ಬೆಂಗಳೂರು, ಮಾರ್ಚ್ 25: ವಿದ್ಯುತ್ ಬಿಲ್ (Electricity Bill) ಪಾವತಿಯ ಆನ್‌ಲೈನ್ ವ್ಯವಸ್ಥೆಯ ಅಪ್‌ಗ್ರೇಡ್ ವೇಳೆ ಕಂಡುಬಂದ ತಾಂತ್ರಿಕ ಸಮಸ್ಯೆಯ ಕಾರಣ ಮಾರ್ಚ್ ತಿಂಗಳಲ್ಲಿ ಬಿಲ್ ಪಾವತಿ ವಿಳಂಬವಾದರೆ ಅದಕ್ಕೆ ವಿಳಂಬ ಶುಲ್ಕ ಪಾವತಿ ಮಾಡಬೇಕಿಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತಿಳಿಸಿದೆ. ಡಿಜಿಟಲ್ ಸೇವೆಗಳಲ್ಲಿನ ಅಡೆತಡೆಗಳ ನಿವಾರಣೆಗಾಗಿ ಆನ್‌ಲೈನ್ ಪಾವತಿ ವ್ಯವಸ್ಥೆಗೆ ತಾಂತ್ರಿಕ ನವೀಕರಣಗಳನ್ನು ಮಾಡಿದ ನಂತರ ಬೆಸ್ಕಾಂ ಈ ಕುರಿತು ಪ್ರಕಟಣೆ ಹೊರಡಿಸಿದೆ. ಈ ಸೌಲಭ್ಯ ಬೆಂಗಳೂರು ಮಾತ್ರವಲ್ಲದೆ, ಬೆಸ್ಕಾಂ ವ್ಯಾಪ್ತಿಯಡಿ ಬರುವ ಇತರ ಜಿಲ್ಲೆಗಳಲ್ಲೂ ಲಭ್ಯ ಇರಲಿದೆ.
ಮಾರ್ಚ್ 10 ಮತ್ತು 19 ರ ನಡುವೆ ಆನ್‌ಲೈನ್ ಪಾವತಿ ವ್ಯವಸ್ಥೆಯನ್ನು ತಾಂತ್ರಿಕವಾಗಿ ಅಪ್‌ಗ್ರೇಡ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ತಾಂತ್ರಿಕ ದೋಷಗಳಿಂದಾಗಿ ಅನೇಕ ಗ್ರಾಹಕರಿಗೆ ಪಾವತಿ ಸಾಧ್ಯವಾಗಿರಲಿಲ್ಲ. ಇದನ್ನು ಪರಿಗಣಿಸಿ ಮಾರ್ಚ್ ತಿಂಗಳ ತಡವಾದ ವಿದ್ಯುತ್ ಬಿಲ್ ಪಾವತಿ ಮೇಲೆ ಯಾವುದೇ ವಿಳಂಬ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಬೆಸ್ಕಾಂ ಹೇಳಿದೆ.
ಮಾರ್ಚ್ 20 ರಂದು ಆನ್‌ಲೈನ್ ಪಾವತಿ ಸೇವೆಗಳು ಪುನರಾರಂಭಗೊಂಡಿದ್ದರೂ ಸಹ ಎಂಟು ದಿನಗಳ ಅಡಚಣೆಯಿಂದಾಗಿ ಬಿಲ್ ಪಾವತಿಗೆ ಭಾರೀ ರಷ್ ಕಂಡುಬಂದಿದೆ. ಆದ್ದರಿಂದ, ಕೆಲವು ಗ್ರಾಹಕರು ತೊಂದರೆಗಳನ್ನು ಎದುರಿಸಿದ್ದಾರೆ. ಗ್ರಾಹಕರು ತಮ್ಮ ಬಿಲ್‌ಗಳನ್ನು ಮಾರ್ಚ್ 30 ರವರೆಗೆ ಪಾವತಿಸಬಹುದು ಮತ್ತು ಯಾವುದೇ ದಂಡ ಅಥವಾ ತಡವಾದ ಪಾವತಿಗಾಗಿ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಬೆಸ್ಕಾಂ ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಇದನ್ನೂ ಓದಿ: ಕುಡಿಯಲು ಯೋಗ್ಯ ನೀರಿನ ದುರ್ಬಳಕೆ, 1 ಲಕ್ಷ ರೂಪಾಯಿಗೂ ಹೆಚ್ಚು ದಂಡ ಸಂಗ್ರಹಿಸಿದ ಜಲ ಮಂಡಳಿ
ಬೆಸ್ಕಾಂ ಅಡಿಯಲ್ಲಿ ಬರುವ ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಗ್ರಾಹಕರು ವಿದ್ಯುತ್ ಬಿಲ್ ಪಾವತಿ ವಿಳಂಬವಾದರೆ ವಿಳಂಬ ಪಾವತಿ ಶುಲ್ಕ ಪಾವತಿಸಬೇಕಾಗಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:33 am, Mon, 25 March 24