ಬಿಎಂಆರ್​ಸಿಎಲ್ ಅಧಿಕಾರಿಗಳ ಯಡವಟ್ಟಿಗೆ ಪ್ರಯಾಣಿಕರು ಕಂಗಾಲು: ಯಾವುದೋ ಮೆಟ್ರೋ ನಿಲ್ದಾಣಕ್ಕೆ ಇನ್ಯಾವುದೋ ಹೆಸರು!

ದೇವರು ವರ ಕೊಟ್ಟರೂ ಪೂಜಾರಿ ಕೊಡ್ಲಿಲ್ಲ ಎಂಬ ಹಾಗಾಗಿದೆ ಬೆಂಗಳೂರಿನ ಈ ಏರಿಯಾಗಳ ಜನರ ಕಥೆ. ನಮ್ಮೂರಲ್ಲೇ ಮೆಟ್ರೋ ನಿಲ್ದಾಣ ಇದೆ ಎಂದು ಖುಷಿಪಟ್ಟ ಜನರಿಗೆ ಬಿಎಂಆರ್​ಸಿಎಲ್​ ಮಾಡಿರುವ ಅದೊಂದು ಯಡವಟ್ಟು ದೊಡ್ಡ ವ್ಯಥೆ ತಂದಿದೆ. ಯೆಲ್ಲೋ ಲೈನ್​ ಸ್ಟೇಷನ್ಸ್​ ಹೆಸರಿನ ಗೊಂದಲ ಪ್ರಯಾಣಿಕರಿಗೂ ಕಿರಿಕಿರಿ ಉಂಟುಮಾಡುತ್ತಿದೆ.

ಬಿಎಂಆರ್​ಸಿಎಲ್ ಅಧಿಕಾರಿಗಳ ಯಡವಟ್ಟಿಗೆ ಪ್ರಯಾಣಿಕರು ಕಂಗಾಲು: ಯಾವುದೋ ಮೆಟ್ರೋ ನಿಲ್ದಾಣಕ್ಕೆ ಇನ್ಯಾವುದೋ ಹೆಸರು!
ಮೆಟ್ರೋ ಯೆಲ್ಲೋ ಲೈನ್
Edited By:

Updated on: Dec 16, 2025 | 7:31 AM

ಬೆಂಗಳೂರು, ಡಿಸೆಂಬರ್ 16: ಬಿಎಂಆರ್​ಸಿಎಲ್​ (BMRCL) ಮಾಡಿರುವ ಅವಾಂತರದಿಂದ ಪ್ರಯಾಣಿಕರು ಕಂಗೆಡುವಂತಾಗಿದೆ. ರೂಪೇನಾ ಅಗ್ರಹಾರದಲ್ಲಿ ಯೆಲ್ಲೋ ಲೈನ್ ಮೆಟ್ರೋ (Yellow Line Metro) ಸ್ಟೇಷನ್​ ಇದೆ. ಆದರೆ ಅದಕ್ಕೆ ಬೊಮ್ಮನಹಳ್ಳಿ ಎಂದು ಹೆಸರಿಟ್ಟಿದ್ದಾರೆ. ಬೊಮ್ಮನಹಳ್ಳಿಗೂ ರೂಪೇನಾ ಅಗ್ರಹಾರಕ್ಕೂ ಒಂದು ಕಿಲೋಮೀಟರ್ ಅಂತರ ಇದೆ. ಹೀಗಾಗಿ ಜನರಿಗೆ ನಿತ್ಯ ಕಿರಿಕಿರಿ ಉಂಟಾಗುತ್ತಿದೆ. ಬೊಮ್ಮನಹಳ್ಳಿ ಎಂದು ಇಳಿಯುವ ಪ್ರಯಾಣಿಕರಿಗೆ, ಆಮೇಲೆ ಗೊತ್ತಾಗುತ್ತದೆ ಅದು ರೂಪೇನಾ ಅಗ್ರಹಾರ ಎಂಬುದಾಗಿ. ಹೀಗಾಗಿ, ಮತ್ತೆ ಆಟೋದಲ್ಲಿ ಪ್ರಯಾಣ ಮಾಡಬೇಕಾದ ದುಸ್ಥಿತಿ ಇದೆ. ಬೊಮ್ಮನಹಳ್ಳಿಗೆ ರೂಪೇನಾ ಅಗ್ರಹಾರ ಹೆಸರು ಸೇರಿಸಿ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸುತ್ತಿದ್ದು, ಸೇರಿಸಿಲ್ಲ ಎಂದಾದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೊಮ್ಮನಹಳ್ಳಿಯಲ್ಲೂ ಮೆಟ್ರೋ ನಿಲ್ದಾಣ ಇದೆ. ಅದಕ್ಕೆ ಹೊಂಗಸಂದ್ರ ಎಂದು ನಾಮಕರಣ ಮಾಡಿದ್ದಾರೆ! ಹೊಂಗಸಂದ್ರ ಇರುವುದು ಎರಡ್ಮೂರು ಕಿಲೋಮೀಟರ್ ದೂರದಲ್ಲಿ. ಆದರೂ ಬೊಮ್ಮನಹಳ್ಳಿಗೆ ಹೊಂಗಸಂದ್ರ ಎಂದು ಹೆಸರಿಟ್ಟಿದ್ದಾರೆ.

ಯೆಲ್ಲೋ ಲೈನ್ 4 ಮೆಟ್ರೋ ಸ್ಟೇಷನ್​​ ಹೆಸರಲ್ಲಿ ಗೊಂದಲ

ಯೆಲ್ಲೋ ಲೈನ್​​ನಲ್ಲಿ ನಾಲ್ಕು ಮೆಟ್ರೋ ಸ್ಟೇಷನ್​ಗಳ ಹೆಸರಲ್ಲೂ ಗೊಂದಲ ಉಂಟಾಗಿದೆ. ಎಲೆಕ್ಟ್ರಾನಿಕ್ ಸಿಟಿ ಮತ್ತು ಕೋನಪ್ಪನ ಅಗ್ರಹಾರ ಸ್ಟೇಷನ್​ಗಳಲ್ಲೂ ಗೊಂದಲ ಉಂಟು ಮಾಡಿದ್ದು, ಎಲೆಕ್ಟ್ರಾನಿಕ್ ಸಿಟಿ ಹಾಗೂ ಕೋನಪ್ಪನ ಅಗ್ರಹಾರ ಸ್ಟೇಷನ್​​​ಗಳಲ್ಲೂ ಬಿಎಂಆರ್​​ಸಿಎಲ್ ಗೊಂದಲ ಸೃಷ್ಟಿ ಮಾಡಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಿಲ್ದಾಣ ನಿರ್ಮಿಸಿ ಕೋನಪ್ಪನ ಅಗ್ರಹಾರ ಅಂತ ಹೆಸರಿಡಲಾಗಿದೆ. ಕೋನಪ್ಪನ ಅಗ್ರಹಾರದ ನಿಲ್ದಾಣಕ್ಕೆ ಎಲೆಕ್ಟ್ರಾನಿಕ್ ಸಿಟಿ ಎಂದು ನಾಮಕರಣ ಮಾಡಿ ಯಡವಟ್ಟು ಮಾಡಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಕ್ರಿಸ್ಮಸ್, ಹೊಸ ವರ್ಷದ ಗಿಫ್ಟ್: 12 ನಿಮಿಷಕ್ಕೊಂದರಂತೆ ಸಂಚರಿಲಿದೆ ಯೆಲ್ಲೋ ಲೈನ್ ಮೆಟ್ರೋ

ಒಟ್ಟಿನಲ್ಲಿ ಇದು ಬಿಎಂಆರ್​​ಸಿಎಲ್​ಗೆ ಆಟ ಜನರಿಗೆ ಪ್ರಾಣ ಸಂಕಟ ಎಂಬಂತಾಗಿದೆ. ಈ ಸ್ಟೇಷನ್​​ನ ಗೊಂದಲವನ್ನು ಶೀಘ್ರವೇ ಪರಿಹರಿಸದೇ ಹೋರಾಟದ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಪ್ರಯಾಣಿಕರ ಹಿತದೃಷ್ಟಿಯಿಂದ ಬಿಎಂಆರ್​ಸಿಎಲ್​ ನಿಲ್ದಾಣಗಳ ಹೆಸರನ್ನು ಮರು ಪರಿಶೀಲನೆ ಮಾಡವುದು ಸೂಕ್ತ ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬರುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ