ಬೆಂಗಳೂರು: ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆದ ಸರ್ಕಾರದ ನಿರ್ಣಯವು, ಅನಾವಶ್ಯಕ ವಿವಾದವನ್ನು ನಿವಾರಣೆ ಮಾಡುವ ದೃಷ್ಟಿಯಿಂದ ಸರಿಯಾಗಿ ಇರಬಹುದು ಆದರೆ ಇದು ತಥಾಕಥಿತ ಹೋರಾಟಗಾರರ ಹಟಮಾರಿ ಧೋರಣೆ ಯಿಂದಾಗಿ ನಿಜವಾದ ರೈತರಿಗೆ ದೀರ್ಘಕಾಲೀನ ನಷ್ಟವನ್ನು ಉಂಟು ಮಾಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವ ಘೋಷಣೆ ಮಾಡಿರುವುದರ ಬಗ್ಗೆ ಭಾರತೀಯ ಕಿಸಾನ್ ಸಂಘ ಇಂದು (ನವೆಂಬರ್ 19) ಪ್ರತಿಕ್ರಿಯೆ ನೀಡಿದೆ.
ಈ ಕಾನೂನುಗಳಲ್ಲಿನ ಲೋಪಗಳನ್ನು ಸರಿಮಾಡಿಸಿ ಜಾರಿ ಮಾಡಿಸಿದ್ದರೆ ರೈತರಿಗೆ, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೃಷಿ ವರ್ಗದವರಿಗೆ ಅಧಿಕವಾದ ಲಾಭವೇ ಆಗುತ್ತಿತ್ತು. ವಾಪಸ್ ಪಡೆದಿರುವುದು ನಿಜವಾದ ಸಣ್ಣ ಕೃಷಿಕರಿಗೆ ಅನ್ಯಾಯ ಆಗಿದೆ. ಪ್ರಧಾನ ಮಂತ್ರಿ ಅವರು ಕನಿಷ್ಠ ಬೆಂಬಲ ಬೆಲೆ (MSP)ಯನ್ನು ಮತ್ತಷ್ಟೂ ಪ್ರಭಾವಗೊಳಿಸುವ ಮಾತನಾಡಿದ್ದಾರೆ ಮತ್ತು ಇದಕ್ಕಾಗಿ ಒಂದು ಸಮಿತಿಯನ್ನು ನಿರ್ಮಿಸುವುದಾಗಿ ಉಲ್ಲೇಖ ಮಾಡಿದ್ದಾರೆ. ಭಾರತೀಯ ಕಿಸಾನ್ ಸಂಘ, ಇದನ್ನು ಸ್ವಾಗತ ಮಾಡುವುದರ ಜೊತೆಗೆ ಇದರಲ್ಲಿ ದೇಶದ ರಾಜಕೀಯೇತರ ಸಂಘಟನೆಗಳ ಮತ್ತು ತಜ್ಞರ ಪ್ರತಿನಿಧಿತ್ವ ಇರುವಂತೆ ನಿಶ್ಚಯ ಮಾಡಲು ಆಗ್ರಹಿಸುತ್ತದೆ ಎಂದು ತಿಳಿಸಿದೆ.
ಭಾರತೀಯ ಕಿಸಾನ್ ಸಂಘದ ಪ್ರಕಾರ, ಆಗುತ್ತಿರುವ ಸಮಸ್ಯೆಯೆಂದರೆ ಮಾರುಕಟ್ಟೆಯಲ್ಲಿ ರೈತರ ಶೋಷಣೆ ಮಾರುಕಟ್ಟೆಯ ಬೆಲೆಯ ಆಧಾರದಲ್ಲಿ ಲಾಭದಾಯಕ ಬೆಲೆಯನ್ನು ಪಡೆಯಲು ಅನುಕೂಲವಾಗುವಂತೆ ಕಾನೂನನ್ನು ನಿರ್ಮಿಸಿ ಖರೀದಿ ಗ್ಯಾರಂಟಿ ಕೊಡುವ ಅವಶ್ಯಕತೆ ಇದೆ. ಸರಕಾರ ಈ ಬಗ್ಗೆ ಕ್ರಮ ವಹಿಸಲು ಆಗ್ರಹಿಸುತ್ತೇವೆ ಎಂದು ಭಾರತೀಯ ಕಿಸಾನ್ ಸಂಘದ ಗಂಗಾಧರ್ ಕಾಸರಘಟ್ಟ ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ರೈತರಲ್ಲಿ ನಂಬಿಕೆ ಮೂಡಿಸುವಲ್ಲಿ ವಿಫಲ: ಹೆಚ್ಡಿ ಕುಮಾರಸ್ವಾಮಿ