ಬೆಂಗಳೂರು, ಫೆಬ್ರವರಿ 2: ಬಿಎಂಟಿಸಿ ಬಸ್ ಮತ್ತು ಬೈಕ್ ಡಿಕ್ಕಿಯಾಗಿ (BMTC Bus Accident) ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಬೆಂಗಳೂರಿನ (Bengaluru) ಹರಿಶ್ಚಂದ್ರ ಘಾಟ್ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಕೆಂಗೇರಿಯ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತಿದ್ದ ಮಲ್ಲೇಶ್ವರ ನಿವಾಸಿ ಯುವತಿ ಕುಸುಮಿತಾ (21) ಇಂದು ಬೆಳಗ್ಗೆ 8.30ಕ್ಕೆ ಕಾಲೇಜಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.
ಮಲ್ಲೇಶ್ವರಂನಿಂದ ಹರಿಶ್ಚಂದ್ರಘಾಟ್ಗೆ ಬೈಕ್ ನಲ್ಲಿ ಬರುತಿದ್ದ ಯುವತಿ, ಬಳಿಕ ಮೆಟ್ರೋ ಬಳಸಿ ಕಾಲೇಜಿಗೆ ತೆರಳುತಿದ್ದಳು. ಶುಕ್ರವಾರ ಬೆಳಗ್ಗೆ ಸಹ ಎಂದಿನಂತೆಯೇ, ಮಲ್ಲೇಶ್ವರದಿಂದ ಹೊರಟಿದ್ದಳು. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಬಸ್ ಆಕೆ ತೆರಳುತ್ತಿದ್ದ ಬೈಕ್ಗೆ ಡಿಕ್ಕಿಹೊಡೆದಿದೆ. ಬಳಿಕ ಬೈಕ್ ಸಮೇತ ಎಳೆದೊಯ್ದಿದೆ.
ಬಳಿಕ ಗಾಯಾಗೊಂಡಿದ್ದ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಸದ್ಯ ಮೃತದೇಹವನ್ನು ಕೆಸಿ ಜನರಲ್ ಆಸ್ಪತ್ರೆಯಲ್ಲಿರಿಸಲಾಗಿದೆ.
ಮಾರತ್ತಹಳ್ಳಿಯ ವರ್ತೂರು ಮುಖ್ಯ ರಸ್ತೆಯಲ್ಲಿ ಬಿಎಂಟಿಸಿ ವೋಲ್ವೋ ಬಸ್ ಹರಿದು ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆ ಇತ್ತೀಚೆಗೆ ಸಂಭವಿಸಿತ್ತು.
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಅಪಘಾತಗಳು ಕಳೆದ ಕೆಲವು ತಿಂಗಳುಗಳಲ್ಲಿ ಹೆಚ್ಚಾಗಿದೆ. 2023 ರ ಅಕ್ಟೋಬರ್ ತಿಂಗಳೊಂದರಲ್ಲೇ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಮೂವರು ಮೃತಪಟ್ಟ ಪ್ರತ್ಯೇಕ ಘಟನೆಗಳು ವರದಿಯಾಗಿದ್ದವು. ಡಿಸೆಂಬರ್ 28ರಂದು ಬಿಎಂಟಿಸಿ ಬಸ್ಗೆ ಡಿಕ್ಕಿಯಾಗಿ ಪಾದಚಾರಿ ಮಹಿಳೆ ಸಾವನ್ನಪ್ಪಿದ್ದರು. ಅದಾದ ನಂತರ ಜನವರಿ 6ರಂದು ಬಿಎಂಟಿಸಿ ವೋಲ್ವೋ ಬಸ್ ಹರಿದು ಬೈಕ್ ಸವಾರ ಮೃತಪಟ್ಟಿದ್ದರು.
ಕ್ರಷರ್ನಲ್ಲಿ ಮಹಿಳೆ ಮೇಲೆ ಟಿಪ್ಪರ್ ಹರಿದು ಮಹಿಳೆಯೊಬ್ಬರು ಮೃತಪಟ್ಟ ದಾರುಣ ಘಟನೆ ಹೊಸಕೋಟೆ ತಾಲೂಕಿನ ಮುತುಕದಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಮುತುಕದಹಳ್ಳಿ ಗ್ರಾಮದ ಮಂಜುಳಾ (39) ಮೃತ ಮಹಿಳೆಯಾಗಿದ್ದಾರೆ. ಮಹಿಳೆ ವಿಶ್ವ ವಿನಾಯಕ ಸ್ಟೋನ್ ಕ್ರಷರ್ನಲ್ಲಿ ಕೆಲಸಕ್ಕಿದ್ದರು. ಮಹಿಳೆ ಕೆಲಸ ಮಾಡುತ್ತಿದ್ದ ವೇಳೆ ಟಿಪ್ಪರ್ ಹಿಮ್ಮುಖವಾಗಿ ಚಲಿಸಿದ್ದು, ಮಹಿಳೆ ಮೇಲೆ ಟಿಪ್ಪರ್ ಚಕ್ರ ಹರಿದಿದೆ. ಪರಿಣಾಮವಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿ ವೋಲ್ವೋ ಬಸ್ಗೆ ಬೈಕ್ ಸವಾರ ಬಲಿ
ಘಟನೆ ಬಳಿಕ ಸ್ಥಳದಲ್ಲಿ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ನಂದಗುಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ