ಬೆಸ್ಕಾಂ ಸಿಬ್ಬಂದಿಗೆ ಜಾತಿ ಗಣತಿ ಕೆಲಸ: ಮೀಟರ್ ರೀಡಿಂಗ್ ವಿಳಂಬದಿಂದ ಗ್ರಾಹಕರಿಗೆ ಬರೆ!
ಕರ್ನಾಟಕದಲ್ಲಿ ಜಾತಿ ಸಮೀಕ್ಷೆ ಕುರಿತ ವಿಷಯಗಳು ಚರ್ಚೆಯಾಗುತ್ತಿದ್ದರೆ, ಇತ್ತ ಬೆಂಗಳೂರಿನ ಜನರಿಗೆ ಜಾತಿ ಸಮೀಕ್ಷೆಯಿಂದ ಮತ್ತೊಂದು ರೀತಿಯ ಸಂಕಷ್ಟ ಎದುರಾಗಿದೆ. ಮನೆ ಮನೆ ಸಮೀಕ್ಷೆ ವೇಳೆ ಜಿಯೋ ಟ್ಯಾಗಿಂಗ್ ಮಾಡಲು ಸರ್ಕಾರ ಬೆಸ್ಕಾಂ ಸಿಬ್ಬಂದಿ ಬಳಸಿಕೊಳ್ಳುತ್ತಿರುವುದರಿಂದ ಬೆಂಗಳೂರಿಗರ ವಿದ್ಯುತ್ ಬಿಲ್ ಮೇಲೆ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ. ಕಳೆದೆರಡು ತಿಂಗಳಿಂದ ವಿದ್ಯುತ್ ಬಿಲ್ ದಿಢೀರ್ ಏರಿಕೆ ಕಂಡಿದ್ದು, ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತವಾಗಿದೆ.

ಬೆಂಗಳೂರು, ಸೆಪ್ಟೆಂಬರ್ 23: ರಾಜ್ಯದಲ್ಲಿ ಜಾತಿ ಸಮೀಕ್ಷೆ (Caste Census) ನಡೆಸುತ್ತಿರುವ ಸರ್ಕಾರ, ಇದೀಗ ಆ ಸಮೀಕ್ಷೆ ನಡೆಸಲು ಬೆಸ್ಕಾಂ (BESCOM) ಸಿಬ್ಬಂದಿಗೂ ಜವಾಬ್ದಾರಿ ವಹಿಸಿರುವುದರಿಂದ ಬೆಂಗಳೂರಿನ (Bengaluru) ಜನರಿಗೆ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ. 2025 ರ ಆಗಸ್ಟ್ 23 ರಿಂದ ರಾಜಧಾನಿಯಲ್ಲೂ ಮೀಟರ್ ರೀಡರ್ಗಳಿಗೆ ಜಿಯೋ ಟ್ಯಾಗ್ ಮಾಡುವ ಕೆಲಸ ಕೊಟ್ಟಿರುವ ಸರ್ಕಾರ, ಆ ಮೂಲಕ ಜಾತಿ ಸಮೀಕ್ಷೆ ನಡೆಸುವ ಜವಾಬ್ದಾರಿ ವಹಿಸಿದೆ. ಇತ್ತ ಮೀಟರ್ ರೀಡರ್ಗಳಿಗೆ ಈ ಕೆಲಸ ಕೊಟ್ಟಿರುವುದರಿಂದ ಅವರು ಸರಿಯಾದ ಸಮಯಕ್ಕೆ ರೀಡಿಂಗ್ ನೋಡಿ ಬಿಲ್ ಕೊಟ್ಟಿಲ್ಲ ಎಂಬ ಆರೋಪ ಕೇಳಿಬರಲು ಶುರುವಾಗಿದೆ. ಇದರಿಂದ ಕಳೆದ ಎರಡು ತಿಂಗಳಿಂದ ವಿದ್ಯುತ್ ಬಿಲ್ ದಿಢೀರ್ ಏರಿಕೆಯಾಗಿರವುದು ಜನರು ಕಂಗಾಲಾಗುವಂತೆ ಮಾಡಿದೆ.
ರಾಜಧಾನಿಯಲ್ಲಿ ಪ್ರತಿ ತಿಂಗಳು 11 ಅಥವಾ 12 ನೇ ತಾರೀಖಿನಂದು ಮೀಟರ್ ರೀಡಿಂಗ್ ತೆಗೆದುಕೊಂಡು ಬಿಲ್ ಕೊಡುತ್ತಿದ್ದ ಮೀಟರ್ ರೀಡರ್ಗಳು ಇದೀಗ ಬಿಲ್ ಕೊಡುವುದನ್ನು ವಿಳಂಬ ಮಾಡುತ್ತಿದ್ದಾರೆ. ಇದರಿಂದಾಗಿ ವಿದ್ಯುತ್ ಬಿಲ್ ಹೆಚ್ಚು ಬರುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಗೃಹಜ್ಯೋತಿ ಫಲಾನುಭವಿಗಳಿಗೂ ನೂರಾರು ರೂ. ಬಿಲ್!
ಸರ್ಕಾರದ ಗೃಹಜ್ಯೋತಿ ಯೋಜನೆಯಡಿಯಲ್ಲಿ ಉಚಿತ ಕರೆಂಟ್ ಪಡೆಯುತ್ತಿದ್ದವರಿಗೂ ಕಳೆದೆರಡು ತಿಂಗಳಿಂದ ನೂರಾರು ರೂಪಾಯಿ ಬಿಲ್ ಬರುತ್ತಿದ್ದು, ಇತ್ತ ಉಚಿತ ವಿದ್ಯುತ್ ಲಿಮಿಟ್ ಮುಗಿದ ಬಳಿಕ ಹೆಚ್ಚುವರಿ ಶುಲ್ಕಗಳನ್ನು ಸೇರಿಸಿ ಬಿಲ್ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇತ್ತ ಮೀಟರ್ ರೀಡರ್ಗಳಿಗೆ ಜಾತಿ ಸಮೀಕ್ಷೆಯ ಕೆಲಸ ಕೊಟ್ಟು ಒತ್ತಡ ಹೇರಿರುವ ಸರ್ಕಾರ, ಉಚಿತ ವಿದ್ಯುತ್ಗೂ ಸದ್ದಿಲ್ಲದೇ ಕತ್ತರಿ ಹಾಕಿದೆ ಎಂದು ಜನ ಆರೋಪಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಜಾತಿಗಣತಿ ಶುರು: ಹಲವಡೆ ಸಿಗದ ಕಿಟ್, ಟ್ರೈನಿಂಗ್ ಇಲ್ಲ, ಸರ್ವರ್ ಸಮಸ್ಯೆ
ಸದ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಡಿಯಲ್ಲಿ ಇನ್ನೂರು ಯೂನಿಟ್ ವಿದ್ಯುತ್ ಉಚಿತ ಕೊಡುತ್ತಿರುವ ಸರ್ಕಾರ, ಇದೀಗ ಹೆಚ್ಚಿನ ಬಿಲ್ ನೀಡಿ ಶಾಕ್ ಕೊಡುತ್ತಿರುವ ಆರೋಪ ಕೇಳಿಬಂದಿದೆ. ನಿಗದಿತ ಸಮಯದೊಳಗೆ ಬಿಲ್ ಕೊಟ್ಟು ಮೊತ್ತ ಕಟ್ಟಿಸಿಕೊಳ್ಳಬೇಕಿದ್ದ ಬೆಸ್ಕಾಂ ಇದೀಗ ಜನರಿಗೆ ಎದುರಾಗಿರುವ ಸಮಸ್ಯೆಗೆ ಯಾವ ರೀತಿ ಪರಿಹಾರ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



