ಬೆಂಗಳೂರು: ಅರಣ್ಯ ಇಲಾಖೆ ಕಿರುಕುಳದಿಂದ ಕೇಲೂರಿನಲ್ಲಿ ಇಬ್ಬರು ರೈತ ಮಹಿಳೆಯರು ವಿಷಸೇವನೆ ಪ್ರಕರಣ ವಿಧಾನಸಭೆಯಲ್ಲಿ ಕೂಡ ಪ್ರತಿಧ್ವನಿಸಿದೆ. ಕಾಂಗ್ರೆಸ್ ಶಾಸಕ ಹೆಚ್.ಕೆ. ಪಾಟೀಲ್ ಇಂದು (ಮಾರ್ಚ್ 8) ವಿಚಾರ ಪ್ರಸ್ತಾಪ ಮಾಡಿದ್ದಾರೆ. ಈ ವೇಳೆ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಹೆಚ್.ಕೆ. ಪಾಟೀಲ್ ಬೆಂಬಲಕ್ಕೆ ನಿಂತಿದ್ದಾರೆ. ಇದೊಂದು ಗಂಭೀರವಾದ ಪ್ರಕರಣ ಎಂದು ಯಡಿಯೂರಪ್ಪ ಹೇಳಿದ್ದಾರೆ. ಹೆಚ್.ಕೆ. ಪಾಟೀಲ್ ಹೇಳಿರುವುದು ಸತ್ಯವಾಗಿದೆ ಎಂದು ತಿಳಿಸಿದ್ದಾರೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೇಲೂರಿನಲ್ಲಿ ಘಟನೆ ನಡೆದಿತ್ತು. ವಿಷ ಸೇವಿಸಿದ್ದ ರೈತ ಮಹಿಳೆ ನಿರ್ಮಲಾ ಪಾಟೀಲ್ ಸಾವನ್ನಪ್ಪಿದ್ದರು. ಮತ್ತೋರ್ವ ರೈತ ಮಹಿಳೆ ಸರೋಜವ್ವ ಸ್ಥಿತಿ ಗಂಭೀರವಾಗಿದೆ.
ವಿಧಾನಸಭೆಯಲ್ಲಿ ಬಗರ್ಹುಕುಂ ಸಮಸ್ಯೆ ಬಗ್ಗೆ ಬಿಎಸ್ ಯಡಿಯೂರಪ್ಪ ಮಾತನಾಡಿದ್ದಾರೆ. ಸಿಎಂ ಆದಷ್ಟು ಬೇಗ ಕ್ರಮ ವಹಿಸಿ ಸಮಸ್ಯೆ ಕೊನೆಗಾಣಿಸಬೇಕು. ಸಮಸ್ಯೆ ಮುಂದುವರಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರಲ್ಲ. ಬಗರ್ಹುಕುಂ ಸಮಸ್ಯೆಯಿಂದ ಹೋರಾಟ ಶುರುವಾಗಬಹುದು. ಅಗತ್ಯಬಿದ್ರೆ ಸದನ ಸಮಿತಿ ರಚಿಸಲು ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಈ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಉತ್ತರ ನೀಡಿದ್ದಾರೆ. ಬಗರ್ಹುಕುಂ ಸಾಗುವಳಿಯಿಂದ ರೈತರಿಗೆ ಸಮಸ್ಯೆ ಆಗುತ್ತಿದೆ. ರಾಜ್ಯ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವ ಕೆಲಸ ಮಾಡಲಿದೆ. ಅರಣ್ಯ ಇಲಾಖೆ ಕಟಾವು ಮಾಡಿರುವ ರೈತರ ಬೆಳೆಗೆ ಪರಿಹಾರ ನೀಡಲಿದೆ ಎಂದು ಹೇಳಿದ್ದಾರೆ. ಪ್ರಕರಣದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಮಾತನಾಡಿದ್ದಾರೆ. ಸಮಸ್ಯೆ ಪರಿಹಾರ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು. ಅರಣ್ಯ ಅಧಿಕಾರಿಗಳ ಧೋರಣೆ ಸರಿಯಲ್ಲ. ಕೂಡಲೇ ಸಾಗುವಳಿ ಮಾಡಿದ ರೈತರ ಸಂಕಷ್ಟ ಪರಿಹರಿಸಲಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಪೀಕರ್ ಸೇರಿದಂತೆ ಬಹುತೇಕ ಹಿರಿಯ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಿದೆ.
ಅರಣ್ಯ ಸಚಿವ ಉಮೇಶ್ ಕತ್ತಿಗೆ ಇಲಾಖೆ ಬಗ್ಗೆ ಮಾಹಿತಿ ಇಲ್ಲ: ಬಿಜೆಪಿ ಶಾಸಕ ಕಳಕಪ್ಪ ಬಂಡಿ ಮಾತಿನ ಚಾಟಿ
ಕೇಲೂರಿನಲ್ಲಿ ಇಬ್ಬರು ರೈತ ಮಹಿಳೆಯರು ವಿಷಸೇವನೆ ಪ್ರಕರಣ ಹಿನ್ನೆಲೆ, ಅರಣ್ಯ ಸಚಿವ ಉಮೇಶ್ ಕತ್ತಿಗೆ ಇಲಾಖೆ ಬಗ್ಗೆ ಮಾಹಿತಿ ಇಲ್ಲ ಎಂದು ಆಡಳಿತಾರೂಢ ಬಿಜೆಪಿ ಶಾಸಕ ಕಳಕಪ್ಪ ಬಂಡಿ ಮಾತಿನ ಚಾಟಿ ಬೀಸಿದ್ದಾರೆ. ಅರಣ್ಯ ಇಲಾಖೆ ಬ್ರಿಟಿಷರ ಪಳೆಯುಳಿಕೆ ಎಂದು ಶಾಸಕ ಕಳಕಪ್ಪ ಬಂಡಿ ಟೀಕಿಸಿದ್ದಾರೆ. ಅರಣ್ಯ ಸಚಿವ ಉಮೇಶ್ ಕತ್ತಿಗೆ ಇಲಾಖೆ ಬಗ್ಗೆ ಮಾಹಿತಿಯಿಲ್ಲ. ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಬಯಲು ಸೀಮೆಯವರು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಉಮೇಶ್ ಕತ್ತಿ ಖಾನಾಪುರ ಅರಣ್ಯ ನೋಡಿದ್ದಾರೆ ಎಂದು ಸ್ಪೀಕರ್ ಹೇಳಿದ್ದಾರೆ.
ಗದಗ: ಜಿಮ್ಸ್ ಶವಾಗಾರದ ಮುಂದೆ ಜಮಾವಣೆಗೊಂಡ ಮೃತಳ ಕುಟುಂಬಸ್ಥರು ಹಾಗೂ ರೈತರು
ಅರಣ್ಯ ಇಲಾಖೆಯ ದೌರ್ಜನ್ಯ ಆರೋಪದ ಹಿನ್ನೆಲೆ ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ ಪ್ರಕರಣ ಜೋರಾಗಿ ಸದ್ದು ಮಾಡುತ್ತಿದೆ. ಗದಗ ಜಿಮ್ಸ್ ಶವಾಗಾರದ ಮುಂದೆ ಮೃತಳ ಕುಟುಂಬಸ್ಥರು ಹಾಗೂ ರೈತರು ಜಮಾವಣೆಗೊಂಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ವಿರುದ್ಧ ಕುಟುಂಬಸ್ಥರು, ರೈತರು ಆಕ್ರೋಶ ಹೊರಹಾಕಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಶವಾಗಾರದ ಮುಂದೆ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಗದಗ ಡಿವೈಎಸ್ಪಿ ಶಿವಾನಂದ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಓರ್ವ ಡಿಆರ್ಡಿವೈಎಸ್ಪಿ, ನಾಲ್ಕು ಜನ ಸಿಪಿಐ, ಐದಕ್ಕೂ ಹೆಚ್ಚು ಪಿಎಸ್ಐಗಳ ನಿಯೋಜನೆ ಮಾಡಲಾಗಿದೆ. ಮೂರು ಡಿಆರ್ ತುಕಡಿ ಸೇರಿದಂತೆ ಪೊಲೀಸ ಸಿಬ್ಬಂದಿಗಳ ನಿಯೋಜಿಸಲಾಗಿದೆ.
ಗ್ರಾಮಸ್ಥರು ಕುಟುಂಬಸ್ಥರಿಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಾಥ್
ಗ್ರಾಮಸ್ಥರು ಕುಟುಂಬಸ್ಥರಿಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಪರಿಹಾರಕ್ಕಾಗಿ ಶವದ ಸಮೇತ ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡ್ತೇವೆ ಎಂದು ರೋಣ ಕಾಂಗ್ರೆಸ್ ಮಾಜಿ ಶಾಸಕ ಜಿ.ಎಸ್ ಪಾಟೀಲ್ ಹೇಳಿದ್ದಾರೆ. ಐದು ಲಕ್ಷ ಪರಿಹಾರ ಸಚಿವ ಸಿ.ಸಿ ಪಾಟೀಲ್ರೇ ಇಟ್ಟುಕೊಳ್ಳಲಿ ಅಂತ ಕಿಡಿಕಾರಿದ್ದಾರೆ. ಇಲ್ಲಿ ಸೇರಿದ ನಾವೇ ಐದು ಲಕ್ಷ ಕೊಡ್ತೇವೆ. 25 ಲಕ್ಷ ರೂಪಾಯಿ ಪರಿಹಾರ ಕೊಡಬೇಕು, ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಕೇಸ್ ಹಾಕಬೇಕು. ಇನ್ಮುಂದೆ ಕಪ್ಪತಗುಡ್ಡದ ಸೆರಿಗನಲ್ಲಿನ ರೈತರ ತಂಟೆಗೆ ಅಧಿಕಾರಿಗಳು ಬರಬಾರದು ಎಂದು ಪಟ್ಟುಹಿಡಿದಿದ್ದಾರೆ. ಅಲ್ಲಿಯವರೆಗೆ ಪ್ರತಿಭಟನೆ ಕೈಬಿಡೋದಿಲ್ಲ ಅಂತ ಖಡಕ್ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ಗದಗ: ಬಗರ್ ಹುಕುಂ ಜಮೀನಿನಲ್ಲಿ ಅರಣ್ಯ ಇಲಾಖೆ ಟ್ರೆಂಚ್ ಹಾಕುವುದಕ್ಕೆ ವಿರೋಧ; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಸಾವು