ಆತ್ಮಹತ್ಯೆ ಯತ್ನ, ಟ್ರ್ಯಾಕ್​ಗೆ ಜಿಗಿತ ಪ್ರಕರಣಗಳ ನಂತರ ಎಚ್ಚೆತ್ತ BMRCL: ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ಹೆಚ್ಚಳ

| Updated By: Rakesh Nayak Manchi

Updated on: Jan 18, 2024 | 12:11 PM

ಮೊಬೈಲ್ ತೆಗೆಯಲು ಮೆಟ್ರೋ ಹಳಿಗೆ ಜಿಗಿತ, ಯುವಕನಿಂದ ಆತ್ಮಹತ್ಯೆಗೆ ಯತ್ನ ಸೇರಿದಂತೆ ಇಂತಹ ಅನೇಕ ಪ್ರಕರಣಗಳು ನಡೆದ ನಂತರ ಎಚ್ಚೆತ್ತ ಬಿಎಂಆರ್​ಸಿಎಲ್, ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸಿದೆ. ಶೀಘ್ರದಲ್ಲಿ ಹೆಚ್ಚುವರಿಯಾಗಿ 326 ಸಿಬ್ಬಂದಿ ನಿಯೋಜಿಸಲು ಬಿಎಂಆರ್​ಸಿಎಲ್ ನಿರ್ಧಾರ ಮಾಡಿದೆ.

ಆತ್ಮಹತ್ಯೆ ಯತ್ನ, ಟ್ರ್ಯಾಕ್​ಗೆ ಜಿಗಿತ ಪ್ರಕರಣಗಳ ನಂತರ ಎಚ್ಚೆತ್ತ BMRCL: ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ಹೆಚ್ಚಳ
ಅವಘಡಗಳನ್ನು ತಪ್ಪಿಸಲು ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಳ
Image Credit source: Shutterstock
Follow us on

ಬೆಂಗಳೂರು, ಜ.18: ಮೊಬೈಲ್ ತೆಗೆಯಲು ಮೆಟ್ರೋ ಹಳಿಗೆ ಜಿಗಿತ, ಯುವಕನಿಂದ ಆತ್ಮಹತ್ಯೆಗೆ ಯತ್ನ ಸೇರಿದಂತೆ ಇಂತಹ ಅನೇಕ ಪ್ರಕರಣಗಳು ನಡೆದ ನಂತರ ಎಚ್ಚೆತ್ತ ಬಿಎಂಆರ್​ಸಿಎಲ್ (BMRCL), ಬೆಂಗಳೂರು ಮೆಟ್ರೋ (Bengaluru Metro) ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸಿದೆ. ಶೀಘ್ರದಲ್ಲಿ ಹೆಚ್ಚುವರಿಯಾಗಿ 326 ಸಿಬ್ಬಂದಿ ನಿಯೋಜಿಸಲು ಬಿಎಂಆರ್​ಸಿಎಲ್ ನಿರ್ಧಾರ ಮಾಡಿದೆ.

ಅವಘಡ ತಡೆಯಲು ಶೀಘ್ರದಲ್ಲೇ ಒಂಬತ್ತು ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್ ಫಾರಂಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿ‌ ನಿಯೋಜನೆ ಮಾಡಲಾಗುತ್ತಿದೆ. ರೈಲುಗಳ ಆಗಮನದ ಮೊದಲು ಪ್ರಯಾಣಿಕರನ್ನು ಸರದಿ ಪ್ರಕಾರ ನಿಲ್ಲಿಸುವುದು, ಹಳದಿ ಗೆರೆ ದಾಟದಂತೆ ನೋಡಿಕೊಳ್ಳುವುದು ಭದ್ರತಾ ಸಿಬ್ಬಂದಿಗಳ ಕೆಲಸವಾಗಿದೆ.

ರೈಲುಗಳು ಸಂಚರಿಸುವಾಗ ಪ್ರಯಾಣಿಕರ ಚಲನವಲನದ ಮೇಲೆ ನಿಗಾ ಇಡಬೇಕು. ಇದರ ಜೊತೆಗೆ ಪ್ಲಾಟ್‌ಫಾರಂ ಸ್ಟ್ರೀನ್‌ ಡೋರ್ (ಪಿಎಸ್‌ಡಿ) ಅಳವಡಿಸಲು ಪ್ಲಾನ್ ಮಾಡಲಾಗಿದೆ. ಸಿಬಿಟಿಸಿ ಸಿಗ್ನಲಿಂಗ್ ಮತ್ತು ಪ್ಲಾಟ್ ಫಾರ್ಮ್ ಸ್ಟ್ರೀನ್ ಡೋರ್​ಗೆ (ಪಿಎಸ್‌ಡಿ) ಟೆಂಡರ್ ಕರೆಯಲಾಗಿದ್ದು, ಅಲ್‌ಸ್ಟಾಮ್ ಟ್ರಾನ್ಸ್ ಪೋರ್ಟ್ ಇಂಡಿಯಾ ಈ ಟೆಂಡರ್ ಪಡೆದಿದೆ.

ಇದನ್ನೂ ಓದಿ: Bengaluru Metro: ಸರ್ಜಾಪುರದಿಂದ ಹೆಬ್ಬಾಳಕ್ಕೆ ನಮ್ಮ ಮೆಟ್ರೋ ಸಂಪರ್ಕ ಯೋಜನೆ, ಡಿಪಿಆರ್ ಸಿದ್ಧ; ನಿಲ್ದಾಣಗಳ ಮಾಹಿತಿ ಇಲ್ಲಿದೆ

ಸ್ಕ್ರೀನ್‌ ಡೋರ್ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ಪಿಎಸ್‌ಡಿ ಅಳವಡಿಕೆಗೆ 857 ಕೋಟಿ ರೂ.ಗೆ ಬಿಡ್​ಗೆ ಟೆಂಡರ್ ಅಂತಿಮವಾಗಿದೆ. ಪಿಎಸ್‌ಡಿಯನ್ನೂ 13 ಅಂಡರ್ ಗ್ರೌಂಡ್ ಹಾಗೂ 37 ಎಲಿವೇಟೆಡ್‌ ನಿಲ್ದಾಣಗಳಲ್ಲಿ ನಿರ್ಮಿಸಲು ಯೋಜಿಸಲಾಗಿದೆ.

ಏನಿದು ಫ್ಲಾಟ್ ಫಾರ್ಮ್ ಸ್ಕ್ರೀನ್ ಡೋರ್?

ಮೆಟ್ರೋ ಹಳಿಗಳಿಗೆ ಪಕ್ಕದಲ್ಲಿ 750 ಮೋಲ್ಟ್ ಹೆವಿ ಪವರ್ ಲೈನ್ ಹಾದು ಹೋಗುತ್ತದೆ. ಟ್ರ್ಯಾಕ್​ಗೆ ಯಾರಾದರು ಇಳಿದರೆ ಅವರ ಜೀವ ಉಳಿಸಲು ಪವರ್ ಆಫ್ ಮಾಡಲಾಗುತ್ತದೆ. ಅದನ್ನ ಜನರೇಟ್ ಮಾಡಲು ಅರ್ಧಗಂಟೆಗೂ ಹೆಚ್ಚು ಸಮಯ ಬೇಕಾಗುತ್ತೆ.‌ ಇದರಿಂದ ಪೀಕ್ ಅವರ್‌ಗಳಲ್ಲಿ ಮೆಟ್ರೋ ರೈಲು ಕಾರ್ಯಾಚರಣೆಗೆ ಅಡಚಣೆಯಾಗುತ್ತೆ.‌ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತದೆ.

ಮೆಟ್ರೋದಲ್ಲಾಗುವ ಕೆಲವು ಅವಘಡಗಳಿಗೆ ಪಿಎಎಸ್‌ಡಿ ಬ್ರೇಕ್‌ ಹಾಕಲಿದೆ. ಮೆಟ್ರೋ ರೈಲು ನಿಲ್ದಾಣಗಳಲ್ಲಿ ಹಳಿ ಸಮೀಪದಲ್ಲಿ ಫೋಟೊ ತೆಗೆಯುವುದು, ರೀಲ್ಸ್‌ ಮಾಡುವುದನ್ನು ತಪ್ಪಿಸಬಹುದು, ಪೋಷಕರ ಕಣ್ತಪ್ಪಿಸಿ ಸಣ್ಣ ಮಕ್ಕಳು ಮೆಟ್ರೋ ಹಳಿಗಳತ್ತ ಹೋಗಿ ಆಗುವ ಅನಾಹುತ ನಿಲ್ಲಲಿದೆ.

ಮೊದಲ ಹಂತದಲ್ಲಿ, ಕೊಟ್ಟಿಗೆರೆ ಟೂ ನಾಗವಾರ ಮೆಟ್ರೋ ಮಾರ್ಗದಲ್ಲಿ ಬರುವ ಡೈರಿ ಸರ್ಕಲ್​ನಿಂದ ಆರಂಭವಾಗುವ ಎಲ್ಲಾ ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್​ಗಳಲ್ಲೂ ಪಿಎಸ್ ಡೋರ್ ಅಳವಡಿಸಲಾಗುತ್ತದೆ. ಎಲೆಕ್ಟ್ರಾನಿಕ್ ಸಿಟಿಯ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದಲ್ಲಿ ಈಗಾಗಲೇ ಪ್ಲಾಟ್‌ಫಾರಂ ಸ್ಕ್ರೀನ್‌ ಡೋರ್‌ ಅಳವಡಿಕೆ ಮಾಡುವ ಕೆಲಸ ಬಿಎಂಆರ್​ಸಿಎಲ್ ಮಾಡುತ್ತಿದೆ.

ಮಹಿಳೆಯರ ಸುರಕ್ಷತೆಗಾಗಿ ಎರಡು ಕೋಚ್​ಗಳು ಮೀಸಲು

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಬಿಎಂಆರ್​ಸಿಎಲ್, ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರಿಗೆ ಮೀಸಲಿರುವ ಕೋಚ್​​ ಅನ್ನು ಒಂದರಿಂದ ಎರಡು ಕೋಚ್​ಗಳಿಗೆ ಏರಿಸಲು ನಿರ್ಧರಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:10 pm, Thu, 18 January 24