ಅಯೋಧ್ಯೆ ಸಮೀಪ 2 ಎಕರೆ ಜಾಗ ಖರೀದಿಸಿ ತುಳಸಿ ಕೃಷಿ ಮಾಡಿದ ಬೆಂಗಳೂರಿನ ಭಕ್ತ; ಪ್ರಭು ಶ್ರೀರಾಮನಿಗೆ ಸಿದ್ಧವಾಗುತ್ತಿದೆ ವಿಶೇಷ ತುಳಸಿ ಮಾಲೆ
ಅಯೋಧ್ಯೆಯ ಪ್ರಭು ಶ್ರೀರಾಮನಿಗೆ ತುಳಸಿ ಸೇವೆ ಮಾಡಲು ಬೆಂಗಳೂರಿನ ಭಕ್ತರೊಬ್ಬರು ಅಯೋಧ್ಯೆಯಲ್ಲಿ 2 ಎಕರೆ ಜಾಗ ಖರೀದಿಸಿ ತುಳಸಿ ಬೆಳೆದಿದ್ದಾರೆ. ಇದೀಗ, ರಾಮ ಮಂದಿರ ಉದ್ಘಾಟನೆ ದಿನ ಸಮೀಪಿಸುತ್ತಿರುವ ಹಿನ್ನೆಲೆ ಶ್ರೀರಾಮನಿಗಾಗಿ ಬೆಳೆದ ತುಳಸಿಗಳಿಂದ ವಿಶೇಷ ಮಾಲೆ ಸಿದ್ಧಪಡಿಸಲಾಗಿತ್ತಿದ್ದು, ನಿನ್ನೆಯಿಂದ ನಿರಂತರ ತುಳಸಿ ಸೇವೆ ಮಾಡಲಾಗುತ್ತಿದೆ.
ಬೆಂಗಳೂರು, ಜ.18: ಅಯೋಧ್ಯೆ ಶ್ರೀರಾಮ ಮಂದಿರ (Ayodhya Ram Mandir) ಉದ್ಘಾಟನೆಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿವೆ. ಈಗಾಗಲೇ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಐದು ಶತಮಾನಗಳ ಕನಸು ಈಡೇರುತ್ತಿರುವ ಸನಿಹದಲ್ಲಿ ರಾಮ ಭಕ್ತರು ವಿವಿಧ ರೀತಿಯಲ್ಲಿ ಭಕ್ತಿಯನ್ನು ಅರ್ಪಿಸುತ್ತಿದ್ದಾರೆ. ಇದೀಗ ಬೆಂಗಳೂರು (Bengaluru) ನಗರದ ಭಕ್ತರೊಬ್ಬರು ಪ್ರಭು ಶ್ರೀರಾಮನಿಗೆ ತುಳಸಿ ಸೇವೆ ಮಾಡಲೆಂದೇ ಅಯೋಧ್ಯೆ ಸಮೀಪ ಎರಡು ಎಕರೆ ಜಾಗ ಖರೀದಿಸಿ ತುಳಸಿ ಬೆಳೆದಿದ್ದು, ನಿನ್ನೆಯಿಂದ ನಿರಂತರವಾಗಿ ತುಳಸಿ ಸೇವೆ ನಡೆಸುತ್ತಿದ್ದಾರೆ.
ಬೆಂಗಳೂರು ನಗರದ ಜಯನಗರದ ನಿವಾಸಿಯಾಗಿರುವ ರಾಮ ಭಕ್ತ ಡಾ. ಶಿವಕಜಮಾರ್ ಅವರು ಪ್ರಭು ಶ್ರೀರಾಮನಿಗೆ ತುಳಸಿ ಸೇವೆ ಮಾಡಲೆಂದೇ ಅಯೋಧ್ಯೆ ಸಮೀಪ 60 ಕಿಲೋಮೀಟರ್ ದೂರದಲ್ಲಿ 2 ಎಕರೆ ಜಾಗ ಖರೀದಿ ಮಾಡಿದ್ದಾರೆ. ಕಳೆದ ಸಪ್ಟೆಂಬರ್ ತಿಂಗಳಲ್ಲಿ ಗುಜರಾತ್ನ ತುಳಸಿ ವನದಿಂದ ಕೃಷ್ಣ ತುಳಸಿ ಬೀಜಗಳನ್ನು ತಂದು ನಾಟಿ ಮಾಡಲಾಗಿದೆ.
ಇದನ್ನೂ ಓದಿ: ಅಯೋಧ್ಯೆ, ಮಂಡ್ಯದಲ್ಲಿ ಒಂದೇ ದಿನ ರಾಮ ಮಂದಿರ ಉದ್ಘಾಟನೆ; ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ವಿಗ್ರಹವೇ ಪ್ರತಿಷ್ಠಾಪನೆ
ಸದ್ಯ, ತುಳಸಿ ಗಿಡಗಳಾಗಿ ಬೆಳೆದು ನಿಂತಿದಿದ್ದು, ಶ್ರೀರಾಮನಿಗಾಗಿ ತುಳಸಿ ಮಾಲೆ ಕಟ್ಟಲು ಬೆಂಗಳೂರಿನ ಮೂವರು ಯುವಕರನ್ನು ಕಳುಹಿಸಲಾಗಿದೆ. ವಿಮಾನದ ಮೂಲಕ ತೆರಳಿದ ಯುವಕರು ಅಯೋಧ್ಯೆ ತಲುಪಿದ್ದು, ಹೂವು ಕಟ್ಟುವ ಕಾರ್ಯ ಆರಂಭಿಸಿದ್ದಾರೆ. ಜನವರಿ 17 ರಿಂದ ನಿರಂತರ ತುಳಸಿ ಸೇವೆ ಮಾಡಲಾಗುತ್ತಿದ್ದು, ಜನವರಿ 22 ಕ್ಕೆ ರಾಮಲಲ್ಲಾನಿಗೆ ವಿಶೇಷ ತುಳಸಿ ಮಾಲೆ ಸಿದ್ಧಪಡಿಸಲಾಗುತ್ತಿದೆ.
ರಾಮ ಮಂದಿರ ಉದ್ಘಾಟನೆ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Thu, 18 January 24