದಾರೆ. ಆಕರ್ಷಕ ಏರ್ ಶೋ ಕೂಡ ನಡೆಯಲಿದೆ.
ಏರ್ ಶೋಗೆ ಆಗಮಿಸುವವರಿಗೆ ಪಾರ್ಕಿಂಗ್ ವ್ಯವಸ್ಥೆ, ಉಚಿತ ಬಸ್ ವ್ಯವಸ್ಥೆಯನ್ನು ವಾಯುಪಡೆ ಮಾಡುತ್ತಿದೆ. 15ನೇ ಆವೃತ್ತಿಯ ಏರ್ ಶೋ ಇದಾಗಿದ್ದು, ಲಕ್ಷಾಂತರ ಜನ ಆಗಮಿಸುವ ನಿರೀಕ್ಷೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:00 am, Tue, 28 January 25