ಉಡುಪಿ: ಮಠಗಳಿಗೆ ಅನುದಾನ ಬಿಡುಗಡೆ ಮಾಡಲೂ ರಾಜ್ಯ ಸರ್ಕಾರ ಪರ್ಸೆಂಟೇಜ್ ಕೇಳುತ್ತಿದೆ ಎಂಬ ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಆರೋಪ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ದಿಂಗಾಲೇಶ್ವರ ಸ್ವಾಮೀಜಿ ಸೋಮವಾರ (ಏಪ್ರಿಲ್ 18) ಮಾಡಿದ್ದ ಆರೋಪಕ್ಕೆ ಮಂಗಳವಾರ ಹಲವು ಸ್ವಾಮೀಜಿ ಹಾಗೂ ರಾಜಕೀಯ ನಾಯಕರು ಪ್ರತಿಕ್ರಿಯಿಸಿದ್ದಾರೆ. ರಾಜ್ಯ ಸರ್ಕಾರವನ್ನು ಸಮರ್ಥಿಸಿಕೊಂಡಿರುವ ಹಲವರು, ‘ಆಧಾರವಿಲ್ಲದೆ ಆರೋಪ ಮಾಡುವುದು ತಪ್ಪು’ ಎಂದು ದಿಂಗಾಲೇಶ್ವರರಿಗೆ ಕಿವಿಮಾತು ಹೇಳಿದ್ದಾರೆ.
ಸರ್ಕಾರ ಅನುದಾನ ಬಿಡುಗಡೆಗೆ ಪರ್ಸೆಂಟೇಜ್ ವಸೂಲಿ ಮಾಡಲಾಗುತ್ತಿದೆ ಎಂಬ ದಿಂಗಾಲೇಶ್ವರಶ್ರೀ ಆರೋಪಕ್ಕೆ ತಿರುಗೇಟು ನೀಡಿರುವ ಉಡುಪಿ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ದೇಶದಲ್ಲಿ ದೇವಾಲಯಗಳ ಸಂಖ್ಯೆ ಕಡಿಮೆಯೇನೂ ಇಲ್ಲ. ದೇವಾಲಯದ ಸಂಪಾದನೆಯೂ ಅಲ್ಪ ಎನ್ನುವ ಹಾಗಿಲ್ಲ. ಎ ಗ್ರೇಡ್ ದೇವಾಲಯಗಳಿಂದ ಬರುವ ಸಂಪತ್ತು ಸದ್ಬಳಕೆ ಆಗಬೇಕು. ಹಿಂದಿನ ಸರ್ಕಾರದಲ್ಲಿ ಆ ಸಂಪತ್ತು ಎಲ್ಲೆಲ್ಲೋ ಹೋಗುತ್ತಿತ್ತು. ಬಡ ದೇಗುಲ, ಮಠಮಂದಿರಗಳಿಗೆ ಸಮಸ್ಯೆಯಾದಾಗ ನೆರವು ಸಿಗುತ್ತಿದೆ ಎಂದು ಹೇಳಿದರು.
ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ದೇವಾಲಯಗಳ ಸಂಪತ್ತನ್ನು ಬಡ ದೇವಾಲಯ ಮಠ ಮಂದಿರಗಳಿಗೆ ತಲುಪಿಸುವ ಕಾಳಜಿ ಇರಿಸಿಕೊಂಡಿರುವುದು ಶ್ಲಾಘನೀಯ ಅಂಶ. ಕಾಶಿಯಾತ್ರೆ ಮಾಡುವವರಿಗೂ ಧನಸಹಾಯ ಸಿಗುತ್ತಿದೆ. ಇದು ಅಭಿನಂದನೀಯ ಸಂಗತಿ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ಪಲಿಮಾರು ಮಠಕ್ಕೂ ಧನಸಹಾಯ ಘೋಷಿಸಿದ್ದರು. ಧನಸಹಾಯ ನೀಡುವ ವೇಳೆ ಯಾರೂ ಕೂಡ ಫಲಾಪೇಕ್ಷೆ ಪಡೆದಿಲ್ಲ. ಶಾಸಕರು, ಮಂತ್ರಿಗಳು ಹಾಗೂ ಮುಜರಾಯಿ ವ್ಯವಸ್ಥೆ ಯಾವುದರಲ್ಲೂ ಸ್ವಾರ್ಥ ಧೋರಣೆ ಕಂಡುಬಂದಿಲ್ಲ/ ಈ ನಡುವೆ ಕೇಳಿ ಬಂದಿರುವ ಅಪಸ್ವರ ಅವರ ಸ್ವಂತ ಅಭಿಪ್ರಾಯ ಆಗಿರಲಿಕ್ಕಿಲ್ಲ. ಇದರ ಹಿಂದೆ ಯಾವುದೋ ಕಾರಣ ಇರಬಹುದು. ಪ್ರಾಮಾಣಿಕ ಸೇವೆಯಲ್ಲಿ ಹುಳಿ ಹಿಂಡುವ ಕೆಲಸ ಆಗಬಾರದು. ಈ ಸರ್ಕಾರಕ್ಕೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು ಎಂದರು.
ಎಲ್ಲರನ್ನೂ ಒಂದೇ ರೀತಿಯಲ್ಲಿ ತೆಗೆದುಕೊಂಡು ಹೋಗುವ ಕಾರ್ಯ ತುಂಬಾ ಕಷ್ಟದ್ದು. ಈ ಹಿಂದೆ ಇದ್ದ ಓಲೈಕೆ ರಾಜಕಾರಣ ಈಗ ಕಡಿಮೆಯಾಗಿದೆ. ಮಠ ಮಂದಿರಗಳಿಗೆ ಈವರೆಗೆ ಸಿಗದ ಪರಿಹಾರ ಈಗ ಸಿಗುತ್ತಿದೆ. ಇದು ಅಭಿನಂದನೀಯ ಸಂಗತಿ. ಯಾವುದೋ ಹುಳುಕು ದೊಡ್ಡದು ಮಾಡುವ ತಪ್ಪು ಚಿಂತನಾ ವಿಧಾನವನ್ನು ಎಲ್ಲರೂ ಬಿಡಬೇಕು ಎಂದು ಅಗ್ರಹಿಸಿದರು.
ಅದು ವೈಯಕ್ತಿಕ ಹೇಳಿಕೆ
ಬಾಗಲಕೋಟೆ: ಅನುದಾನ ಪಡೆಯಲು ಕಮಿಷನ್ ನೀಡಬೇಕಾಗುತ್ತದೆ ಎನ್ನುವುದು ದಿಂಗಾಲೇಶ್ವರ ಸ್ವಾಮೀಜಿ ಅವರ ವೈಯಕ್ತಿಕ ಹೇಳಿಕೆ ಎಂದು ಕೂಡಲಸಂಗಮ ಬಸವಪೀಠದ ಮಾದೇಶ್ವರಶ್ರೀ ಹೇಳಿದರು. ಬಸವಪೀಠವು ಯಾವುದೇ ಸರ್ಕಾರದಿಂದ ಅನುದಾನ ಪಡೆದಿಲ್ಲ. ಸರ್ಕಾರದ ತೆರಿಗೆ ಹಣ ಬಡವರಿಗೆ ಸಲ್ಲಬೇಕು ಎಂದು ಲಿಂಗೈಕ್ಯ ಮಾತೆ ಮಹಾದೇವಿ ಅವರು 2010ರಲ್ಲಿ ಬೀದರ್ನಲ್ಲಿ ಹೇಳಿದ್ದರು ಎಂದು ನೆನಪಿಸಿಕೊಂಡರು.
ಯಾವುದೇ ಪಕ್ಷದ ಸರ್ಕಾರ ಬಂದರೂ ಮಠಗಳಿಗೆ ಅನುದಾನ ಕೊಡುವುದರಲ್ಲಿ ತಾರತಮ್ಯ ಮಾಡಬಾರದು. ಶ್ರೀಮಂತ ಮಠ ಇರಲಿ, ಬಡವರ ಮಠ ಇರಲಿ, ಸರ್ಕಾರಗಳು ಪ್ರತಿ ಮಠಕ್ಕೂ ಅನುದಾನ ಕೊಡಬೇಕು. ವಿಶೇಷ ಅನುದಾನ ಇರಲಿ, ವೈಯಕ್ತಿಕ ನಿಧಿ ಇರಲಿ ಒಂದೇ ಮಠಕ್ಕೆ ಕೊಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಯಾರಿಗೂ ಕಮಿಷನ್ ಕೊಟ್ಟಿಲ್ಲ
ಕೊಪ್ಪಳ: ಅನುದಾನ ಪಡೆಯಲು ಶೇ 30ರ ಕಮಿಷನ್ ಕೊಡಬೇಕು ಎನ್ನುವ ಆರೋಪ ಕುರಿತು ಕೊಪ್ಪಳದಲ್ಲಿ ಪ್ರತಿಕ್ರಿಯಿಸಿರುವ ಕೊಪ್ಪಳದಲ್ಲಿ ಜಯಮೃತ್ಯುಂಜಯ ಸ್ವಾಮೀಜಿ, ಸ್ವಾಮೀಜಿಗಳಿಂದ ಯಾರೂ ಕಮಿಷನ್ ಕೇಳುವುದಿಲ್ಲ. ಸ್ವಾಮೀಜಿಗಳಿಗೆ ದಕ್ಷಿಣೆ ನೀಡುವ ಸಂಸ್ಕೃತಿ ಇದೆ ಎಂದರು.
ಸ್ವಾಮೀಜಿ ಹೀಗೆ ಮಾತನಾಡಬಾರದು: ಹೊರಟ್ಟಿ
ಹಾವೇರಿ: ದಿಂಗಾಲೇಶ್ವರ ಸ್ವಾಮೀಜಿ ಪರ್ಸೆಂಟೇಜ್ ಬಗ್ಗೆ ನೀಡಿರುವ ಹೇಳಿಕೆ ಸರಿಯಲ್ಲ. ಸ್ವಾಮೀಜಿಯೇ ಆಗಲಿ, ನಾನೇ ಆಗಲಿ ಹೀಗೆ ಮಾತನಾಡಬಾರದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಇಂಥ ಆರೋಪಗಳನ್ನೇ ಮಾಡಿಕೊಂಡು ಹೊರಟರೆ ಸಾರ್ವಜನಿಕ ಬದುಕಿನಲ್ಲಿ ನಾವು ಏನು ಸಾಧನೆ ಮಾಡಿದಂತೆ ಆಗುತ್ತದೆ? ರಾಜ್ಯದಲ್ಲಿ ಎಷ್ಟೆಲ್ಲಾ ಅನಾಹುತಗಳು ಸಂಭವಿಸಿದವು ನೋಡಿ. ಒಬ್ಬ ಮಂತ್ರಿ ರಾಜೀನಾಮೆ ಕೊಡಬೇಕಾಯಿತು. ಗೌರವದಿಂದ ಇರುವ ಮಟ್ಟ ಪ್ರಜಾಪ್ರಭುತ್ವದಲ್ಲಿ ಕಡಿಮೆ ಆಗುತ್ತಿದೆ. ಒಳ್ಳೆಯರು ಕೆಟ್ಟವರು, ಕೆಟ್ಟವರು ಒಳ್ಳೆಯರು ಅನ್ನೋ ಹಾಗಾಗುತ್ತೆ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಾರೆ ಎಂದು ವಿಷಾದಿಸಿದರು.
ನಾನು ಚುನಾವಣೆಗೆ ನಿಲ್ಲುತ್ತೇನೆ, ಗೆಲ್ಲುತ್ತೇನೆ. ಶಿಕ್ಷಕರು ನನ್ನನ್ನು ಯಾವಾಗಲೂ ಕೈಬಿಟ್ಟಿಲ್ಲ, ಬಿಡುವುದಿಲ್ಲ. ಇಪ್ಪತ್ತು ನಾಲ್ಕು ಗಂಟೆ ಕೆಲಸ ಮಾಡುವವನನ್ನು ಬಿಟ್ಟು ಬೇರೆಯವರಿಗೆ ಯಾಕೆ ವೋಟು ಹಾಕುತ್ತಾರೆ ಹೇಳಿ. ಸಭಾಪತಿ ಇದ್ದವನು ಪಕ್ಷಾಂತರ ಮಾಡಿ ಹೋಗಬೇಕಾ? ಹಾಗಿದ್ದರೆ ರಾಜೀನಾಮೆ ಕೊಟ್ಟು ಹೋಗುವೆ. ಬರುವ ಚುನಾವಣೆಯಲ್ಲಿ ಬಿಜೆಪಿಗೆ ಹೋಗುವ ಬಗ್ಗೆ ವಿಚಾರ ಮಾಡುತ್ತೇನೆ. ಅನೇಕ ಸ್ನೇಹಿತರು ಕರೆಯುತ್ತಿದ್ದಾರೆ ಅಂತಾ ಹೇಳಿದ್ದೇನೆ, ಅದರಲ್ಲಿ ತಪ್ಪೇನಿದೆ? ಸಂವಿಧಾನಬದ್ಧ ಹುದ್ದೆಯಲ್ಲಿದ್ದು ಎಲ್ಲೋ ಬಾರ್ ನಲ್ಲಿ ಹೋಗಿ ಕೂತರೆ ಹುದ್ದೆ ಮುರಿದಂತೆ. ನಾನು ಅಚ್ಚುಕಟ್ಟಾಗಿ ಕಟ್ಟುನಿಟ್ಟಿನಿಂದ ಸದನ ನಡೆಸಿದ್ದೇನೆ. ಯಾವುದರಲ್ಲೂ ನಿಯಮ ಬಿಟ್ಟು ಏನೂ ಮಾಡಿಲ್ಲ. ಕೆಲವರು ನನ್ನನ್ನು ಬಿಜೆಪಿಗೆ ಸೇರುವಂತೆ ಕೇಳಿದರು. ಪಕ್ಷೇತರನಾಗಿ ನಿಂತರೆ ಸಪೋರ್ಟ್ ಮಾಡುತ್ತೇನೆ ಅಂದರು. ನಮ್ಮದು ರಾಷ್ಟ್ರೀಯ ಪಕ್ಷ. ಅದದಿಂದಲೆ ಯಾಕೆ ನಿಲ್ಲಬಾರದು ಎಂದು ಕೇಳಿದರು. ವಿಚಾರ ಮಾಡಿ ಹೇಳುತ್ತೇನೆ ಎಂದಿದ್ದೇನೆ ಎಂದರು.
ಕಾಂಗ್ರೆಸ್ ಮತ್ತು ಕಮಿಷನ್ ಒಟ್ಟಿಗೆ ಹುಟ್ಟಿದ್ದು: ಸುನಿಲ ಕುಮಾರ್
ಬಾಗಲಕೋಟೆ: ಮಠಗಳಿಗೆ ಅನುದಾನ ನೀಡಲು ಕಮಿಷನ್ ಕೇಳಿದ ಆರೋಪ ಕುರಿತು ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ಕಾಂಗ್ರೆಸ್ ಇರುವವರೆಗೂ ಕಮಿಷನ್ ಬೆಳೆಯುತ್ತದೆ. ಇಡೀ ವ್ಯವಸ್ಥೆ ಹಾಳು ಮಾಡಿದ ಕೀರ್ತಿ ಕಾಂಗ್ರೆಸ್ಗೆ ಸಲ್ಲಬೇಕು. ಸಾಧುಸಂತರ ಬಗ್ಗೆ ನಮಗೆ ವಿಶೇಷವಾದ ಗೌರವವಿದೆ. ಹೇಳಿದ್ದರ ಬಗ್ಗೆ ಬಹಿರಂಗವಾಗಿ ದಾಖಲೆ ಕೊಡಬೇಕು. ಬಹಿರಂಗವಾಗಿ ಕೊಡದಿದ್ರೆ ಸಿಎಂ ಬಳಿಯಾದರೂ ಕೊಡಿ ಎಂದು ವಿನಂತಿಸಿದರು.
ಅವರ ರೌಡಿಸಂ ಎಲ್ಲರಿಗೂ ಗೊತ್ತಿದೆ: ಸಿಸಿ ಪಾಟೀಲ
ಬೆಂಗಳೂರು: ಬೇರೊಂದು ಮಠದ ಸ್ವಾಮೀಜಿ ಜಯಂತಿಯನ್ನು ಭಾವೈಕ್ಯತೆಯ ದಿನ ಎಂದು ಘೋಷಿಸಿದ್ದಕ್ಕೆ ಇಂಥ ಆರೋಪ ಮಾಡುವುದು ಸರಿಯೇ ಎಂದು ಸಚಿವ ಸಿ.ಸಿ.ಪಾಟೀಲ ದಿಂಗಾಲೇಶ್ವರ ಸ್ವಾಮೀಜಿಯನ್ನು ಪ್ರಶ್ನಿಸಿದರು. ಪೀಠದಲ್ಲಿದ್ದಾರೆ ಎನ್ನುವ ಕಾರಣಕ್ಕೆ ದಿಂಗಾಲೇಶ್ವರ ಸ್ವಾಮೀಜಿಯನ್ನು ಒಪ್ಪಬೇಕಾಗುತ್ತದೆ. ದಿಂಗಾಲೇಶ್ವರ ಶ್ರೀಗಳಿಗಿಂತ ಮೊದಲು ಆ ಮಠಕ್ಕೆ ದೊಡ್ಡ ಭವಿಷ್ಯ ಇತ್ತು. ಅವರ ಮಠಕ್ಕೆ ಅನುದಾನ ಕೊಟ್ಟಿದ್ದರೆ ಹೆಗಲ ಮೇಲೆ ಹೊತ್ತುಕೊಂಡು ಮೆರೆಸುತ್ತಿದ್ದರಾ? ಮೂರು ಸಾವಿರ ಮಠದ ಪೀಠಕ್ಕಾಗಿ ಯಾವ ರೀತಿ ರೌಡಿಸಂ ಮಾಡಿದ್ದಾರೆ ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ದಾಖಲೆ ಕೊಡಲಿ: ನಳಿನ್ ಕುಮಾರ್ ಕಟೀಲ್
ಬಳ್ಳಾರಿ: ಮಠಗಳಿಗೆ ಅನುದಾನ ಬಿಡುಗಡೆ ಮಾಡಲು ಕಮಿಷನ್ ಪಡೆಯಲಾಗುತ್ತಿದೆ ಎಂದು ಸುಮ್ಮನೆ ಆರೋಪ ಮಾಡುವುದಲ್ಲ. ದಾಖಲೆಗಳಿದ್ದರೆ ಕೊಡಬೇಕು. ಮುಖ್ಯಮಂತ್ರಿಗಳೂ ಈಗಾಗಲೇ ದಾಖಲೆ ಕೇಳಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಸಮುದಾಯಗಳ ನಡುವೆ ಬೆಂಕಿ ಹಾಕುವ ಕೆಲಸ ಮಾಡುವವರ ವಿರುದ್ಧ ಉತ್ತರಪ್ರದೇಶ ಮಾದರಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಾನೂನು ವಿರೋಧಿ ಕೃತ್ಯದಲ್ಲಿ ಭಾಗಿಯಾದವರನ್ನ ಬಿಡೋ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.
ಇದನ್ನೂ ಓದಿ: ಮಠಗಳಿಂದಲೂ ಕಮಿಷನ್ ಕೇಳುವ ಸರ್ಕಾರ: ದಿಂಗಾಲೇಶ್ವರ ಸ್ವಾಮೀಜಿ ಗಂಭೀರ ಅರೋಪ