
ಬೆಂಗಳೂರು, ಆ.25: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಬೌರಿಂಗ್ ಕ್ಲಬ್ (Bowring Club) ನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ ಭಾರಿ ಲೋಪಗಳು ಬೆಳಕಿಗೆ ಬಂದಿವೆ. ಕ್ಲಬ್‌ನ ಅಡುಗೆ ಮನೆಯಲ್ಲಿ (Kitchen) ಜಿರಳೆಗಳು ಪತ್ತೆಯಾಗಿರುವುದಲ್ಲದೆ, ನೈರ್ಮಲ್ಯ ಹಾಗೂ ಲೇಬಲಿಂಗ್ ನಿಯಮಗಳ ಉಲ್ಲಂಘನೆ ಕಂಡುಬಂದಿದೆ.
ಆಹಾರ ನಿರ್ವಹಿಸುವ ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆಯಿಂದ ಹಿಡಿದು ಉತ್ಪನ್ನಗಳ ಸಂಗ್ರಹಣೆಯವರೆಗೆ ಹಲವು ಲೋಪಗಳನ್ನು ಗುರುತಿಸಿರುವ ಅಧಿಕಾರಿಗಳು, ಕಲುಷಿತ ಆಹಾರ ಸರಬರಾಜಾಗುವ ಅಪಾಯದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಪಾಸಣೆ ವೇಳೆ 8 ಲೋಪಗಳು ಬಂದಿದೆ. ಕ್ಲಬ್‌ನ ಕಿಚನ್ ಪ್ರದೇಶದಲ್ಲಿ ಜಿರಳೆಗಳು ಸಂಚರಿಸುತ್ತಿರುವುದು ಕಂಡುಬಂದಿದ್ದು, ತೀವ್ರ ಅಶುಚಿತ್ವ ವ್ಯಕ್ತವಾಗಿದೆ. ಫುಡ್ ಹ್ಯಾಂಡ್ಲರ್‌ಗಳು (ಆಹಾರ ನಿರ್ವಹಣೆ ಮಾಡುವ ಸಿಬ್ಬಂದಿ) ಅಗತ್ಯ ವೈಯಕ್ತಿಕ ಸ್ವಚ್ಛತೆ ಕಾಪಾಡದಿರುವುದು ಪತ್ತೆಯಾಗಿದೆ. ಇದರಿಂದ ಆಹಾರ ಕಲುಷಿತಗೊಳ್ಳುವ ಅಪಾಯವಿದೆ. ಆಹಾರ ತಯಾರಿಕಾ ಜಾಗದಲ್ಲಿ ನಿಯಮಬಾಹಿರವಾಗಿ ಪ್ಲಾಸ್ಟಿಕ್ ಕಟಿಂಗ್ ಬೋರ್ಡ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದೆ.
ಕ್ಲಬ್‌ನ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಣೆಯಾಗದೆ ಬ್ಲಾಕ್ ಆಗಿದ್ದು, ಕೊಳಚೆ ನೀರು ನಿಂತು ದುರ್ವಾಸನೆ ಹಾಗೂ ಕೀಟಗಳ ಕಾಟ ಹೆಚ್ಚಾಗುವ ಸಾಧ್ಯತೆಯಿದೆ. ಸಂಗ್ರಹಿಸಿಟ್ಟಿದ್ದ ‘K-Shakti’ ತೂರ್ ದಾಲ್ ಪ್ಯಾಕೆಟ್‌ಗಳಲ್ಲಿ ಕಡ್ಡಾಯ ವಿವರಗಳಾದ ಪ್ಯಾಕಿಂಗ್ ದಿನಾಂಕ, ಬ್ಯಾಚ್ ನಂಬರ್ ಹಾಗೂ ಗರಿಷ್ಠ ಮಾರಾಟ ಬೆಲೆ ನಮೂದಿಸಿರಲಿಲ್ಲ.
ಇದನ್ನೂ ಓದಿ; ಆಹಾರ ಉದ್ಯಮಗಳಿಗೆ FSSAI ಬಿಗ್ ಅಲರ್ಟ್: ಈ 15 ನಿಯಮ ಹಾಗೂ ಮಾರ್ಗಸೂಚಿಗಳು ಪಾಲಿಸಲೇಬೇಕು
ಇನ್ನು ಆಹಾರ ಪದಾರ್ಥಗಳನ್ನು ಶೀತಲೀಕರಿಸಿ ಸಂಗ್ರಹಿಸುವ ಪ್ರದೇಶವನ್ನು ಶುಚಿಯಾಗಿಡದೆ ನಿರ್ಲಕ್ಷಿಸಲಾಗಿತ್ತು. ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರ ಪದಾರ್ಥಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸದೇ ಒಂದೇ ಕಡೆ ಇಡಲಾಗಿತ್ತು. ಇದರಿಂದ ಕ್ರಾಸ್-ಕಂಟ್ಯಾಮಿನೇಷನ್ ಆಗುವ ಅಪಾಯವಿದೆ. ಸಂಗ್ರಹಿಸಿಟ್ಟಿದ್ದ ‘Tilapia’ ಮೀನಿನ ಮೇಲೆ ಯಾವುದೇ ಲೇಬಲ್ ವಿವರಗಳಿರಲಿಲ್ಲ ಹಾಗೂ ಪಾತ್ರೆ ತೊಳೆಯುವ ಸ್ಥಳದಲ್ಲಿ ಬಿಸಿ ನೀರಿನ ವ್ಯವಸ್ಥೆಯಿರಲಿಲ್ಲ.
ವರದಿ: ವಿನಯ್ ಕುಮಾರ್ ಮೆಟ್ರೋ
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ