ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ; 21ನೇ ಆರೋಪಿಯ ಬಂಧನ

| Updated By: ಸುಷ್ಮಾ ಚಕ್ರೆ

Updated on: Jan 21, 2025 | 9:42 PM

ಪ್ರವೀಣ್​ ನೆಟ್ಟಾರು ಕೊಲೆ ಮಾಡಿದ್ದ ಮುಸ್ತಫಾ ಪೈಚಾರ್​ಗೆ ಆಶ್ರಯ ನೀಡಿದ್ದ ಅತೀಕ್ ಆತನಿಗೆ ಪರಾರಿಯಾಗಲು ಕೂಡ ಸಹಾಯ ಮಾಡಿದ್ದ. ಜನರಲ್ಲಿ ಭಯ ಉಂಟುಮಾಡಲು ಮತ್ತು ಕೋಮು ಗಲಭೆಯನ್ನು ಪ್ರಚೋದಿಸಲು ಪಿಎಫ್‌ಐನ ಅಜೆಂಡಾದ ಭಾಗವಾಗಿ ಪ್ರವೀಣ್ ನೆಟ್ಟಾರು ಕೊಲೆಯ ಪ್ಲಾನ್ ಮಾಡಿದ್ದ ಮುಸ್ತಫಾ ಪೈಚಾರ್​ನನ್ನು ಮೇ 2024ರಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ; 21ನೇ ಆರೋಪಿಯ ಬಂಧನ
Praveen Nettaru
Follow us on

ಬೆಂಗಳೂರು: ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಂಚುಕೋರನನ್ನು ಬಂಧಿಸಲಾಗಿದೆ. ನಿಷೇಧಿತ ಪಿಎಫ್ಐ ಸದಸ್ಯನಾಗಿದ್ದ ಅತೀಕ್ ಅಹ್ಮದ್ ಎಂಬಾತನನ್ನು ಈ ಪ್ರಕರಣದಲ್ಲಿ ಬಂಧನ ಮಾಡಲಾಗಿದೆ. ಪ್ರವೀಣ್ ನೆಟ್ಟಾರು ಕೊಲೆ ಕೇಸ್​​ಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 21ನೇ ಆರೋಪಿ ಅತೀಕ್. ಈತ ಮುಸ್ತಫಾ ಪೈಚಾರ್​ಗೆ ಆಶ್ರಯ ನೀಡಿದ್ದ ಎನ್ನಲಾಗಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಸದಸ್ಯನಾಗಿದ್ದ ಅತೀಕ್ ಪ್ರವೀಣನ ಕೊಲೆ ಬಳಿಕ ಆರೋಪಿ ಮುಸ್ತಫಾನಿಗೆ ಆಶ್ರಯ ನೀಡಿ ಸಹಾಯ ಮಾಡಿದ್ದ. ಮುಸ್ತಫಾನನ್ನು ಚೆನ್ನೈಗೆ ಕಳಿಸಿ ಪರಾರಿಯಾಗಲು ನೆರವು ನೀಡಿದ್ದ. ಹೀಗಾಗಿ, ಆತನನ್ನು ಬಂಧಿಸಲಾಗಿದೆ. ಈ ಕುರಿತು ಎನ್​ಐಎಯಿಂದ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ 6 ಆರೋಪಿಗಳು ನಾಪತ್ತೆಯಾಗಿದ್ದು, ಆ 6 ಆರೋಪಿಗಳ ಪತ್ತೆಗಾಗಿ ಎನ್ಐಎ ತಂಡದಿಂದ ಶೋಧ ನಡೆಸಲಾಗುತ್ತಿದೆ. ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ ಘೋಷಣೆ ಮಾಡುವುದಾಗಿ ತಿಳಿಸಲಾಗಿದೆ.

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ: ಆರೋಪಿಗಳ ಸಹಚರರ ಸ್ಥಳಗಳ ಮೇಲೆ NIA ದಾಳಿ, ದಾಖಲೆಗಳು ಜಪ್ತಿ

ಪ್ರವೀಣ್​ ನೆಟ್ಟಾರು ಕೊಲೆ ಮಾಡಿದ್ದ ಮುಸ್ತಫಾ ಪೈಚಾರ್​ಗೆ ಆಶ್ರಯ ನೀಡಿದ್ದ ಅತೀಕ್ ಆತನಿಗೆ ಪರಾರಿಯಾಗಲು ಕೂಡ ಸಹಾಯ ಮಾಡಿದ್ದ. ಜನರಲ್ಲಿ ಭಯ ಉಂಟುಮಾಡಲು ಮತ್ತು ಕೋಮು ಗಲಭೆಯನ್ನು ಪ್ರಚೋದಿಸಲು ಪಿಎಫ್‌ಐನ ಅಜೆಂಡಾದ ಭಾಗವಾಗಿ ಪ್ರವೀಣ್ ನೆಟ್ಟಾರು ಕೊಲೆಯ ಪ್ಲಾನ್ ಮಾಡಿದ್ದ ಮುಸ್ತಫಾ ಪೈಚಾರ್​ನನ್ನು ಮೇ 2024ರಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು.

ಪ್ರವೀಣ್ ನೆಟ್ಟಾರು ಹತ್ಯೆ ತನಿಖೆ ವೇಳೆ ಎನ್ಐಎಗೆ ಮತ್ತಷ್ಟು ಸ್ಪೋಟಕ ಮಾಹಿತಿ ಪತ್ತೆಯಾಗಿದೆ. ನೆಟ್ಟಾರುಗಳಂತವರ ಟಾರ್ಗೆಟ್ ಮಾಡಿದ್ದ ಪಿಎಫ್ಐ ಅಂತವರ ಗುರಿಯಿಟ್ಟು ಹತ್ಯೆ ಮಾಡಲೆಂದೇ ಸೀಕ್ರೆಟ್ ತಂಡಗಳ ರಚನೆ ಮಾಡಿತ್ತು ಎನ್ನಲಾಗಿದೆ. ಪಿಎಫ್ಐನಿಂದ ರಚನೆಯಾಗಿದ್ದ ಈ ಸೀಕ್ರೆಟ್ ತಂಡಗಳನ್ನು ಪಿಎಫ್ಐ ಸರ್ವಿಸ್ ಟೀಮ್ಸ್ ಎಂದು ಕರೆಯಲಾಗುತ್ತಿತ್ತು. ಈ ತಂಡಗಳಿಗೆ ವಿಶೇಷ ತರಬೇತಿ ಸಹ ನೀಡಲಾಗಿತ್ತು. ಈ ತಂಡಗಳಿಗೆ ಶಸ್ತ್ರಾಸ್ತ್ರ ಹಾಗೂ ಕಣ್ಗಾವಲು ತರಬೇತಿ ಸಹ ನೀಡಲಾಗಿತ್ತು.

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ 6ನೇ ಆರೋಪಿ ಏರ್​ಪೋರ್ಟ್​ನಲ್ಲಿ ಸಿಕ್ಕಿಬಿದ್ದ!

2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಎಂಬಾತನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಗಂಭೀರತೆ ಅರಿತ ಎನ್ಐಎ ಆಗಸ್ಟ್ 4ರಂದು ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಈ ಪ್ರಕರಣದಲ್ಲಿ ಇದುವರೆಗೆ 23 ಜನ ಆರೋಪಿಗಳ ವಿರುದ್ಧ ಎನ್ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ನಾಪತ್ತೆಯಾಗಿರುವ 6 ಆರೋಪಿಗಳಿಗಾಗಿ ಎನ್ಐಎ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ