ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ನಾಗರಪಂಚಮಿ ಸೇರಿದಂತೆ ಯಾವುದೇ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ಕೊರೋನಾ ಆತಂಕ ಕಡಿಮೆಯಾಗಿರುವುದರಿಂದ ಹಲವು ದೇವಸ್ಥಾನಗಳಲ್ಲಿಯು ಇಂದು ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ನಗರದ ಕಾಡುಮಲ್ಲೇಶ್ವರ, ಗವಿಗಂಗಾಧೇಶ್ವರ, ವಿಶ್ವೇಶ್ವರಪುರಂನ ಸುಬ್ರಹ್ಮಣ್ಯೇಶ್ವರ ದೇಗುಲ, ವಿವಿಧ ಬಡಾವಣೆಗಳಲ್ಲಿ ಇರುವ ನಾಗರಕಲ್ಲುಗಳಿಗೆ ನಗರದ ಜನರು ಹಾಲೆರೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಘಾಟಿ ಕ್ಷೇತ್ರದಲ್ಲಿ ಸಂಭ್ರಮ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿಯೂ ನಾಗರಪಂಚಮಿ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಜನದಟ್ಟಣೆ ಹೆಚ್ಚಾಗಿದ್ದು, ದೇವಾಲಯದ ಗೋಪುರದಿಂದ ಹೊರಗಿನ ರಸ್ತೆವರೆಗೂ ಕ್ಯೂ ಬೆಳೆದಿದೆ. ನಸುಕಿನಿಂದಲೇ ಜನರು ಕ್ಷೇತ್ರಕ್ಕೆ ಬರುತ್ತಿದ್ದಾರೆ. ಈವರೆಗೆ ಸಾವಿರಾರು ಮಂದಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ.
ನಾಗರಪಂಚಮಿಯಂದು ಘಾಟಿ ಸುಬ್ರಮಣ್ಯನ ದರ್ಶನ ಪಡೆದರೆ ಶ್ರೇಯಸ್ಸು ಎನ್ನುವ ನಂಬಿಕೆಯಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಕ್ಷೇತ್ರದಲ್ಲಿ ವಾಹನಗಳ ಪಾರ್ಕಿಂಗ್ಗೆ ಮೀಸಲು ಇರಿಸಿದ್ದ ಸ್ಥಳ ಭರ್ತಿಯಾಗಿದ್ದು ಗಾಡಿಗಳನ್ನು ನಿಲ್ಲಿಸಲು ಭಕ್ತರು ಪರದಾಡುವಂತಾಗಿದೆ.