ಬೆಂಗಳೂರು: ಶಾಲೆಯಲ್ಲಿ ದಿನನಿತ್ಯ ಬೈಬಲ್ ಓದುವುದು ಕಡ್ಡಾಯಗೊಳಿಸುವ ಮೂಲಕ ವಿದ್ಯಾರ್ಥಿಗಳ ಮೇಲೆ ಕ್ರೈಸ್ತ ಧರ್ಮವನ್ನು ಹೇರಲಾಗುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಂಗಳೂರಿನ ರಿಚರ್ಡ್ ಟೌನ್ನಲ್ಲಿರುವ ಕ್ಲಾರೆನ್ಸ್ ಪ್ರೌಢಶಾಲೆಯಲ್ಲಿ ನಡೆದಿದೆ. ಬೈಬಲ್ ವಿರೋಧಿಸಿದರೆ ಶಾಲೆಗೆ ದಾಖಲಾತಿ ಸಿಗುವುದಿಲ್ಲ. ಶಾಲೆಯಲ್ಲಿ ಬೈಲ್ ಓದುವುದು ಕಡ್ಡಾಯ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಆಡಳಿತ ಮಂಡಳಿಯ ನಡೆಗೆ ಹಿಂದೂ ಜನಜಾಗೃತಿ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಆಡಳಿತ ಮಂಡಳಿಯು ಹೇರುತ್ತಿರುವ ಈ ನಿಯಮವು ಮಕ್ಕಳ ಹಕ್ಕುಗಳ ಸಂರಕ್ಷಣೆ ಅಧಿನಿಯಮ 2005 ಹಾಗೂ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದೆ. ಮಕ್ಕಳು ಉತ್ತಮ ನಾಗರಿಕನಾಗಲು ಬೈಬಲ್ ಕಲಿಕೆ ಮುಖ್ಯ. ಬೈಬಲ್ ಕಲಿಕೆ ವಿರೋಧಿಸುವವರಿಗೆ ಶಾಲೆಯಲ್ಲಿ ಅಡ್ಮಿಷನ್ ಸಿಗುವುದಿಲ್ಲ. ದಿನನಿತ್ಯ ಬೈಬಲ್ ಓದುವುದು ಶಾಲೆಯಲ್ಲಿ ಕಡ್ಡಾಯ ಎಂದು ಆಡಳಿತ ಮಂಡಳಿ ತಿಳಿಸಿದೆ.
ಕ್ಲಾರೆನ್ಸ್ ಸ್ಕೂಲ್ ಬೈಬಲ್ ಓದುವುದನ್ನು ಕಡ್ಡಾಯಗೊಳಿಸಿರುವ ಕುರಿತು ರಿಪಬ್ಲಿಕ್ ವರ್ಲ್ಡ್ ಜಾಲತಾಣಕ್ಕೆ ಪ್ರತಿಕ್ರಿಯಿಸಿರುವ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ, ‘ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಕ್ಲಾರೆನ್ಸ್ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಬೈಬಲ್ ಇರಿಸಿಕೊಳ್ಳಬೇಕು. ಓದಬೇಕು ಎಂಬ ನಿಯಮವಿದೆ. ಶಾಲೆಯ ದಾಖಲಾತಿ ಅರ್ಜಿಯಲ್ಲಿಯೂ ಈ ಅಂಶವನ್ನು ನಮೂದಿಸಲಾಗಿದೆ. ಶಾಲೆಯಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರದ ಹಲವು ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಒತ್ತಾಯಪೂರ್ವಕವಾಗಿ ಬೈಬಲ್ ಕಲಿಸಲಾಗುತ್ತಿದೆ’ ಎಂದು ದೂರಿದ್ದಾರೆ.
ಶಾಲೆಯ ಈ ನಡೆಯು ಸಂವಿಧಾನದ 25 ಮತ್ತು 30ನೇ ವಿಧಿಗಳ ಉಲ್ಲಂಘನೆಯಾಗುತ್ತದೆ. ಯಾವುದೇ ಶಿಕ್ಷಣ ಸಂಸ್ಥೆಯು ಧಾರ್ಮಿಕ ನಂಬಿಕೆಗಳನ್ನು ಹೇರುವಂತಿಲ್ಲ ಎಂಬ ನಿಯಮವಿದೆ ಎಂದು ಮೋಹನ್ ಗೌಡ ತಿಳಿಸಿದ್ದಾರೆ.
ಇದನ್ನೂ ಓದಿ: Gadag Jail: ಗದಗ ಕಾರಾಗೃಹದಲ್ಲಿ ಕೈದಿಗಳಿಗೆ ಕ್ರೈಸ್ತರ ಬೈಬಲ್ ಹಂಚುವ ಮೂಲಕ ಮತಾಂತರ ನಡೆಸಿದ ಆರೋಪ
ಇದನ್ನೂ ಓದಿ: ಸಂವಿಧಾನದಲ್ಲಿ ಇರುವ ವಿಚಾರಗಳೇ ಬೈಬಲ್, ಕುರಾನ್, ಭಗವದ್ಗೀತೆಯಲ್ಲಿ ಇದೆ: ಡಿಕೆ ಶಿವಕುಮಾರ್