Ganesha Chaturthi 2022: ಸಾರ್ವಜನಿಕ ಗಣೇಶೋತ್ಸವಕ್ಕೆ ಬೆಸ್ಕಾಂ ಗೈಡ್ ಲೈನ್ಸ್ ಪ್ರಕಟ
ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವ ಮುನ್ನ ಬೆಸ್ಕಾಂ ಕ್ಷೇತ್ರಾಧಿಕಾರಿಗಳಿಗೆ ಸಮಾರಂಭದ ಸ್ಥಳ ಪರಿಶೀಲನೆ & ತಪಾಸಣೆ ಮಾಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಬೆಸ್ಕಾಂ ಗೈಡ್ ಲೈನ್ಸ್ ನಲ್ಲಿ ತಿಳಿಸಿದೆ.
ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವಕ್ಕೆ ಬೆಸ್ಕಾಂ(BESCOM) ಗೈಡ್ ಲೈನ್ಸ್ ಪ್ರಕಟಿಸಿದೆ. ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಗಣೇಶ ಹಬ್ಬಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಏರಿಯಾ ಏರಿಯಾಗಳನ್ನು ಗಣೇಶ ಕೂರಿಸಲು ಸಿದ್ಧತೆಗಳು ಭರದಿಂದ ಸಾಗಿವೆ. ಗಣೇಶ ಕೂರಿಸಿದಾಗ, ಹಾಗೂ ವಿಸರ್ಜನೆಯ ಮೆರವಣಿಗೆ ವೇಳೆ ಬಳಸಲಾಗುವ ವಿದ್ಯುತ್ ಸಂಬಂಧ ಬೆಸ್ಕಾಂ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿ ಗೈಡ್ ಲೈನ್ಸ್ ಪ್ರಕಟಿಸಿದೆ.
ಬೆಸ್ಕಾಂ ಗೈಡ್ ಲೈನ್ಸ್ ಹೀಗಿದೆ
- ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವ ಮುನ್ನ ಬೆಸ್ಕಾಂ ಕ್ಷೇತ್ರಾಧಿಕಾರಿಗಳಿಗೆ ಸಮಾರಂಭದ ಸ್ಥಳ ಪರಿಶೀಲನೆ & ತಪಾಸಣೆ ಮಾಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಬೆಸ್ಕಾಂ ಗೈಡ್ ಲೈನ್ಸ್ ನಲ್ಲಿ ತಿಳಿಸಿದೆ.
- ಭೂಗತ ಕೇಬಲನ್ನು ಬಳಸಿಕೊಂಡು ಓವರ್ ಹೆಡ್ ಮಾರ್ಗದಲ್ಲಿ ಎಳೆದು ವಿದ್ಯುತ್ ಸಂಪರ್ಕ ಪಡೆಯಲು ಸೂಚಿಸಲಾಗಿದ್ದು ಒವರ್ ಹೆಡ್ ಮಾರ್ಗದ ಸುರಕ್ಷತೆಯ ಹಿತದೃಷ್ಟಿಯಿಂದ ಯಾವುದೇ ರೀತಿಯ ಜಾಯಿಂಟ್ ಇಲ್ಲದೆ ವಿದ್ಯುತ್ ಸೊರಿಕೆಯಾಗದೇ ಇರುವುದನ್ನು ಸಂಘಟಕರು ಖಚಿತ ಪಡಿಸಿಕೊಳ್ಳಬೇಕು.
- ವಿದ್ಯುತ್ ಸಂಪರ್ಕ ಪಡೆಯುವ ವೇಳೆ ನೊಂದಾಯಿತ ವಿದ್ಯುತ್ ಗುತ್ತಿಗೆದಾರರಿಂದ ವೈರಿಂಗ್ ಮತ್ತು ಎಲ್.ಸಿ.ಬಿ / ಇ.ಎಲ್.ಸಿ.ಬಿ ಸಾಧನವನ್ನು ಅಳವಡಿಸಿಕೊಳ್ಳುವುದು ಕಡ್ಡಾಯ
- ಗಣಪತಿ ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ಯಾವುದೇ ಇ.ಹೆಚ್.ಟಿ / ಹೆಚ್.ಟಿ / ಎಲ್.ಟಿ ವಿದ್ಯುತ್ ಮಾರ್ಗಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು
- ಉತ್ಸವಗಳು ನಡೆಯುವ ಸಂದರ್ಭದಲ್ಲಿ 100ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಜನಸಾಂದ್ರತೆ ಸೇರುವ ಸಾಧ್ಯತೆ ಇದ್ದಲ್ಲಿ ಕಡ್ಡಾಯವಾಗಿ ಸಂಬಂಧಪಟ್ಟ ವಿದ್ಯುತ್ ಪರಿವೀಕ್ಷಕರಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕು ಮತ್ತು ಅಗ್ನಿ ಶಾಮಕ ಸಾಧನವನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.
- 100ಕ್ಕಿಂತ ಕಡಿಮೆ ಜನ ಸಾಂದ್ರತೆ ಇದ್ದಲ್ಲಿ ಹೆಚ್ಚು ಜನ ಸೇರಲು ಸ್ಥಳಾವಕಾಶವಿಲ್ಲ ಎಂದು ಪತ್ರ ಬರೆದುಕೊಡಬೇಕು.
- ವಿದ್ಯುತ್ ಸಂಬಂಧಿಸಿದ ಅಹಿತಕರ ಘಟನೆಗಳಿಗೆ ಆಯೋಜಕರೇ ಜವಾಬ್ದಾರರು
- ಅನಧೀಕೃತ ಅಥವಾ ಅಕ್ರಮ ಮಂಜೂರಾದ ವಿದ್ಯುತ್ ಬಾರಕ್ಕಿಂತ ಹೆಚ್ಚುವರಿಯಾಗಿ ವಿದ್ಯುತ್ ಬಳಕೆ ನಿಷೇಧ
- ಬೀದಿಗಳಲ್ಲಿ ಗಣೇಶನ ಮೆರವಣೆಗೆ ಮಾಡುವ ರಸ್ತೆಯ ನಕ್ಷೆ ಮತ್ತು ದಿನಾಂಕವನ್ನು ಮೊದಲೇ ಕಾರ್ಯಕ್ರಮದ ಆಯೋಜಕರು ನಿಗದಿಪಡಿಸಿಕೊಳ್ಳಬೇಕು ನಂತರ ಸಂಬಂಧಪಟ್ಟ ಬೆಸ್ಕಾಂ ಉಪ-ವಿಭಾಗದ ಅಧಿಕಾರಿಗಳಿಗೆ ನೀಡಲು ಸೂಚನೆ ನೀಡಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ