ಬೆಂಗಳೂರಿನ ಬಹುವರ್ಷದ ಕನಸು ನನಸಾಗಿದೆ. ಮೊದಲ ಎಲೆಕ್ಟ್ರಿಕ್ ಬಸ್ ನಗರದಲ್ಲಿ ಸಂಚಾರ ಆರಂಭಿಸಿದೆ. ಹಂತ ಹಂತವಾಗಿ ಸಾವಿರ ಸಂಖ್ಯೆಯಲ್ಲೇ ವಿದ್ಯುತ್ ಚಾಲಿತ ಬಸ್ ಓಡಿಸಲು ಸರ್ಕಾರ ತೀರ್ಮಾನಿಸಿದ್ದೂ ಆಗಿದೆ. ಸರ್ಕಾರದ ಈ ತೀರ್ಮಾನ ನಿಗಮದ ನೌಕರರ ನಿದ್ದೆಗೆಡಿಸಿದೆ. ಪರಿಸರ ಸ್ನೇಹಿ ಬಸ್ ಈಗ ನೌಕರರ ಕುಟುಂಬವನ್ನು ಮೂರಾಬಟ್ಟೆ ಮಾಡುವ ಆತಂಕ ಶುರುವಾಗಿದೆ.
ಬೆಂಗಳೂರಿಗರು ಕಾತುರದಿಂದ ಕಾಯುತ್ತಿದ್ದ ಎಲೆಕ್ಟ್ರಿಕ್ ಬಸ್ ಕೊನೆಗೂ ಬಿಎಂಟಿಸಿಗೆ ಸೇರಿದೆ. ಸದ್ಯ ನಗರಕ್ಕೆ ಒಂದು ಬಸ್ ಬಂದಿದ್ದು ಕೆಲವೇ ದಿನಗಳಲ್ಲಿ ಇನ್ನಷ್ಟು ಬಸ್ ನಿಗಮವನ್ನ ಸೇರಿಕೊಳ್ಳಲಿದೆ. ಇದರಿಂದ ಬಿಎಂಟಿಸಿ ನಿಗಮವೂ ಹೊಸ ನಿರೀಕ್ಷೆಯಲ್ಲಿದೆ. ಹಾಗೇ ನಗರದ ಜನರೂ ಇನ್ಮುಂದೆ ಶಬ್ಧ ಮತ್ತು ಮಾಲಿನ್ಯ ರಹಿತ ಬಸ್ಸುಗಳು ಓಡಾಡುತ್ತವೆ ಎಂದು ಕಾಯುತ್ತಿದ್ದಾರೆ. ಆದರೆ ನಗರಕ್ಕೆ ಮೊದಲ ಬಸ್ ಬರ್ತಿದ್ದಂತೆ ಬಿಎಂಟಿಸಿ ನೌಕರರ ಮುಖದಲ್ಲಿ ನಗು ಮಾಯವಾಗಿದೆ. ಇನ್ಮುಂದೆ ನಾವು ಕೆಲಸ ಕಳೆದುಕೊಳ್ತಿವಿ. ಸರ್ಕಾರ ನೌಕರರನ್ನು ಮುಗಿಸಲೆಂದೇ ಈ ಎಲೆಕ್ಟ್ರಿಕ್ ಬಸ್ ಯೋಜನೆ ರೂಪಿಸಲಾಗಿದೆ ಎಂಬ ಆರೋಪ ಕೇಳಿಬರಲು ಶುರುವಾಗಿದೆ.
ಸದ್ಯ ಬಿಎಂಟಿಸಿ ಮೊದಲ ಹಂತದಲ್ಲಿ 90 ಎಲೆಕ್ಟ್ರಿಕ್ ಬಸ್ಸುಗಳನ್ನು ರಸ್ತೆಗಿಳಿಸಲು ತೀರ್ಮಾನಿಸಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲಾ 90 ಬಸ್‌ಗಳು ಕಾರ್ಯಾಚರಣೆ ಆರಂಭಮಾಡಲಿವೆ. ಎರಡನೇ ಹಂತದಲ್ಲಿ 300 ಬಸ್‌ಗಳನ್ನು ಮುಂದಿನ ಆರು ತಿಂಗಳಲ್ಲಿ ರಸ್ತೆಗಿಳಿಸೋದಾಗಿ ಸಚಿವ ಶ್ರೀರಾಮುಲು ಈಗಾಗಲೇ ಘೋಷಿಸಿದ್ದಾರೆ. ಮುಂದಿನ ಮೂರು ವರ್ಷದೊಳಗೆ ಮತ್ತೆ 1500 ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸಲು ಈಗಲೇ ಯೊಜನೆ ಸಿದ್ಧವಾಗುತ್ತಿದೆ. ಇದೇ ಈಗ ಬಿಎಂಟಿಸಿ ನೌಕರರಿಗೆ ಕೆಲಸ ಹೋಗುವ ಭೀತಿಗೆ ಕಾರಣವಾಗಿದೆ. ಈ ಎಲೆಕ್ಟ್ರಿಕ್ ಬಸ್ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳೇ ನೋಡಿಕೊಳ್ಳಲಿವೆ. ಈ ಬಸ್ಸುಗಳ ಚಾಲಕರೂ ಖಾಸಗಿ ಕಂಪನಿಯವರೇ ಆಗಿರಲಿದ್ದಾರೆ. ಪ್ರತಿ ಕಿಲೋಮೀಟರ್ಗೆ 51ರೂ. 67 ಪೈಸೆಯನ್ನು ಬಿಎಂಟಿಸಿ ಖಾಸಗಿ ಕಂಪನಿಗೆ ನೀಡಲಿದೆ. ಈ ಬಸ್ಸಲ್ಲಿ ಕಂಡೆಕ್ಟರ್ ಮಾತ್ರ ಬಿಎಂಟಿಸಿ ಸಿಬ್ಬಂದಿ ಇರಲಿದ್ದಾರೆ. ಉಳಿದಂತೆ ಡ್ರೈವರ್ ಹಾಗೂ ನಿರ್ವಹಣೆ ಖಾಸಗಿ ಕಂಪನಿಗೆ ಸೇರಿರಲಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಬಿಎಂಟಿಸಿಯನ್ನು ಎಲೆಕ್ಟ್ರಿಫಿಕೇಷನ್ ಮಾಡುವ ಚಿಂತನೆಯೂ ಸರ್ಕಾರಕ್ಕಿದೆ. ಹಿಗಾದಲ್ಲಿ ಬಿಎಂಟಿಸಿಯ ಚಾಲಕರು ಕೆಲಸ ಕಳೆದುಕೊಳ್ತಾರೆ. ಜೊತೆಗೆ ನಿಗಮ ಖಾಸಗಿ ಪಾಲಾಗಲಿದೆ ಎಂದು ನೌಕರರ ಯೂನಿಯನ್ಗಳು ಈಗಲೇ ಆಕ್ರೋಶ ಹೊರಹಾಕಲು ಶುರುಮಾಡಿವೆ. ಈಕುರಿತು ಸಿಐಟಿಯು ಉಪಾಧ್ಯಕ್ಷ ಪ್ರಕಾಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟಿವಿ9 ಡಿಜಿಟಲ್ಗೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಶ್ರೀರಾಮುಲು, ‘ಎಲೆಕ್ಟ್ರಿಕ್ ಬಸ್ ಖರೀದಿಸಿದ ಮಾತ್ರಕ್ಕೆ ಇದು ಖಾಸಗೀಕರಣವಲ್ಲ. ನಿಗಮವನ್ನು ಖಾಸಗೀಕರಣ ಮಾಡುವ ಉದ್ದೇಶ ನಮಗಿಲ್ಲ. ಆದರೆ ಬೆಂಗಳೂರು ಸಿಟಿಗೆ ಎಲೆಕ್ಟ್ರಿಕ್ ಬಸ್ ಅನಿವಾರ್ಯವಂತೂ ಹೌದು’ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಬೆಂಗಳೂರಿಗೆ ಎಲೆಕ್ಟ್ರಿಕ್ ಬಸ್ ಬರ್ತಿರೋದು ಪರಿಸರವಾದಿಗಳು ಹಾಗೂ ಸಾರ್ವಜನಿಕರಿಗೆ ಖುಷಿಯ ಸುದ್ದಿಯೆನೋ ಹೌದು. ಆದರೆ ಈಗಾಗಲೇ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಸಾರಿಗೆ ನೌಕರರಿಗೆ ಈ ಎಲೆಕ್ಟ್ರಿಕ್ ಬಸ್ ಗಾಯದ ಮೇಲೆ ಬರೆ ಎಳೆದಿದೆ. ಮುಂಬರುವ ದಿನಗಳಲ್ಲಿ ಅಭದ್ರತೆ ಇನ್ನಷ್ಟು ಹೆಚ್ಚಾಗುವ ಆತಂಕ ಸೃಷ್ಟಿಸಿದೆ.
ವಿಶೇಷ ವರದಿ:
ಕಿರಣ್ ಸೂರ್ಯ
ಟಿವಿ9 ಬೆಂಗಳೂರು
ಇದನ್ನೂ ಓದಿ:
Electric Bus: ಬೆಂಗಳೂರು ಜನರ ಬಹುದಿನದ ಕನಸು ಇಂದು ನನಸು; ರಾಜಾಧಾನಿಗೆ ಬಂದೇ ಬಿಡ್ತು ಎಲೆಕ್ಟ್ರಿಕ್ ಬಸ್
ಬಾಗಲಕೋಟೆಯಲ್ಲಿ ಸಿದ್ಧವಾಗಿದೆ ವಿಶೇಷ ಎಲೆಕ್ಟ್ರಿಕ್ ಬೈಕ್; ಹೇಗಿದೆ ನೋಡಿ