ಬೆಂಗಳೂರು, ನವೆಂಬರ್ 27: ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು (BMRCL) ನಮ್ಮ ಮೆಟ್ರೊ (Namma Metro) ಯೋಜನೆಯ 3ನೇ ಹಂತದ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಸಜ್ಜಾಗಿದೆ. ಮೊದಲ ಹಂತದಲ್ಲಿ, ಸಂಸ್ಥೆಯು ಮೆಟ್ರೋ ಕಾರಿಡಾರ್‌ನ ಯೋಜಿತ ವಿಸ್ತರಣೆಗಳಲ್ಲಿ ಮೆಟ್ರೋ ಡಿಪೋ ಮತ್ತು ವಯಡಕ್ಟ್‌ಗಳ ನಿರ್ಮಾಣಕ್ಕಾಗಿ 100 ಎಕರೆ ಭೂಮಿಯನ್ನು ಗುರುತಿಸಿ, ಸ್ವಾಧೀನಪಡಿಸಿಕೊಳ್ಳಲಿದೆ. ಗುರುತಿಸಲಾದ ಆಸ್ತಿಗಳಿಗೆ ಜಂಟಿ ಸಮೀಕ್ಷೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ನಮ್ಮ ಮೆಟ್ರೋದ 3 ನೇ ಹಂತದ ಕಾಮಗಾರಿ 15,600 ಕೋಟಿ ರೂಪಾಯಿಗಳ ಅಂದಾಜು ವೆಚ್ಚದೊಂದಿಗೆ ನಡೆಯಲಿದೆ. ಇದಕ್ಕೆ 2022 ರ ನವೆಂಬರ್ನಲ್ಲಿ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಲು ಹಣಕಾಸು ಇಲಾಖೆ ಇತ್ತೀಚೆಗೆ ಹಸಿರು ನಿಶಾನೆ ತೋರಿತ್ತು. ಭೂಸ್ವಾಧೀನಕ್ಕೆ ಯಾವುದೇ ರೀತಿಯ ಖರ್ಚು ಮಾಡಬೇಕಿದ್ದರೆ ರಾಜ್ಯ ಸಚಿವ ಸಂಪುಟದ ಅನುಮೋದನೆ ಅನಿವಾರ್ಯವಾಗಿದೆ.
ಬೆಂಗಳೂರು ಮೆಟ್ರೋ ಹಂತ 3 ರ ಅಡಿಯಲ್ಲಿ, ಬಿಎಂಆರ್‌ಸಿಎಲ್ ಎರಡು ಮೆಟ್ರೋ ಮಾರ್ಗಗಳನ್ನು ಯೋಜಿಸಿದೆ. ಮೊದಲನೆಯದು ಕೆಂಪಾಪುರದಿಂದ ಜೆಪಿ ನಗರದ ಹೊರವರ್ತುಲ ರಸ್ತೆಯನ್ನು ಸಂಪರ್ಕಿಸುವ 32.1 ಕಿ.ಮೀ. ಮಾರ್ಗವಾಗಿದ್ದು, ಎರಡನೇಯದ್ದು ಮಾಗಡಿ ರಸ್ತೆ ಹೊಸಹಳ್ಳಿಯಿಂದ ಕಡಬಗೆರೆಗೆ ಸಂಪರ್ಕ ಕಲ್ಪಿಸುವ 12.5 ಕಿ.ಮೀ. ಮಾರ್ಗವಾಗಿದೆ. ಆದರೆ, ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ.
ಇದನ್ನೂ ಓದಿ: ಇನ್ಮುಂದೆ ನಮ್ಮ ಮೆಟ್ರೋದಲ್ಲಿ ಸಿನಿ ತಾರೆಯರ ಕಲರವ: ಸಿನಿಮಾ ಶೋಟಿಂಗ್ಗೆ ಬಿಎಂಆರ್‌ಸಿಎಲ್ ಗ್ರೀನ್ ಸಿಗ್ನಲ್
ಬಿಎಂಆರ್ ಸಿಎಲ್ 3ನೇ ಹಂತಕ್ಕೆ 100 ಎಕರೆ ಜಾಗ ಗುರುತಿಸಿದ್ದು, ಈ ಪೈಕಿ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಬಳಿಯ ಮಾಗಡಿ ರಸ್ತೆಯಲ್ಲಿ ಡಿಪೋ ನಿರ್ಮಾಣಕ್ಕೆ 75 ಎಕರೆ ಮೀಸಲಿಡಲಾಗಿದೆ. ಇದಲ್ಲದೇ 25 ಎಕರೆ ಜಾಗವನ್ನು ಮೇಲ್ಸೇತುವೆ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಬಿಎಂಆರ್ಸಿಎಲ್ನ ಯೋಜನಾ ವಿಭಾಗವು ಪ್ರಸ್ತಾವಿತ ನಮ್ಮ ಮೆಟ್ರೋ ಲೈನ್‌ಗಳ ಪ್ರತಿ 10 ಕಿಮೀ ವಿಭಾಗಕ್ಕೆ ಭೂಸ್ವಾಧೀನ ಅಗತ್ಯತೆಗಳನ್ನು ಸಲ್ಲಿಸಬೇಕು. ನಂತರ, ಯೋಜನೆಯು ಪ್ರಗತಿಯಲ್ಲಿರುವಂತೆ ಪ್ರತಿ 10 ಕಿಮೀ ವ್ಯಾಪ್ತಿಯ ಭೂಸ್ವಾಧೀನಕ್ಕೆ ಅಧಿಸೂಚನೆಯನ್ನು ಸಹ ಹೊರಡಿಸಲಾಗುತ್ತದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ