ಮೋಸದ ಜಾಲದಲ್ಲಿ ಸಿಲುಕಿದ ಕರ್ನಾಟಕ ಬಿಜೆಪಿ ಮುಖಂಡನ ಪುತ್ರ: 45 ಲಕ್ಷ ರೂ. ಕಳೆದುಕೊಂಡ
ಬಿಜೆಪಿ ಮುಖಂಡನ ಪುತ್ರ ಆನ್ಲೈನ್ಲ್ಲಿ ತ್ವರಿತವಾಗಿ 6 ಲಕ್ಷ ರೂ. ಸಾಲ ಪಡೆದು 45 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಅಲ್ಲದೆ ಇವರ ಭಾವಚಿತ್ರವನ್ನು ಅಶ್ಲೀಲವಾಗಿ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ.
ಬೆಂಗಳೂರು ನ.03: ತ್ವರಿತ ಸಾಲ ನೀಡುವ ಮೋಸದ ಜಾಲದಲ್ಲಿ ಸಿಲುಕಿ ಬಿಜೆಪಿ (BJP) ಮುಖಂಡನ ಪುತ್ರ 45 ಲಕ್ಷ ರೂ. ಕಳೆದುಕೊಂಡು, ಖಿನ್ನತೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಜೆಪಿ ಮುಖಂಡನ ಪುತ್ರ ಕರಣ್ (ಹೆಸರು ಬದಲಾಯಿಸಲಾಗಿದೆ) ಆನ್ಲೈನ್ಲ್ಲಿ ತ್ವರಿತವಾಗಿ 6 ಲಕ್ಷ ರೂ. ಸಾಲ ಪಡೆದು 45 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಅಲ್ಲದೆ ಇವರ ಭಾವಚಿತ್ರವನ್ನು ಅಶ್ಲೀಲವಾಗಿ ತಿರುಚಿ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ ವಂಚಕರು ಕರಣ್ ಅವರ ಕುಟುಂಬಕ್ಕೂ ಕಿರುಕಳ ನೀಡಿರುವ ಆರೋಪ ಕೇಳಿಬಂದಿದೆ.
ಆತನ ಚಿಕ್ಕಪ್ಪ ರಮೇಶ್ (ಹೆಸರು ಬದಲಿಸಲಾಗಿದೆ) ಜಾಲಹಳ್ಳಿ ಪೊಲೀಸರಿಗೆ ನೀಡಿರುವ ದೂರಿನನ್ವಯ, ಕೆಲ ತಿಂಗಳ ಹಿಂದೆ ಕರಣ್ ಆ್ಯಪ್ನಿಂದ 6 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ, ಅವರು ತಮ್ಮ ದೂರವಾಣಿ ಸಂಖ್ಯೆ ಮತ್ತು ಭಾವಚಿತ್ರಗಳನ್ನು ಅಪರಿಚಿತರು ಪ್ರವೇಶ ನೀಡಲು ಅನುಮತಿಸುವ ಆಯ್ಕೆಯನ್ನು ಅನುಮತಿಸಿದ್ದರು. ಒಂದೆರಡು ವಾರಗಳ ನಂತರ, ಸಾಲದ ಆ್ಯಪ್‌ನ ವಂಚಕರು ಸಾಲದ ಮೊತ್ತವನ್ನು ಮರುಪಾವತಿಸುವಂತೆ ಕಿರುಕುಳ ನೀಡಲು ಪ್ರಾರಂಭಿಸಿದರು.
ಕರಣ್ ಅವರು ಎಲ್ಲ ಬಡ್ಡಿ ಕಟ್ಟಿದರು. ಆದರೆ ವಂಚಕರು ಬಡ್ಡಿಯನ್ನು ಹೆಚ್ಚಿಸುತ್ತಲೇ ಇದ್ದರು. ಅಲ್ಲದೆ ನಿಮ್ಮ ಸಾಲದ ಮೊತ್ತವು ಇನ್ನೂ ಕ್ಲಿಯರ್ ಆಗಿಲ್ಲ ಎಂದು ಹೇಳಿದರು. ಹೆಚ್ಚಿನ ಹಣ ಕೊಡಲು ನಿರಾಕರಿಸಿದಾಗ ಅವರ ನಗ್ನ ಛಾಯಾಚಿತ್ರಗಳನ್ನು ಅವರ ಸಂಪರ್ಕಕ್ಕೆ ಇರುವ ವ್ಯಕ್ತಿಗಳಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು. ದೃಢೀಕರಣಕ್ಕಾಗಿ ವಂಚಕರು, ಕರಣ್ ಅವರ ಭಾವಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಅವರಿಗೆ ಕಳುಹಿಸಿದ್ದರು.
ಕರಣ್‌ನಿಂದ ಸುಮಾರು 45 ಲಕ್ಷ ರೂಪಾಯಿ ಸುಲಿಗೆ ಮಾಡಿದರೂ ಹೆಚ್ಚಿನ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು. ಕಿರುಕುಳ ಸಹಿಸಲಾಗದೆ ಅವರು ಈಶಾನ್ಯ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕರಣ್ ಸಾಲ ಮನ್ನಾ ಮಾಡಿದರೂ ಮೇಕ್ ಮನಿ ಸಿಬ್ಬಂದಿ ಕಿರುಕುಳ ನೀಡಿದ್ದಾರೆ ಎಂದು ರಮೇಶ್ ತಿಳಿಸಿದ್ದಾರೆ. ಕರಣ್ ಅವರು ಕಳೆದ 18 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತ ಆತ್ಮಹತ್ಯೆ ಮಾಡಿಕೊಳ್ಳುಲು ಮುಂದಾಗಿದ್ದನು. ಇದನ್ನು ತಡೆದ ಪೋಷಕರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಕರಣ್ ದೂರು ನೀಡಿದ ನಂತರ, ದುಷ್ಕರ್ಮಿಗಳು 15 ದಿನಗಳ ಕಾಲ ಕಿರುಕುಳವನ್ನು ನಿಲ್ಲಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಹೆಚ್ಚಿದ ಸೈಬರ್ ಕ್ರೈಂ ಪ್ರಕರಣಗಳು: ಪ್ರತಿದಿನ 25 ರಿಂದ 30 ಕೇಸ್ ದಾಖಲು
ಬಳಿಕ ವಂಚಕರು ಅಪರಿಚಿತ ನಂಬರ್‌ಗಳಿಂದ ಕರೆ ಮಾಡಿ “Make Money” ಅಪ್ಲಿಕೇಶನ್ ನಿಂದ ಕರೆ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾರೆ. ಪದೆ ಪದೇ ಕರೆ ಮಾಡಿ ಪತ್ನಿ ಹಾಗೂ ಮಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಕರಣ್‌ನ ತಂದೆಯ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರದು ಇಬ್ಬರು ಮಹಿಳೆಯರ ಭಾವಚಿತ್ರಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಅಪ್‌ಲೋಡ್ ಮಾಡಿದ್ದಾರೆ.
ಈ ರೀತಿಯಾಗಿ ಕಳೆದ ಮೂರು ತಿಂಗಳಿಂದ ನನ್ನ ಪತ್ನಿ ಹಾಗೂ ಮಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಅವರು ಕೆಲವು ಅಸಭ್ಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅವರ ಬಗ್ಗೆ ಕೆಟ್ಟದಾಗಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಅವರ ಕಿರುಕುಳದಿಂದ ನನ್ನ ಹೆಂಡತಿ ಮತ್ತು ಮಗಳು ಕೂಡ ಖಿನ್ನತೆಗೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ. ದುಷ್ಕರ್ಮಿಗಳು ಸ್ಥಳೀಯ ಮತ್ತು ವಿದೇಶಿ ಸೇರಿದಂತೆ ಹಲವು ಸಂಖ್ಯೆಗಳಿಂದ ಫೋನ್ ಕರೆಗಳನ್ನು ಮಾಡುತ್ತಿದ್ದಾರೆ, ನಿಂದನೀಯ ಭಾಷೆ ಬಳಸಿ ಮತ್ತು ಹಿಂದಿಯಲ್ಲಿ ಬೆದರಿಕೆ ಹಾಕುತ್ತಿದ್ದಾರೆ ಎಂದು ರಮೇಶ್ ಪೊಲೀಸರಿಗೆ ತಿಳಿಸಿದ್ದಾರೆ. ಕರಣ್ ತನ್ನ ತಂದೆಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾನೆ.
ಎರಡೂ ಪ್ರಕರಣಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಇತರ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕರಣ್ ಮತ್ತು ಅವರ ಕುಟುಂಬ ಸದಸ್ಯರಿಗೆ ಪಾಕಿಸ್ತಾನ ಮತ್ತು ಯುಎಇಯಿಂದ ಕೆಲವು ಫೋನ್ ಕರೆಗಳನ್ನು ಮಾಡಲಾಗಿದೆ ಮತ್ತು ಉಳಿದವು ಸ್ಥಳೀಯ ಸಂಖ್ಯೆಗಳಿಂದ ಬಂದವು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಕಲಿ ಫೇಸ್ ಬುಕ್ ಖಾತೆಯನ್ನು ಬ್ಲಾಕ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ