ಶಾಸಕ ಸತೀಶ್​ ರೆಡ್ಡಿ ಮನೆಯಂಗಳ ಸ್ವಚ್ಛ ಮಾಡಲು 15ಕ್ಕೂ ಹೆಚ್ಚು ಪೌರಕಾರ್ಮಿಕರ ಬಳಕೆ

| Updated By: Skanda

Updated on: Aug 13, 2021 | 8:25 AM

ಬೊಮ್ಮನಹಳ್ಳಿ ವಾರ್ಡ್​ ಸ್ವಚ್ಛತೆ ಮಾಡಬೇಕಿದ್ದವರು ಶಾಸಕರ ಮನೆ ಆಳುಗಳಂತಾಗಿರುವುದು ಆಕ್ಷೇಪಾರ್ಹವಾಗಿದ್ದು, ಇಷ್ಟೆಲ್ಲ ಆದರೂ ಹೇಳುವವರು ಕೇಳುವವರು ಯಾರೂ ಇಲ್ಲವೇ ಎಂಬ ಪ್ರಶ್ನೆ ಮೂಡಿದೆ.

ಶಾಸಕ ಸತೀಶ್​ ರೆಡ್ಡಿ ಮನೆಯಂಗಳ ಸ್ವಚ್ಛ ಮಾಡಲು 15ಕ್ಕೂ ಹೆಚ್ಚು ಪೌರಕಾರ್ಮಿಕರ ಬಳಕೆ
ಸುಟ್ಟು ಕರಕಲಾದ ಕಾರುಗಳು
Follow us on

ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಆದರೆ, ಇತ್ತ ಮನೆಯಂಗಳದಲ್ಲಿ ಆಗಿರುವ ರಂಪಾಟವನ್ನು ಸ್ವಚ್ಛಗೊಳಿಸಲು ಸತೀಶ್​ ರೆಡ್ಡಿ ಪೌರ ಕಾರ್ಮಿಕರನ್ನು ಜೀತದಾಳುಗಳಂತೆ ಬಳಸಿಕೊಂಡ ಗಂಭೀರ ಆರೋಪ ಕೇಳಿಬಂದಿದ್ದು, ಅವರ ಮೇಲೆ ಆಕ್ರೋಶ ಮೂಡಲು ಕಾರಣವಾಗಿದೆ. 15 ಕ್ಕೂ ಹೆಚ್ಚು ಪೌರಕಾರ್ಮಿಕರನ್ನು ಮನೆ ಸ್ವಚ್ಛತೆಗೆಂದು ಶಾಸಕ ಸತೀಶ್ ರೆಡ್ಡಿ ಬಳಸಿಕೊಂಡಿದ್ದು, ಬೊಮ್ಮನಹಳ್ಳಿ ವಾರ್ಡ್ ಕ್ಲೀನ್ ಮಾಡಬೇಕಾಗಿದ್ದ ಪೌರಕಾರ್ಮಿಕರು ಸತೀಶ್ ರೆಡ್ಡಿ ಮನೆ ಅಂಗಳವನ್ನು ತಿಕ್ಕಿ ತೊಳೆಯುತ್ತಿದ್ದಾರೆ. ಆ ಬಗ್ಗೆ ಪೌರಕಾರ್ಮಿಕರನ್ನೇ ಕೇಳಿದರೆ ಎಂಎಲ್​ಎ ಹೇಳಿದ್ದಾರೆ ಎಂದು ಅಸಹಾಯಕತೆಯನ್ನೂ ವ್ಯಕ್ತಪಡಿಸಿದ್ದಾರೆ.

ಬೊಮ್ಮನಹಳ್ಳಿ ವಾರ್ಡ್​ ಸ್ವಚ್ಛತೆ ಮಾಡಬೇಕಿದ್ದವರು ಶಾಸಕರ ಮನೆ ಆಳುಗಳಂತಾಗಿರುವುದು ಆಕ್ಷೇಪಾರ್ಹವಾಗಿದ್ದು, ಇಷ್ಟೆಲ್ಲ ಆದರೂ ಹೇಳುವವರು ಕೇಳುವವರು ಯಾರೂ ಇಲ್ಲವೇ ಎಂಬ ಪ್ರಶ್ನೆ ಮೂಡಿದೆ. 15 ಕ್ಕೂ ಹೆಚ್ಚು ಪೌರಕಾರ್ಮಿಕರು ಸತೀಶ್ ರೆಡ್ಡಿ ಅವರ ಮನೆಯಂಗಳವನ್ನು ತೊಳೆಯುತ್ತಿದ್ದು, ಶಾಸಕರಾದ ಮಾತ್ರಕ್ಕೆ ಈ ರೀತಿ ಅಧಿಕಾರ ಚಲಾಯಿಸುವುದು ಎಷ್ಟು ಸರಿ ಎಂದು ಎಲ್ಲರೂ ಕೇಳುವಂತಾಗಿದೆ. ಕಾರಿಗೆ ಬೆಂಕಿ ಬಿದ್ದಿದೆ ಎಂದು ಎಲ್ಲರೂ ಅನುಕಂಪ ತೋರುತ್ತಿದ್ದ ಹೊತ್ತಿನಲ್ಲೇ ಶಾಸಕ ಸತೀಶ್ ರೆಡ್ಡಿ ಈ ರೀತಿ ಪೌರಕಾರ್ಮಿಕರನ್ನು ಸ್ವಚ್ಛತಾ ಕಾರ್ಯಕ್ಕೆ ಬಳಸಿಕೊಂಡು ಪ್ರಜ್ಞಾವಂತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬೆಡ್​ಬ್ಲಾಕಿಂಗ್​ ದಂಧೆ ಬಯಲು ಮಾಡಿದ್ದಕ್ಕಾಗಿ ಕಾರಿಗೆ ಬೆಂಕಿ?
ಸತೀಶ್​ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಇಡಲು ಕಾರಣವೇನು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದ್ದು ಅದಕ್ಕೆ ಸಂಬಂಧಿಸಿದಂತೆ ಹೊಸ ಅನುಮಾನವೊಂದು ಮೂಡಿದೆ. ಕೊರೊನಾ ಎರಡನೇ ಅಲೆ ಜೋರಾಗಿದ್ದ ಹೊತ್ತಲ್ಲಿ ಸಂಸದ ತೇಜಸ್ವಿ ಸೂರ್ಯ ಜತೆ ಸೇರಿಕೊಂಡು ಸತೀಶ್ ರೆಡ್ಡಿ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದಿದ್ದರು. ಈ ವೇಳೆ ಸತೀಶ್ ರೆಡ್ಡಿ ಆಪ್ತ ಬಾಬು ಸೇರಿ ಹಲವರ ಬಂಧನವಾಗಿತ್ತು. ತಮ್ಮ ಆಪ್ತನನ್ನೇ ಜೈಲಿಗೆ ಕಳಿಸಿದ್ರೆಂಬ ಜಿದ್ದು ಸಂಬಂಧಿಕರಿಗಿತ್ತಾ? ಎಂಬ ಶಂಕೆ ಇದೀಗ ವ್ಯಕ್ತವಾಗಿದ್ದು ಆ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಡ್ ಬ್ಲಾಕ್ ದಂಧೆ ಸಂಬಂಧ 2 ಎಫ್ಐಆರ್ ದಾಖಲಾಗಿತ್ತು. ಜಯನಗರ ಮತ್ತು ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಸಂಬಂಧ 11 ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿತ್ತು. ಇದೇ ಜಿದ್ದಿಗೆ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿರುವ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

(BJP MLA Satish Reddy asks scavengers to clean his house in Bengaluru)

ಇದನ್ನೂ ಓದಿ:
ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಪ್ರಕರಣ; ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ತಮ್ಮ ಆಪ್ತನನ್ನೇ ಜೈಲಿಗೆ ಕಳಿಸಿದ್ರೆಂಬ ಜಿದ್ದು ದುಷ್ಕೃತ್ಯಕ್ಕೆ ಕಾರಣನಾ? 

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ 2 ಐಷಾರಾಮಿ ಕಾರುಗಳಿಗೆ ಬೆಂಕಿ: ಚುರುಕುಗೊಂಡ ಪೊಲೀಸ್ ತನಿಖೆ