ಮಂಡ್ಯ: ದಶಪಥ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ನೂತನವಾಗಿ ನಿರ್ಮಾಣವಾಗುತ್ತಿರುವ ದಶಪಥ ರಸ್ತೆಯ (10 Lane Expressway) ಮೇಲೆ ನೀರು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯದಿಂದ ಮದ್ದೂರು ಮಾರ್ಗದ ಸಂಚಾರ ಬಂದ್ ಆಗಿದೆ. ಬೆಂಗಳೂರಿನಿಂದ (Bengaluru) ಮೈಸೂರಿಗೆ ಸಂಚಾರ ಮಾಡಲು 2 ಬದಲಿ ಮಾರ್ಗಗಳನ್ನು ಅನುಸರಿಸಬೇಕು. ಒಂದೋ ಬೆಂಗಳೂರು-ಮದ್ದೂರು- ಮಳವಳ್ಳಿ -ಬನ್ನೂರು ಮೂಲಕ ಮೈಸೂರಿಗೆ (Mysuru) ತೆರಳಬೇಕು. ಅಥವಾ ಬೆಂಗಳೂರಿನಿಂದ ನೆಲಮಂಗಲ- ಬೆಳ್ಳೂರು ಕ್ರಾಸ್- ನಾಗಮಂಗಲ-ಪಾಂಡವಪುರ ಶ್ರೀರಂಗಪಟ್ಟಣ ಮೂಲಕ ಮೈಸೂರು ತಲುಪಬೇಕು. ಮದ್ದೂರಿನಿಂದ ಮಂಡ್ಯಕ್ಕೆ ಬರಬೇಕಾದರೆ ಕೆ.ಎಂ. ದೊಡ್ಡಿಯಿಂದ ಮಂಡ್ಯ ನಗರಕ್ಕೆ ಬರಬಹುದು.
ಹಾಸನ ರಸ್ತೆಯಲ್ಲಿಯೂ ಸಮಸ್ಯೆ:
ಬೆಂಗಳೂರು-ಹಾಸನ-ಮಂಗಳೂರು ರಸ್ತೆಯಲ್ಲಿಯೂ ಮಳೆಯಿಂದಾಗಿ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಕ್ರಾಸ್ ಬಳಿಯೂ ಭಾರೀ ಮಳೆಯಿಂದಾಗಿ ಬೆಂಗಳೂರು-ಮಂಗಳೂರು ರಸ್ತೆ ಕುಸಿದಿದೆ.
ಭಾರೀ ಮಳೆಯಿಂದಾಗಿ ಮಂಡ್ಯ ಜಿಲ್ಲೆಯ ಸಾತನೂರು ಗ್ರಾಮದಲ್ಲಿ ರಸ್ತೆಗಳು ಕೊಚ್ಚಿಹೋಗಿದ್ದು ಜನರು ಮನೆಗಳಿಂದ ಆಚೆಗೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮದ್ದೂರು ತಾಲ್ಲೂಕು ಪಣ್ಣೆದೊಡ್ಡಿ ಗ್ರಾಮದ ಎಎಸ್ಎಲ್ ಶುಗರ್ ಫ್ಯಾಕ್ಟರಿಯ ಸೆಕ್ಯುರಿಟಿ ದಿನೇಶ್ ಎನ್ನುವವರು ಪ್ರವಾಹದ ನೀರಿನಲ್ಲಿ ಸಿಲುಕಿದ್ದರು. ಗ್ರಾಮಸ್ಥರು ಸಕಾಲಕ್ಕೆ ತೆಪ್ಪ ಕೊಂಡೊಯ್ದು ಅವರ ಜೀವ ಉಳಿಸಿದರು.
ಇದನ್ನೂ ಓದಿ: Karnataka Rain: ಭಾರೀ ಮಳೆಯಿಂದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ
ಬಸರಾಳಿನಲ್ಲಿ ದಾಖಲೆ ಬರೆದ ಮಳೆ:
ಮಂಡ್ಯ ತಾಲ್ಲೂಕಿನ ಬಸರಾಳು ಗ್ರಾಮದಲ್ಲಿ ಒಂದೇ ರಾತ್ರಿ 155 ಮಿಮೀ ಮಳೆ ಸುರಿದಿದೆ. ಇದು 100 ವರ್ಷಗಳ ದಾಖಲೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರೀ ಮಳೆಯಿಂದಾಗಿ ಮಂಡ್ಯ-ನಾಗಮಂಗಲ ಮುಖ್ಯರಸ್ತೆಯ ಎಪಿಎಂಸಿ ಗೋಡೌನ್ ಬಳಿ ರೈತ ಉತ್ಪಾದಕರ ಕಂಪನಿಯು (ರೈತರೇ ಷೇರುದಾರರಾಗಿ ರೈತರಿಂದಲೇ ನಡೆಸಲ್ಪಡುವ ಸೊಸೈಟಿ) ಲಕ್ಷಾಂತರ ರೂಪಾಯಿ ಮೌಲ್ಯದ ರಸಗೊಬ್ಬರ, ಡ್ರಿಪ್ ಗೊಬ್ಬರ, ಬೂಸಾ, ಹಿಂಡಿ, ಮಲ್ಚಿಂಗ್ ಪೇಪರ್, ಮಲ್ಟಿಪ್ಲೆಕ್ಸ್, ಬೇವಿನ ಹಿಂಡಿ, ಬೆಲ್ಲ ಸೇರಿದಂತೆ ಹಲವು ಉತ್ಪನ್ನಗಳು ನೀರಿನಲ್ಲಿ ಮುಳುಗಿವೆ.
ಇದನ್ನೂ ಓದಿ: Bangalore Rain: ಹಲವು ಪ್ರದೇಶಗಳು ಜಲಾವೃತ; ಸಿಎಂ ಭೇಟಿ ಕೊಟ್ಟು ಎರಡು ತಿಂಗಳಾದರೂ ಬಗೆಹರಿಯದ ಮಳೆ ನೀರಿನ ಸಮಸ್ಯೆ
ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಭೆ:
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಆಗಿರುವ ಅನಾಹುತಗಳು ಮತ್ತು ಪರಿಹಾರ ಕಾಮಗಾರಿಗಳ ಮಾಹಿತಿ ಪಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಇಂದು (ಆಗಸ್ಟ್ 2) ಮಧ್ಯಾಹ್ನ 2 ಗಂಟೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಹೆಚ್ಚು ಮಳೆಯಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಿಇಒಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ‘ಮಳೆ ಸಂಬಂಧ ಇಂದು ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸುತ್ತೇನೆ’ ಎಂದು ಮುಖ್ಯಮಂತ್ರಿ ತಿಳಿಸಿದರು.
Published On - 12:25 pm, Tue, 2 August 22