ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಸುಳಿವು ಕೊಟ್ಟ ಬಿಎಂಆರ್​ಸಿಎಲ್: ಬೆಂಗಳೂರು ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ಸಾಧ್ಯತೆ

| Updated By: Ganapathi Sharma

Updated on: Aug 13, 2024 | 7:37 AM

Namma Metro Ticket Price: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿಗೆ ನಮ್ಮ ಮೆಟ್ರೋ ಟ್ರ್ಯಾಕ್​ಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಬಿಎಂಆರ್​ಸಿಎಲ್ ಪಿಎಸ್​ಡಿ ಮೊರೆ ಹೋಗಿದೆ. ಆದರೆ ಅದನ್ನು ಅಳವಡಿಸಲು 800 ಕೋಟಿ ರುಪಾಯಿ ವೆಚ್ಚವಾಗುತ್ತದೆ. ಅದಕ್ಕೆ ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎನ್ನುತ್ತಿದ್ದಾರೆ ನಮ್ಮ ಮೆಟ್ರೋ ಅಧಿಕಾರಿಗಳು. ಆದರೆ, ಇದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಸುಳಿವು ಕೊಟ್ಟ ಬಿಎಂಆರ್​ಸಿಎಲ್: ಬೆಂಗಳೂರು ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ಸಾಧ್ಯತೆ
ನಮ್ಮ ಮೆಟ್ರೋ
Follow us on

ಬೆಂಗಳೂರು, ಆಗಸ್ಟ್ 13: ಬೆಂಗಳೂರಿನ ನಮ್ಮ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ, ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್​ಡಿ (ಪ್ಲಾಟ್ ಫಾರಂ ಸ್ಕ್ರೀನ್) ಅಳವಡಿಕೆಗೆ ಬಿಎಂಆರ್​​ಸಿಎಲ್ ಮುಂದಾಗಿದೆ. ಹೊಸ ಮಾರ್ಗಗಳಾದ ಗೊಟ್ಟಿಗೆರೆಯಿಂದ ನಾಗವಾರ (ಪಿಂಕ್‌ ಲೈನ್), ಸಿಲ್ಕ್ ಬೋರ್ಡ್​ನಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬ್ಲೂ ಲೈನ್​ನಲ್ಲಿ ಪಿಎಸ್​ಡಿ ಡೋರ್ ಅಳವಡಿಸಲು ಖಾಸಗಿ ಕಂಪನಿಗೆ 152 ಕೋಟಿ ರುಪಾಯಿ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿದೆ. ಹೀಗಿರುವಾಗ ಹಳೆಯ ಮೆಟ್ರೋ ಸ್ಟೇಷನ್​ಗಳಿಗೂ ಪಿಎಸ್​ಡಿ ಡೋರ್ ಅಳವಡಿಸಲು ಪ್ರಯಾಣಿಕರ ಒತ್ತಡ ಹೆಚ್ಚಾಗಿದೆ.

ಎಲ್ಲಾ ಮೆಟ್ರೋ ಸ್ಟೇಷನ್​ಗಳಿಗೂ ಪಿಎಸ್​ಡಿ ಅಳವಡಿಸಲು 700 ರಿಂದ 800 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಟಿಕೆಟ್ ದರ ಹೆಚ್ಚಿಸುವ ಕುರಿತು ಬಿಎಂಆರ್​ಸಿಎಲ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಬಗ್ಗೆ ಬಿಎಂಆರ್​ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಸುಳಿವು ನೀಡಿದ್ದಾರೆ.

ಒಂದು ಮೆಟ್ರೋ ಸ್ಟೇಷನ್​ಗೆ ಪಿಎಸ್​ಡಿ ಅಳವಡಿಸಲು 8 ರಿಂದ 10 ಕೋಟಿ ವೆಚ್ಚವಾಗಲಿದೆ. ಸದ್ಯ ಕಾರ್ಯಾಚರಣೆಯಲ್ಲಿರುವ ಹಸಿರು ಮತ್ತು ನೇರಳೆ ಮಾರ್ಗದ ಎಲ್ಲಾ ಮೆಟ್ರೋ ಸ್ಟೇಷನ್​​ಗಳಿಗೆ ಪಿಎಸ್​ಡಿ ಅಳವಡಿಸಲು ಸುಮಾರು 700 ರಿಂದ 800 ಕೋಟಿ ರೂಪಾಯಿ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ಟಿಕೆಟ್ ದರ ಏರಿಕೆ ಮಾಡಲು ಚಿಂತನೆ ನಡೆಸಲಾಗುತ್ತಿದೆ.

ಬಿಎಂಆರ್​ಸಿಎಲ್ ಚಿಂತನೆಗೆ ಪ್ರಯಾಣಿಕರ ಆಕ್ರೋಶ

ಬ್ಯಾಂಕ್​​​ನಲ್ಲಿ ಸಾಲ ಪಡೆದುಕೊಂಡರೆ ಪ್ರತಿ ತಿಂಗಳು ಬಡ್ಡಿ ಕಟ್ಟಬೇಕಾಗುತ್ತದೆ. ಅದನ್ನು ಪ್ರಯಾಣಿಕರ ಮೇಲೆ ಹೊರೆ ಹಾಕಬೇಕಾಗುತ್ತದೆ. ಹಾಗಾಗಿ ಟಿಕೆಟ್ ದರ ಏರಿಕೆ ಮಾಡಿದರೆ ಪಿಎಸ್​ಡಿಗೆ ಬೇಕಾದ ಹಣ ಹೊಂದಿಸಲು ಸರಿ ಆಗುತ್ತದೆ ಎನ್ನುವುದು ನಮ್ಮ ಮೆಟ್ರೋ ಯೋಚನೆ. ಆದರೆ ಇದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಕೇಳಿ ಪಿಎಸ್​ಡಿ ಹಾಕಿ, ಅದನ್ನು ಬಿಟ್ಟು ಪ್ರಯಾಣಿಕರ ಮೇಲೆ ಹೊರೆ ಹಾಕುವುದು ಸರಿಯಲ್ಲ ಎಂದು ಪ್ರಯಾಣಿಕ ಪ್ರಸಾದ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರಿ ಮಳೆ, ಮರದ ಕೊಂಬೆ ಬಿದ್ದು 6 ಜನರಿಗೆ ಗಾಯ

ಒಟ್ಟಿನಲ್ಲಿ, ಪದೇಪದೇ ಮೆಟ್ರೋ ಟ್ರ್ಯಾಕ್​​ಗೆ ಜಿಗಿದು ಪ್ರಯಾಣಿಕರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿರುವುದನ್ನು ತಡೆಯುವುದಕ್ಕಾಗಿ ನೂರಾರು ಕೋಟಿ ರುಪಾಯಿ ಹಣ ಬೇಕು. ಅದಕ್ಕೆ ಟಿಕೆಟ್ ದರ ಏರಿಕೆ ಮಾಡಲು ಬಿಎಂಆರ್​​ಸಿಎಲ್ ಮುಂದಾಗಿದೆ. ಆದರೆ, ಪಿಎಸ್​ಡಿ ಅಳವಡಿಕೆಗಾಗಿ ಟಿಕೆಟ್ ದರ ಏರಿಕೆ ಮಾಡುವುದು ಎಷ್ಟು ಸರಿ ಎನ್ನುವುದು ಪ್ರಯಾಣಿಕರ ಪ್ರಶ್ನೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ