ಬೆಂಗಳೂರು, ಡಿ.12: ನವೆಂಬರ್ ತಿಂಗಳಲ್ಲಿ ವಿವಿಧ ನಿಯಮಗಳನ್ನು ಉಲ್ಲಂಘಿಸಿದ 3,767 ಪ್ರಯಾಣಿಕರ ವಿರುದ್ಧ ಬಿಎಂಟಿಸಿ ಕ್ರಮ ಕೈಗೊಂಡಿದೆ. ಒಟ್ಟು 7 ಲಕ್ಷ ರೂಪಾಯಿಗಳನ್ನು ದಂಡದ ಮೊತ್ತವನ್ನು ಸಂಗ್ರಹಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮಂಗಳವಾರ ತಿಳಿಸಿದೆ.
ಪ್ರಯಾಣಿಕರು ಟಿಕೆಟ್ ರಹಿತ ಪ್ರಯಾಣ ಮಾಡುವುದನ್ನು ತಡೆಗಟ್ಟಲು ಹಾಗೂ ಅಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲು ಬಿಎಂಟಿಸಿ ಬಸ್ಗಳನ್ನು ಸಿಬ್ಬಂದಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ ಎಂದು ಬಿಟಿಎಂಸಿ ಹೇಳಿಕೆಯಲ್ಲಿ ತಿಳಿಸಿದೆ.
ನವೆಂಬರ್ ತಿಂಗಳಲ್ಲಿ 16,421 ಟ್ರಿಪ್‌ಗಳನ್ನು ಸಿಬ್ಬಂದಿ ಪರಿಶೀಲಿಸಿದ್ದಾರೆ. ಈ ವೇಳೆ 3,329 ಪ್ರಯಾಣಿಕರು ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದದ್ದನ್ನು ಪತ್ತೆಹಚ್ಚಿ, ಒಟ್ಟು 6,68,610 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಅಲ್ಲದೆ, ಕರ್ತವ್ಯಲೋಪ ಹಿನ್ನೆಲೆ ಕಂಡಕ್ಟರ್‌ಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿಯಲ್ಲಿ ಇನ್ನೂ ಅನುಷ್ಠಾನಕ್ಕೆ ಬಾರದ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್, ಏನಿದು?
ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಆಸನಗಳಲ್ಲಿ ಕುಳಿತುಕೊಂಡು ಪ್ರಯಾಣ ಮಾಡುತ್ತಿದ್ದ 438 ಪುರುಷ ಪ್ರಯಾಣಿಕರಿಗೆ ಬಿಎಂಟಿಸಿಯ ತಪಾಸಣಾ ಸಿಬ್ಬಂದಿ ದಂಡ ವಿಧಿಸಿದ್ದಾರೆ ಮತ್ತು ಕರ್ನಾಟಕ ಮೋಟಾರು ವಾಹನಗಳ ನಿಯಮಗಳಿಗೆ ಅನುಗುಣವಾಗಿ 43,800 ರೂಪಾಯಿ ದಂಡವನ್ನು ವಸೂಲಿ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ಸರ್ಕಾರವು ಶಕ್ತಿ ಯೋಜನೆಯಡಿ ನೀಡಲಾದ ಉಚಿತ ಟಿಕೆಟ್‌ಗಳಿಗಾಗಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ 1669.45 ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಜೂನ್ 2023 ರಲ್ಲಿ ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ BMTC, KSRTC, NWKRTC ಮತ್ತು KKRTC ಗಳು 2,671 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಉಚಿತ ಟಿಕೆಟ್‌ಗಳನ್ನು ನೀಡಿವೆ.
ಶಕ್ತಿ ಯೋಜನೆಯಡಿ ಕರ್ನಾಟಕದ ಮಹಿಳೆಯರಿಗೆ ರಾಜ್ಯದಲ್ಲಿ ಸಂಚರಿಸುವ ಎಲ್ಲಾ ಸರ್ಕಾರಿ ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಲಾಗಿದೆ. ವರದಿಗಳ ಪ್ರಕಾರ, ಡಿಸೆಂಬರ್ 10 ರವರೆಗೆ 111 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದಾರೆ.
ಪ್ರಸ್ತುತ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ, ಈವರೆಗೆ ಎಷ್ಟು ಟಿಕೆಟ್‌ಗಳನ್ನು ನೀಡಲಾಗಿದೆ ಮತ್ತು ರಾಜ್ಯ ಸರ್ಕಾರ ನಿಗಮಗಳಿಗೆ ಎಷ್ಟು ಮರುಪಾವತಿ ಮಾಡಿದೆ ಎಂಬುದರ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:30 pm, Tue, 12 December 23