ಬೆಂಗಳೂರು: ದ್ವಾಪರಯುಗದಲ್ಲಿ ನಮ್ಮ ಸಮಾಜಕ್ಕೆ ಶ್ರೀರಾಮಚಂದ್ರ ನಿಂತ. ಕಲಿಯುಗದಲ್ಲಿ ಶ್ರೀರಾಮಚಂದ್ರನಂತೆ ಬೊಮ್ಮಾಯಿ ನಿಂತಿದ್ದಾರೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿಕೆ ನೀಡಿದರು. ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬರಬೇಕು ಎಂದು ನಾನು ಅವತ್ತೇ ಹೇಳಿದ್ದೆ. ಮೀಸಲಾತಿ ಕೊಡಲು ನನ್ನ ಸರ್ಕಾರ ಬರಬೇಕು ಅಂದಿದ್ದೆ. ಅಂದು ನನ್ನ ಗೇಲಿ ಮಾಡಿದರು. ನಾನು ತಾಳ್ಮೆ ಕಳೆದುಕೊಳ್ಳಲಿಲ್ಲ. ಬೊಮ್ಮಾಯಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಈ ರಾಮುಲುಗೆ ಉದ್ದ, ಅಗಲ ಇದ್ದರೂ ಬುದ್ದಿ ಇಲ್ಲ. ಇಂದು ಬಸವರಾಜ ಬೊಮ್ಮಾಯಿ ಸಾಮಾಜಿಕ ಹರಿಕಾರ. ನಮ್ಮ ಸಮುದಾಯದ ಜನ ವಿಧಾನಸೌಧದ ಈ ಮೆಟ್ಟಿಲು ನೋಡಿಯೇ ಇರಲಿಲ್ಲ. ಈ ಮೆಟ್ಟಿಲುಗಳ ಮೇಲೆ ನಮ್ಮ ಸಮುದಾಯ ಕಾರ್ಯಕ್ರಮ ಮಾಡಿಯೇ ಇರಲಿಲ್ಲ ಎಂದು ಹೇಳಿದರು.
2016 ರಲ್ಲಿ ರಿಪೋರ್ಟ್ ಸರ್ಕಾರಕ್ಕೆ ಸಿಕ್ಕಿತು. ಆದರೆ ಅಂದಿನ ಸಿಎಂ ಮಾಡಲಿಲ್ಲ. ನಮ್ಮ ಮುಖ್ಯಮಂತ್ರಿಗಳು ಎಸ್ಸಿ, ಎಸ್ಟಿ ಮೀಸಲಾತಿ ಏರಿಕೆ ಮಾಡಿದ್ದಾರೆ. ನಮ್ಮ ಸರ್ಕಾರ ನುಡಿದಂತೆ ನಡೆದಿದ್ದೇವೆ. ನಾವು ಇರಬಹುದು, ಹೋಗಬಹುದು. ಆದರೆ 2008 ರಲ್ಲಿ ನಮ್ಮ ಸರ್ಕಾರ ಮಾಡಿದ ನಿರ್ಧಾರ ಶಾಶ್ವತವಾಗಿರುತ್ತದೆ. ಅದಕ್ಕೆ ಯಡಿಯೂರಪ್ಪ, ಬೊಮ್ಮಾಯಿ ಕಾರಣ ಎಂದು ಹೇಳಿದರು. ನಮ್ಮ ಸಿಎಂ ನ್ಯಾಯವಂತ, ಸತ್ಯವಂತ. ಅನೇಕರು ನನ್ನ ಬಗ್ಗೆ ಗೇಲಿ ಮಾಡಿದ್ದರು. ಈ ರಾಮುಲು ಬಗ್ಗೆ ಗೇಲಿ ಮಾಡ್ತೀರಾ? ತಮಾಷೆ ಮಾಡ್ತೀರಾ? ನಿಮಗೆ ಯೋಗ್ಯತೆ ಇರುತ್ತಿದ್ದರೆ 2016 ರಲ್ಲಿ ಮೀಸಲಾತಿ ಕೊಡಬಹುದಿತ್ತು. ಅಹಿಂದ ಮುಖವಾಡ ಇಟ್ಟುಕೊಂಡು ನಮ್ಮ ಸಮುದಾಯಕ್ಕೆ ಕಾಂಗ್ರೆಸ್ ಮೋಸ ಮಾಡಿತು. ಎರಡು ಕೋಟಿ ಇರುವ ಎಸ್ಸಿ ಎಸ್ಟಿ ಎದ್ದು ನಿಂತು ಕುಣಿದರೆ ನೀವು ಧೂಳಿಪಟ ಆಗುತ್ತೀರಿ ಎಂದು ಸಚಿವ ಶ್ರೀರಾಮುಲು ಹೇಳಿದರು.
ಇದು ಹೋರಾಟದ ಗೆಲುವು, ಶ್ರೀಗಳ ಆಶೀರ್ವಾದದ ಗೆಲುವು: ಸಿಎಂ ಬೊಮ್ಮಾಯಿ
ಇದು ಹೋರಾಟದ ಗೆಲುವು, ಶ್ರೀಗಳ ಆಶೀರ್ವಾದದ ಗೆಲುವು. ನಾಗಮೋಹನ್ ದಾಸ್, ಪ್ರಸನ್ನಾನಂದಪುರಿಶ್ರೀ ಶ್ರಮ ದೊಡ್ಡದು ಎಂದು ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಮುಂಬರುವ ಸವಾಲು ಎದುರಿಸಲು ನಿಮ್ಮ ಆಶೀರ್ವಾದ ಬೇಕು. ನಿಮ್ಮ ಆಶೀರ್ವಾದ ಸಿಗುತ್ತೆ ಎಂಬ ವಿಶ್ವಾಸವಿದೆ. ವಿಧಾನಸೌಧದ ಮುಂದೆ ನಿಂತು ಈ ಮಾತು ಹೇಳುತ್ತಿದ್ದೇನೆ. ನ್ಯಾಯ ಸಮ್ಮತ ತೀರ್ಮಾನ ತೆಗೆದುಕೊಳ್ಳಲು ಸಹಕಾರ ಇರಲಿ ಎಂದು ಹೇಳಿದರು.
6 ಸಾಧಕರಿಗೆ 2022ನೇ ಸಾಲಿನ ವಾಲ್ಮೀಕಿ ಪ್ರಶಸ್ತಿ ಪ್ರದಾನ
2022ನೇ ಸಾಲಿನ 6 ಸಾಧಕರಿಗೆ ಸಿಎಂ ಬೊಮ್ಮಾಯಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದರು. ವಿಧಾನಸೌಧದ ಪೂರ್ವ ಭಾಗದ ಮೆಟ್ಟಿಲು ಮೇಲೆ ಸಮಾರಂಭ ಮಾಡಲಾಯಿತು. ಬೆಂಗಳೂರಿನ ಎಲ್.ಮುನಿಸ್ವಾಮಿ, ಚಿಕ್ಕಬಳ್ಳಾಪುರದ ಎನ್.ನಾಗಪ್ಪ, ಬೆಳಗಾವಿಯ ನಾಗಪ್ಪ ಹೆಚ್.ಕೋಣಿ, ವಿಜಯನಗರದ ಪಿ.ಪದ್ಮಾ, ಮೈಸೂರಿನ ಹೆಚ್.ಎಸ್.ಸುಭಾಷ್, ಬಳ್ಳಾರಿಯ ಉಷಾರಾಣಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:35 pm, Sun, 9 October 22