ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು(Siddaramaiah) ನಿನ್ನೆ(ಜುಲೈ 07) ಮಂಡಿಸಿದ ಬಜೆಟ್ನಲ್ಲಿ ಮುಂದಿನ ಮೂರು ವರ್ಷಗಳಲ್ಲಿ 70 km ಇರುವ ಮೆಟ್ರೋವನ್ನು 176 ಕಿ.ಮೀ ಗೆ ವಿಸ್ತರಣೆ ಮಾಡಲಾಗುವುದು ಎಂದು ಮೆಟ್ರೋ(Namma Metro) ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದರು. ಆದ್ರೆ ಈಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಜು.10ರಿಂದ ಆಗಸ್ಟ್ 9ರವರೆಗೆ ಅಂದರೆ ಬರೋಬ್ಬರಿ ಒಂದು ತಿಂಗಳು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಜು.10ರಿಂದ ಆ.9ರವರೆಗೆ ಪ್ರತಿದಿನ 2 ತಾಸು ಮೆಟ್ರೋ ಸಂಚಾರ ಬಂದ್ ಮಾಡಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪತ್ರಿಕೆ ಪ್ರಕಟಣೆ ಹೊರಡಿಸಿದೆ.
ಹೌದು ಜುಲೈ 10 ರಿಂದ ಆಗಸ್ಟ್ 09ರ ವರೆಗೆ ಬೈಯಪ್ಪನಹಳ್ಳಿ ಹಾಗೂ ಕೃಷ್ಣರಾಜಪುರಂ ನಿಲ್ದಾಣಗಳನ್ನು ಸಂಪರ್ಕಿಸುವ ಸಿಗ್ನಲಿಂಗ್ ಹಾಗೂ ಇತರ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ಪ್ರತಿದಿನ ಬೆಳಗ್ಗೆ 5ರಿಂದ 7 ಗಂಟೆವರೆಗೆ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.
ಬೈಯಪ್ಪನಹಳ್ಳಿ-ಸ್ವಾಮಿ ವಿವೇಕಾನಂದ ರಸ್ತೆ, ಹಾಗೂ ಕೃಷ್ಣರಾಜಪುರ-ವೈಟ್ಫೀಲ್ಡ್(ಕಾಡುಗೋಡಿ) ನಡುವಿನ ಎರಡು ಮೆಟ್ರೋ ರೈಲು ಸಂಚಾರವನ್ನು ಬೆಳಗ್ಗೆ 5 ರಿಂದ 7 ಘಂಟೆವರೆಗೂ ಸ್ಥಗಿತಗೊಳಿಸಲಾಗುತ್ತಿದೆ. ಬೆಳಗ್ಗೆ 7 ಘಂಟೆಯ ನಂತರ ಬೈಯಪ್ಪನಹಳ್ಳಿ-ಕೆಂಗೇರಿ, ಕೃಷ್ಣರಾಜಪುರ-ವೈಟ್ಫೀಲ್ಡ್(ಕಾಡುಗೋಡಿ) ನಡುವಿನ ರೈಲು ಸಂಚಾರವು ಎಂದಿನಂತೆ ರಾತ್ರಿ 11 ಘಂಟೆವರೆಗೆ ಇರಲಿದೆ. ಇನ್ನು ಹಸಿರು ಬಣ್ಣದ ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು BMRCL ತಿಳಿಸಿದೆ.
ಇದನ್ನೂ ಓದಿ: Namma Metro: ಏಕಾಏಕಿ ಬೆಂಗಳೂರು ನಮ್ಮ ಮೆಟ್ರೋ ಸಂಚಾರ ಸ್ಥಗಿತ: ಪ್ರಯಾಣಿಕರು ಪರದಾಟ
ಕೆಲ ದಿನಗಳ ಹಿಂದೆ ನೇರಳೆ ಮಾರ್ಗವಾದ ಬೈಯ್ಯಪ್ಪನಹಳ್ಳಿ ಕೆಂಗೇರಿ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಿತ್ತು. ಹೀಗಾಗಿ ಮೆಟ್ರೋ ಪ್ರಯಾಣಿಕರು ಹಲವು ಗಂಟೆಗಳ ಕಾಲ ಮೆಟ್ರೋ ಸೇವೆ ಇಲ್ಲದೇ ಪರದಾಡುವಂತಾಗಿತು. ಎಂದಿನಂದೆ ಬೆಳಗ್ಗೆ 6 ಗಂಟೆಗೆ ಮೆಟ್ರೋ ಸಂಚಾರ ಆರಂಭವಾಗಬೇಕಿತ್ತು. ಆದ್ರೆ ಬೆಳಗ್ಗೆ 5.45 ಕ್ಕೆ ಸಿಗ್ನಲಿಂಗ್ ಸಮಸ್ಯೆ ಇರೋದು ಕಂಡುಬಂದ ಕಾರಣ ಮೆಟ್ರೋ ಸಂಚಾರ ಆರಂಭವಾಗಲೇ ಇಲ್ಲ. ಪ್ರತಿನಿತ್ಯದಂತೆ ಪ್ರಯಾಣಿಕರು ಮೆಟ್ರೋ ಸ್ಟೇಷನ್ ಗೆ ಬಂದು ಮೆಟ್ರೋ ಇಲ್ಲದೇ ಪರ್ಯಾಯ ವ್ಯವಸ್ಥೆ ಮಾಡಿಕೊಂಡ್ರು. ಅದ್ರಲ್ಲೂ ಕಚೇರಿಗೆ ತೆರಳುವ ಪೀಕ್ ಅವರ್ ನಲ್ಲಿ ಮೆಟ್ರೋ ನಿಲ್ದಾಣ ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಕೆಂಗೇರಿ ಮಾರ್ಗದವರೆಗೂ ರೈಲು ಸಂಚಾರ ಸ್ಥಗಿತ ಮಾಡಲಾಗಿತ್ತು.
ಮೆಟ್ರೋ ನಿಲ್ದಾಣದಲ್ಲಿ ಸಮಸ್ಯೆ ಕಂಡುಬಂದ ಕೂಡಲೇ ಮೆಟ್ರೋ ತಾಂತ್ರಿಕ ಹಾಗೂ ಎಂಜಿನಿಯರ್ ತಂಡ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ರು. ಪೀಕ್ ಅವರ್ ಆಗಿದ್ದರಿಂದ ಮ್ಯಾನುವಲ್ ಆಗಿ 10 ನಿಮಿಷಗಳ ಫ್ರೀಕ್ವೆನ್ಸಿ ಯಲ್ಲಿ ಮೆಟ್ರೋ ರನ್ ಮಾಡಲಾಯ್ತು. ಮಧ್ಯಾಹ್ನ 12.10 ರಿಂದ ಮೆಟ್ರೋ ನಾರ್ಮಲ್ ಸ್ಥಿತಿಗೆ ಮರಳಿದ್ದು ಎಂದಿನಂತೆ ಮೆಟ್ರೋ ಸಂಚಾರ ಆರಂಭ ಮಾಡಲಾಯ್ತು. ಸಿಗ್ನಲ್ ಸಮಸ್ಯೆ ಇದ್ದಿದ್ರಿಂದ ಮ್ಯಾನವಲ್ ಆಗಿ ಮೆಟ್ರೋ ಓಡಿಸಬೇಕಾಯ್ತು. ಮ್ಯಾನುವಲ್ ಆಗಿ ರೈಲು ಓಡಿಸುವಾಗ ಸ್ಪೀಡ್ ಹಾಗೂ ಫ್ರೀಕ್ವೆನ್ಸಿ ಕಡಿಮೆ ಮಾಡಲಾಗಿತ್ತು. 10 ನಿಮಿಷಕ್ಕೊಮ್ಮೆ ರೈಲು ಸಂಚರಿಸುತ್ತಿತ್ತು. ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 12 ಗಂಟೆಗೆ ಟ್ರೈನ್ ಸ್ಥಗಿತಗೊಳಿಸಿ ಸಮಸ್ಯೆ ಬಗೆಹರಿಸಲಾಯ್ತು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ