ಬೆಂಗಳೂರು: ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್

ಬೆಂಗಳೂರು ಮೆಟ್ರೋ ನಿಲ್ದಾಣ ಸ್ಫೋಟಿಸುವುದಾಗಿ ಬಿಎಂಆರ್‌ಸಿಎಲ್‌ಗೆ ಬೆದರಿಕೆ ಇಮೇಲ್ ಬಂದಿದೆ. ನವೆಂಬರ್ 14ರ ರಾತ್ರಿ ಬಂದ ಈ ಇಮೇಲ್‌ನಲ್ಲಿ, ಮೆಟ್ರೋ ಸಿಬ್ಬಂದಿಯಾಗಿರುವ ತನ್ನ ಮಾಜಿ ಪತ್ನಿಗೆ ಕಿರುಕುಳ ನೀಡಿದರೆ ಮೆಟ್ರೋ ಬ್ಲಾಸ್ಟ್ ಮಾಡುವುದಾಗಿ ವ್ಯಕ್ತಿ ಬೆದರಿಸಿದ್ದಾನೆ. ಬಿಎಂಆರ್‌ಸಿಎಲ್ ದೂರಿನ ಮೇರೆಗೆ ವಿಲ್ಸನ್ ಗಾರ್ಡನ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಬೆಂಗಳೂರು: ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್
ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
Edited By:

Updated on: Nov 18, 2025 | 2:44 PM

ಬೆಂಗಳೂರು, ನವೆಂಬರ್ 18: ಬೆಂಗಳೂರಿನ ಮೆಟ್ರೋ ನಿಲ್ದಾಣವನ್ನು (Metro Station Bomb Threat) ಸ್ಫೋಟಿಸುವುದಾಗಿ ಬಂದಿರುವ ಬೆದರಿಕೆ ಇಮೇಲ್‌ ಒಂದು ಬಿಎಂಆರ್‌ಸಿಎಲ್‌ನಲ್ಲಿ ಆತಂಕ ಸೃಷ್ಟಿಸಿದೆ. ನವೆಂಬರ್ 14ರ ರಾತ್ರಿ ಸುಮಾರು 11.30ಕ್ಕೆ ಬಿಎಂಆರ್‌ಸಿಎಲ್ (BMRCL) ಅಧಿಕೃತ ಇಮೇಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆಯ ಸಂದೇಶ ಕಳುಹಿಸಿದ್ದ. ವ್ಯಕ್ತಿ ತಾನು ಕಳಿಸಿದ ಇ-ಮೇಲ್​ನಲ್ಲಿ ತನ್ನ ವಿಚ್ಛೇದಿತ ಪತ್ನಿಗೆ ಡ್ಯೂಟಿ ನಂತರ ಮಾನಸಿಕ ಕಿರುಕುಳ ನೀಡಿದರೆ ಮೆಟ್ರೋ ನಿಲ್ದಾಣ ಬ್ಲಾಸ್ಟ್ ಮಾಡುತ್ತೇನೆಂದು ಬರೆದಿದ್ದಾನೆ.

ಇಮೇಲ್‌ನಲ್ಲಿ, ಮೆಟ್ರೋ ಸಿಬ್ಬಂದಿಯಾದ ತನ್ನ ವಿಚ್ಛೇದಿತ ಪತ್ನಿಗೆ ಡ್ಯೂಟಿ ನಂತರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ನಿಮ್ಮ ಒಂದು ಮೆಟ್ರೋ ನಿಲ್ದಾಣ ಬ್ಲಾಸ್ಟ್ ಮಾಡಬೇಕಾಗುತ್ತದೆ. ನಾನು ಉಗ್ರಗಾಮಿಯಂತೆ, ಅದರಲ್ಲೂ ಕನ್ನಡಿಗರ ವಿರುದ್ಧ ಎಂದು ಬೆದರಿಕೆ ಹಾಕಲಾಗಿದೆ. ಮೇಲ್ ಪರಿಶೀಲಿಸಿದ ಬಳಿಕ ಬಿಎಂಆರ್‌ಸಿಎಲ್ ಅಧಿಕಾರಿ ತಕ್ಷಣವೇ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಸುಳ್ಳು ಬೆದರಿಕೆ ಇರಬಹುದು: ನಾರಾಯಣಸ್ವಾಮಿ

ಮೆಟ್ರೋ ರೈಲಿಗೆ ಬಾಂಬ್ ಬೆದರಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಲೋಕಸಭಾ ಸದಸ್ಯ ನಾರಾಯಣಸ್ವಾಮಿ,ಬಾಂಬ್ ಬೆದರಿಕೆ ಸುಳ್ಳು ಬೆದರಿಕೆ ಇರಬಹುದು. ಇದೆಲ್ಲದಕ್ಕೂ ಕಾರಣ ಆಡಳಿತ ಪಕ್ಷ. ಸುಳ್ಳು ಹೇಳಿದವರಿಗೆ ಶಿಕ್ಷೆ ಕೊಟ್ಟರೆ ತಡೆಯಬಹುದು. ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟರೆ ಪೊಲೀಸರನ್ನು ಕರೆಸಿ ಅರೆಸ್ಟ್ ಮಾಡಿಸುವ ಕೆಲಸ‌ ಮಾಡುತ್ತಾರೆ.ಕ್ರಿಮಿನಲ್ ಪ್ರಕರಣ ನಡೆದಾಗ ಯಾಕೆ ಕಿವಿ ಮುಚ್ಚಿಕೊಂಡಿರುತ್ತಾರೆ? ಮಂಗಳೂರಿನಲ್ಲಿ ಮಳೆ ಹಾನಿಯಿಂದ ಎರಡು ಕಾಲು ಕಳೆದುಕೊಂಡ ಮಹಿಳೆ ಪರಿಹಾರಕ್ಕೆ ಡಿಸಿ ಕಚೇರಿಗೆ ಬಂದ ವಿಚಾರದಲ್ಲಿಯೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಈ ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹತೋಟಿ ಇಲ್ಲ. ಅಧಿಕಾರಿಗಳು ಸರ್ಕಾರಕ್ಕೆ ಸೊಪ್ಪು ಹಾಕುತ್ತಿಲ್ಲ. ಯಾವ ಅಧಿಕಾರಿಗಳು ಕೂಡಾ ಮಂತ್ರಿಗಳನ್ನು ಗೌರವಿಸುತ್ತಿಲ್ಲ. ತೊಂದರೆಗೆ ಒಳಗಾದವರನ್ನು ಕರೆಸಿಕೊಳ್ಳುವ ಪ್ರವೃತ್ತಿ ಸರಿಯಲ್ಲ ಎಂದರು.

 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Published On - 8:42 am, Tue, 18 November 25