ಆಟೋ ಪಾರ್ಕಿಂಗ್ ವಿಚಾರಕ್ಕೆ ನಡೆದ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್; ಭಗವಾ ಧ್ವಜದ ಬಗ್ಗೆ ಪ್ರಸ್ತಾಪ, ಮೂವರು ಅರೆಸ್ಟ್
ಆಟೋ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಗಾಯಾಳು ಸುಕುಮಾರ್ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಮನೆಯ ಮೇಲೆ ಹಾಕಲಾಗಿರುವ ಭಗವಾ ಧ್ವಜದ ಸಂಬಂಧ ಹಲ್ಲೆ ನಡೆದಿರುವ ಶಂಕೆ ಇದೆ ಎಂದು ಹೇಳಿದ್ದಾರೆ. ಇನ್ನು ಮತ್ತೊಂದೆಡೆ ಘಟನೆ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬೆಂಗಳೂರು, ಮಾರ್ಚ್.25: ಆಟೋ ಪಾರ್ಕಿಂಗ್ (Auto Parking) ವಿಚಾರವಾಗಿ ಬನಶಂಕರಿಯ (Banashankari) ಪ್ರಗತಿಪರ ಬಡಾವಣೆಯಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಸೈಯದ್ ತಾಹ, ತಾಹ ತಂದೆ ಕರೀಮ್ ಹಾಗು ಅಫ್ರೀದ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು ಐಪಿಸಿ ಸೆಕ್ಷನ್ 143, 148 , 358 ಅಡಿ ಎಫ್ಐಆರ್ ದಾಖಲಾಗಿದೆ. ಘಟನೆಯಲ್ಲಿ ಬೇರೆಯವರ ಪಾತ್ರದ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಮತ್ತೊಂದೆಡೆ ಮನೆ ಮೇಲೆ ಹಾರಿಸಲಾಗಿರುವ ಭಗವಾಧ್ವಜದ ಕಾರಣಕ್ಕೆ ಹಲ್ಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ.
ಸಣ್ಣ ರಸ್ತೆಯ ಏರಿಯಾದ ಅಕ್ಕಪಕ್ಕದ ನಿವಾಸಿಗಳಾದ ಸುಕುಮಾರ್ ಹಾಗೂ ಸೈಯದ್ ತಾಹ ಎಂಬ ಇಬ್ಬರು ಆಟೋ ಪಾರ್ಕಿಂಗ್ ವಿಚಾರಕ್ಕೆ ಜಗಳವಾಡಿಕೊಂಡಿದ್ದರು. ಸುಕುಮಾರ್ ತಮ್ಮ ಮನೆಯ ಮುಂದೆ ಆಟೋ ನಿಲ್ಲಿಸಿಕೊಂಡಿದ್ದರು. ಸೈಯದ್ ತಾಹ ಮನೆಯ ಮುಂದೆ ಆತನ ಸಂಬಂಧಿ ಆಟೋ ನಿಲ್ಲಿಸಿದ್ದ. ವೇಗವಾಗಿ ಬಂದು ಆಟೋ ನಿಲ್ಲಿಸಿದ್ದಕ್ಕೆ ತಾಹ ಸಂಬಂಧಿಯನ್ನು ಪಕ್ಕದ ಮನೆ ನಿವಾಸಿ ಸುಕುಮಾರ್ ಹಾಗೂ ಕುಟುಂಬಸ್ಥರು ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು ಇದೇ ವೇಳೆ ಅಪರಿಚಿತ ವ್ಯಕ್ತಿ ಪಕ್ಕದಲ್ಲೇ ಇದ್ದ ಮಸೀದಿಯಿಂದ ಹೊರ ಬಂದ ಜೊತೆಗಾರರ ಜೊತೆ ಬಂದು ಮತ್ತೆ ಗಲಾಟೆ ಮಾಡಿ ಸುಕುಮಾರ್ ಅವರ ಮನೆಗೆ ನುದ್ದಿ ಹಲ್ಲೆ ನಡೆಸಿದ್ದರು.
ಇದನ್ನೂ ಓದಿ: ಆಟೋ ಪಾರ್ಕಿಂಗ್ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ಗಲಾಟೆ, 8 ಮಂದಿಗೆ ಗಾಯ; ಕೋಮು ಗಲಭೆಯಲ್ಲ ಎಂದು ಪೊಲೀಸರ ಸ್ಪಷ್ಟನೆ
ಹಲ್ಲೆಯಲ್ಲಿ 8 ಜನರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮತ್ತೊಂದೆಡೆ ಹಲ್ಲೆಗೊಳಗಾದ ಸುಕುಮಾರ್ ಇಡೀ ಘಟನೆಗೆ ಟ್ವಿಸ್ಟ್ ಕೊಟ್ಟಿದ್ದಾರೆ. ಮನೆ ಮೇಲೆ ಹಾರಿಸಿರುವ ಭಗವಾ ಧ್ವಜದ ಕಾರಣಕ್ಕೆ ಹಲ್ಲೆ ಮಾಡಿರೋ ಸಂದೇಹ ಉಂಟಾಗಿದೆ. ಪಾರ್ಕಿಂಗ್ ವಿಚಾರವಾಗಿಯೇ ಗಲಾಟೆ ಎಂದು ನಾನು ಅಂದು ಕೊಂಡಿದ್ದೆ. ಅದೇ ವಿಚಾರವಾಗಿ ಹಲ್ಲೆ ಆಗಿದೆ ಅಂತ ದೂರು ಸಹ ನೀಡಿದ್ದೆ. ಆದ್ರೀಗ ಹೊಸ ಅನುಮಾನ ಮೂಡಿದೆ. ಈ ಬಗ್ಗೆ ನಾನು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿರಲಿಲ್ಲ. ಆದರೇ ಈಗ ಪೊಲೀಸರಿಗೆ ಈ ಅನುಮಾನದ ಬಗ್ಗೆ ತಿಳಿಸುತ್ತೇನೆ ಎಂದ ಸುಕುಮಾರ್ ತಿಳಿಸಿದ್ದಾರೆ.
ಇನ್ನು ಘಟನೆ ಸಂಬಂಧ ಮಾತನಾಡಿದ ದಕ್ಷಿಣ ವಿಭಾಗ ಡಿಸಿಪಿ ಶಿವಪ್ರಕಾಶ್, ನಿನ್ನೆ ರಾತ್ರಿ 7.30ರ ಸುಮಾರಿಗೆ ಪ್ರಗತಿಪುರದಲ್ಲಿ ಅಕ್ಕಪಕ್ಕದವರಿಗೆ ಜಗಳ ಆಗಿದೆ. ಈ ಬಗ್ಗೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಒಂದು ಕೇಸ್ ದಾಖಲಾಗುತ್ತೆ. ಸುಕುಮಾರ್ ಎಂಬುವರು ದೂರು ಕೊಟ್ಟಿದ್ದಾರೆ. ಆಟೋ ಪಾರ್ಕ್ ಮಾಡುವ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ. ಪಕ್ಕದ ಮನೆಯ ಅಫ್ರೀನ್ ಪಾಷಾ, ಸೈಯದ್ ಸೇರಿ ಮೂವರನ್ನ ಬಂಧಿಸಿದ್ದೇವೆ. ಇದರಲ್ಲಿ ಇನ್ನೂ ಕೆಲವು ಸೆಕ್ಷನ್ ದಾಖಲಿಸುತ್ತಿದ್ದೇವೆ. 354 ಮತ್ತು ಅನುಮತಿ ಇಲ್ಲದೆ ಮನೆಗೆ ನುಗ್ಗಿದ ಬಗ್ಗೆ ತನಿಖೆ ನಡೆಸಲಾಗುತ್ತೆ. ಈಗ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ದೂರಿನಲ್ಲಿ ಅಥವಾ ಹೇಳಿಕೆಯಲ್ಲಿ ಧ್ವಜ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಈ ಬಗ್ಗೆ ದೂರು ಕೊಟ್ಟರೆ ಪರಿಶೀಲನೆ ನಡೆಸಲಾಗುತ್ತೆ. ದೂರುದಾರ ಮತ್ತು ಆರೋಪಿ ಇಬ್ಬರು ಆಟೋ ಚಾಲಕರು. ಪಾರ್ಕಿಂಗ್ ವಿಚಾರಕ್ಕೆ ಜಗಳ ನಡೆದಿದೆ ಅಂತಾ ಪ್ರಕರಣ ದಾಖಲಾಗಿದೆ. ಕುಮಾರಸ್ವಾಮಿ ಲೇಔಟ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ