ಬೆಂಗಳೂರು, (ಆಗಸ್ಟ್ 09): ನಮ್ಮ ಮೆಟ್ರೋ(Namma Metro) ಎರಡನೇ ಹಂತದ ಯೋಜನೆಗಳಿಗೆ 318 ಬೋಗಿಗಳನ್ನು(Metro Coaches) ಪೂರೈಸಲು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಗುತ್ತಿಗೆ ಪಡೆದಿದೆ. 3177 ಕೋಟಿ ರೂಪಾಯಿ ಮೊತ್ತದ ವೆಚ್ಚದಲ್ಲಿ 318 ಮೆಟ್ರೋ ಬೋಗಿಗಳ ಪೂರೈಕೆ ಜೊತೆಗೆ ನಿರ್ವಹಣೆಯ ಹೊಣೆಯನ್ನು ಬಿಇಎಂಎಲ್ ಹೊತ್ತುಕೊಂಡಿದೆ. ಬೋಗಿ ಪೂರೈಕೆ ಸಂಬಂಧ ಬಿಡ್ ಸಲ್ಲಿಸಿದ್ದ ಕಂಪನಿಗಳ ಪೈಕಿ ಬಿಇಎಂಎಲ್ ಅತಿ ಕಡಿಮೆ ಮೊತ್ತ ಲಗತ್ತಿಸಿತ್ತು. ಸದ್ಯ ಬಿಎಂಎಂಎಲ್ 10 ವಂದೇ ಭಾರತ್ ರೈಲುಗಳ ಸ್ಲೀಪರ್ ಕೋಚ್‌ಗಳ ನಿರ್ಮಾಣದಲ್ಲಿ ತೊಡಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಬೋಗಿಗಳ ಪೂರ್ಣ ಪ್ರಮಾಣದ ನಿರ್ಮಾಣ ಕಾರ್ಯ ಆರಂಭ ಮಾಡಲಿದ್ದು, 2025ಕ್ಕೆ ಬೋಗಿಗಳು ನಮ್ಮ ಮೆಟ್ರೋಗೆ ಪೂರೈಕೆಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಬೊಮ್ಮಸಂದ್ರ ಟು ಹೊಸೂರು ಮೆಟ್ರೋ ಅಧ್ಯಯನಕ್ಕೆ ಚೆನ್ನೈ ಮೆಟ್ರೋ ನಿಗಮದಿಂದ ಟೆಂಡರ್ ಆಹ್ವಾನ
126 ಬೋಗಿಗಳನ್ನು ಮುಂಬರುವ ನೀಲಿ ಮಾರ್ಗದ 37 ಕಿ.ಮೀ. ಕೆ.ಆರ್.ಪುರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರಿಡಾರ್ (2ಬಿ ಹಂತ), 96 ಬೋಗಿಗಳನ್ನು 18.2 ಕಿ.ಮೀ. ರೇಷ್ಮೇ ಕೇಂದ್ರ-ಕೆ.ಆರ್.ಪುರಕ್ಕೆ ಪೂರೈಕೆ ಮಾಡಲಿದೆ. 21.3 ಕಿ.ಮೀ. ಉದ್ದದ ಕಾಳೇನ ಅಗ್ರಹಾರ-ನಾಗವಾರ ಮಾರ್ಗದ ಗುಲಾಬಿ ಕಾರಿಡಾರ್‌ಗೆ 96 ಬೋಗಿಗಳನ್ನು ನೀಡಲು ನಿರ್ಧರಿಸಲಾಗಿದೆ. ಹೀಗಾಗಿ ಇದೇ ಮೊದಲ ಬಾರಿಗೆ 15 ವರ್ಷಗಳ ನಿರ್ವಹಣೆ ಹೊಣೆಯನ್ನೂ ಬಿಇಎಂಎಲ್ ನಿಭಾಯಿಸಬೇಕಿದೆ.
ಈಗಾಗಲೇ ಬೆಂಗಳೂರಿನಲ್ಲಿ ಈಗಾಗಲೇ ಗ್ರೀನ್ ಲೈನ್ (ನಾಗಸಂದ್ರದಿಂದ ರೇಷ್ಮೇ ಸಂಸ್ಥೆ) ಹಾಗೂ ಪರ್ಪಲ್ ಲೈನ್(ಬೈಯಪ್ಪನಹಳ್ಳಿಯಿಂದ ಕೆಂಗೇರಿ) ಮೂಲಕ ಎರಡು ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚರಿಸುತ್ತಿದ್ದು, ಕಳೆದ ಜುಲೈ ತಿಂಗಳಲ್ಲಿ ನಿತ್ಯ ಸರಾಸರಿ 6.1 ಲಕ್ಷ ಜನರು ಮೆಟ್ರೋ ರೈಲುಗಳಲ್ಲಿ ಸಂಚರಿಸಿರುವುದು ಹೊಸ ದಾಖಲೆಯಾಗಿದ್ದು, ಜನವರಿಗೆ ಹೋಲಿಸಿದರೆ ಶೇ.16ರಷ್ಟುಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಇನ್ನು ಕೆ.ಆರ್.ಪುರ-ಬೈಯ್ಯಪ್ಪನಹಳ್ಳಿ ಹಾಗೂ ಕೆಂಗೇರಿ-ಚೆಲ್ಲಘಟ್ಟ ಮಾರ್ಗ ಜನಸಂಚಾರಕ್ಕೆ ಸಿದ್ಧವಾಗಿದ್ದು, ಈಗಾಗಲೇ ಇವೆರಡೂ ಮಾರ್ಗಗಳಲ್ಲಿ ಬಿಎಂಆರ್‌ಸಿಎಲ್ ಈಗಾಗಲೇ ಪ್ರಾಯೋಗಿಕ ಸಂಚಾರ ಆರಂಭಿಸಿದೆ. ಆಗಸ್ಟ್ ಅಂತ್ಯಕ್ಕೆ ಜನಸಂಚಾರಕ್ಕೆ ಮುಕ್ತವಾಗಲಿದ್ದು, ಇದರಿಂದ ದೈನಂದಿನ ಪ್ರಯಾಣಿಕರ ಸಂಖ್ಯೆ 7.5 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಬಹುಮುಖ್ಯವಾಗಿ ಟ್ರಾಫಿಕ್ ದಟ್ಟಣೆ ಕೂಡ ಕೊಂಚ ಕಡಿಮೆಯಾಗಲಿದೆ.
ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 9:21 am, Wed, 9 August 23