ಬೆಂಗಳೂರಿನಲ್ಲಿ ನಡೆಯಲಿದೆ ಪುಸ್ತಕ ಸಂತೆ! ಕರ್ನಾಟಕದ ಜನತೆಗೆ ಪ್ರೀತಿಯಿಂದ ಇಲ್ಲಿದೆ ಮುಕ್ತ ಆಹ್ವಾನ
Veeraloka pustaka santhe: ವೀರಕಪುತ್ರ ಎಂ ಶ್ರೀನಿವಾಸ್ ಅವರ ವೀರಲೋಕದಿಂದ ಬೆಂಗಳೂರಿನಲ್ಲೊಂದು ವಿಭಿನ್ನ ಪುಸ್ತಕ ಸಂತೆ ನಡೆಯಲಿದೆದೆ. ಇದೇ ಫೆಬ್ರವರಿ 10 ಮತ್ತು 11 ತಾರೀಖಿನಂದು ಸ್ವಾಭಿಮಾನಿ ಉದ್ಯಾನವನ, ಎಚ್.ಎಸ್.ಆರ್. ಬಡಾವಣೆ, ಬೆಂಗಳೂರಿನಲ್ಲಿ ಈ ಪುಸ್ತಕ ಸಂತೆ ನಡೆಯಲಿದೆ. ಕರ್ನಾಟಕದ ಜನತೆಗೆ ಪ್ರೀತಿಯಿಂದ ಇಲ್ಲಿದೆ ಮುಕ್ತ ಆಹ್ವಾನ
ನೀವು ಇಷ್ಟಪಡುವಂಥ ಕನ್ನಡ ಲೇಖಕರ ಪುಸ್ತಕಗಳು ನಿಮಗೆ ಸುಲಭವಾಗಿ ಸಿಗುತ್ತಿಲ್ಲವೆ? ಹಾಗಿದ್ದರೆ ಕನ್ನಡ ಓದುಗರೆಲ್ಲ (Kannadiga) ಖುಷಿ ಪಡುವಂಥ ವಿಭಿನ್ನ ಹಬ್ಬ ಇಲ್ಲಿದೆ. ವೀರಕಪುತ್ರ ಎಂ ಶ್ರೀನಿವಾಸ್ ಅವರ ವೀರಲೋಕ ಬುಕ್ಸ್ ಸಂಸ್ಥೆಯಿಂದ (Veeraloka books) ಬೆಂಗಳೂರಿನಲ್ಲೊಂದು ವಿಭಿನ್ನ ಪುಸ್ತಕ ಸಂತೆ (Book Festival) ನಡೆಯುತ್ತಿದೆ. ಇದೇ ತಿಂಗಳ (ಫೆಬ್ರವರಿ) 10 ಮತ್ತು 11 ತಾರೀಖಿನಂದು ಸ್ವಾಭಿಮಾನಿ ಉದ್ಯಾನವನ, ಎಚ್.ಎಸ್.ಆರ್. ಬಡಾವಣೆ, ಬೆಂಗಳೂರಿನಲ್ಲಿ ಈ ಪುಸ್ತಕ ಸಂತೆ ನಡೆಯಲಿದೆ.
ಕನ್ನಡ ಸಾಹಿತ್ಯ ಪುಸ್ತಕ ಲೋಕ ಬಹುದೊಡ್ಡ ಮಟ್ಟಿಗೆ ಬೆಳೆಯಬೇಕು, ಪ್ರತಿಯೊಬ್ಬ ಓದುಗರಿಗೂ ಸುಲಭವಾಗಿ ಅವರಿಷ್ಟದ ಪುಸ್ತಕಗಳು ಸಿಗುವಂತಾಗಬೇಕು ಎನ್ನುವ ಕಾಳಜಿಯನ್ನಿಟ್ಟುಕೊಂಡು ವೀರಕಪುತ್ರ ಎಂ ಶ್ರೀನಿವಾಸ್ ಹಾಗೂ ಅವರ ತಂಡದವರು ಸಿಲಿಕಾನ್ ಸಿಟಿಯಲ್ಲಿ ಪುಸ್ತಕ ಸಂತೆಯನ್ನು ಏರ್ಪಡಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಚಿತ್ರಸಂತೆಯಂತೆ ‘ಪುಸ್ತಕ ಸಂತೆ’ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ನಿಜಕ್ಕೂ ಕನ್ನಡ ಓದುಗರಿಗೆಲ್ಲ ತುಂಬಾ ಅನುಕೂಲವಾಗಲಿದೆ.
ಈ ಪುಸ್ತಕ ಸಂತೆಯ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಕಸುವು ತುಂಬುವ ಪ್ರಯತ್ನದಲ್ಲಿ ಶ್ರೀನಿವಾಸ್ ಮುಂದೆ ಬಂದಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಬೆಂಬಲವನ್ನು ಯಾಚಿಸಿದ್ದಾರೆ. ಕನ್ನಡ, ಕನ್ನಡ ಪುಸ್ತಕ, ಕನ್ನಡ ಸಾಹಿತ್ಯ ಯಾವಾಗಲೂ ಹಸಿರಾಗಿರುವಂತೆ ನಮ್ಮ ಹೆಜ್ಜೆಯ ಜೊತೆ ನೀವು ಸಹ ಜೊತೆಗೂಡಿ ಎಂದು ಕರೆಕೊಟ್ಟಿದ್ದಾರೆ.
ನೀವು, ನಿಮ್ಮ ಮಕ್ಕಳನ್ನ ಕರೆದುಕೊಂಡು ವಿದೇಶಕ್ಕೆ ಹೋಗಿರುತ್ತಿರಿ, ದೊಡ್ಡ ದೊಡ್ಡ ಪಾರ್ಟಿಗಳಿಗೆ, ಪಾರ್ಕುಗಳಿಗೆ, ಪ್ರಾಣಿ ಸಂಗ್ರಹಾಲಯಗಳಿಗೆ ಹಾಗೂ ಮನರಂಜನೆ ಸಿಗುವ ಬಹುತೇಕ ಜಾಗಗಳಿಗೆ ಹೋಗಿರುತ್ತೀರಿ. ಆದರೆ ಎಂದಾದರೂ ʼಪುಸ್ತಕ ಸಂತೆಗೆʼ ಹೋಗಿದ್ದೀರಾ? ಎಂದು ಕೇಳುವ ಜೊತೆಗೆ ನಮ್ಮ ಎರಡು ದಿನದ ಪುಸ್ತಕ ಸಂತೆಗೆ ಒಮ್ಮೆ ಭೇಟಿ ನೀಡಿ ಎಂದು ಕರ್ನಾಟಕದ ಜನತೆಗೆ ಪ್ರೀತಿಯಿಂದ ಮುಕ್ತ ಆಹ್ವಾನವನ್ನು ನೀಡಿದ್ದಾರೆ.
ವೀರಲೋಕದ ಪುಸ್ತಕ ಸಂತೆಗೆ ಕನ್ನಡದ ಹೆಸರಾಂತ ಸಪ್ನ ಸೇರಿದಂತೆ 30ಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆಗಳು ಮುಂದೆ ಬಂದಿವೆ. ನಿಮ್ಮ ನೆಚ್ಚಿನ ಸಾಹಿತಿಯ ಎಲ್ಲ ಪುಸ್ತಕಗಳು ಸಿಗುತ್ತವೆ. ವಿಶೇಷವೆಂದರೆ ಮಕ್ಕಳಿಗಾಗಿ ಇರುವಂತಹ ಪುಸ್ತಕಗಳನ್ನೂ ಸಹ ಕಾಣಬಹುದಾಗಿದೆ. ಕನ್ನಡದ ಮೇಲೆ ಅಭಿಮಾನ ಇರುವವರು, ಪುಸ್ತಕ ಪ್ರೇಮಿಗಳು ಎಲ್ಲರಿಗೂ ಇಲ್ಲಿ ಮುಕ್ತ ಅವಕಾಶವಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:10 pm, Tue, 6 February 24