ನಿಮ್ಮ ನಾಯಕರು ಯಾರು ಸ್ವಾಮಿ? ಕರ್ನಾಟಕದಲ್ಲಿ ಮಾತ್ರ ಸ್ವಲ್ಪ ಉಸಿರಾಡುತ್ತಿದ್ದೀರಿ: ಸಿದ್ದರಾಮಯ್ಯಗೆ ಯಡಿಯೂರಪ್ಪ ಟಾಂಗ್

| Updated By: ganapathi bhat

Updated on: Mar 11, 2022 | 3:23 PM

BS Yediyurappa: ನೀವು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ನಾವು ಮತ್ತೆ ವಿಪಕ್ಷದಲ್ಲಿ ಶಾಶ್ವತವಾಗಿ ಕೂರಬೇಕಾಗುತ್ತದೆ. 5 ರಾಜ್ಯಗಳ ಫಲಿತಾಂಶ ಕರ್ನಾಟಕದಲ್ಲಿ ಮರುಕಳಿಸುತ್ತದೆ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಗುಡುಗಿದ್ದಾರೆ.

ನಿಮ್ಮ ನಾಯಕರು ಯಾರು ಸ್ವಾಮಿ? ಕರ್ನಾಟಕದಲ್ಲಿ ಮಾತ್ರ ಸ್ವಲ್ಪ ಉಸಿರಾಡುತ್ತಿದ್ದೀರಿ: ಸಿದ್ದರಾಮಯ್ಯಗೆ ಯಡಿಯೂರಪ್ಪ ಟಾಂಗ್
ಬಿ.ಎಸ್. ಯಡಿಯೂರಪ್ಪ
Follow us on

ಬೆಂಗಳೂರು: ವಿಪಕ್ಷದವರು ಏನೇ ಹೇಳಿದರೂ ಅಧಿಕಾರಕ್ಕೆ ಬರಲ್ಲ. ವಿಪಕ್ಷದವರು ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ. ರಾಜ್ಯದಲ್ಲಿ 135ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ದೇಶದ ಜನ ಮೋದಿ, ಬಿಜೆಪಿ ಪರವಾಗಿ ಇದ್ದಾರೆ. ಪಂಚರಾಜ್ಯ ಚುನಾವಣಾ ಫಲಿತಾಂಶದಲ್ಲಿ ಸಾಬೀತಾಗಿದೆ. ನಾವು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ. ಕಾಂಗ್ರೆಸ್ ಮುಕ್ತ ದೇಶ ಮಾಡುತ್ತೇವೆ ಎಂದು ವಿಧಾನಸಭೆಯಲ್ಲಿ ಶುಕ್ರವಾರ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಅಧಿವೇಶನ ಮುಗಿದ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡಿ ಕಾರ್ಯಕ್ರಮಗಳನ್ನ ತಲುಪಿಸ್ತೇವೆ. ಕೇಂದ್ರ, ರಾಜ್ಯ ಸರ್ಕಾರದ ಕಾರ್ಯಕ್ರಮ ತಲುಪಿಸುತ್ತೇವೆ. ಅಧಿಕಾರಕ್ಕೆ ಬಂದೇಬಿಟ್ಟೆವು ಎಂಬ ಭ್ರಮೆಯಲ್ಲಿದ್ದಾರೆ. ಅಂತಹ ಭ್ರಮೆಯಲ್ಲಿರುವ ಸಿದ್ದರಾಮಯ್ಯಗೆ ಹೇಳುತ್ತಿದ್ದೇನೆ. ನೀವು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ನಾವು ಮತ್ತೆ ವಿಪಕ್ಷದಲ್ಲಿ ಶಾಶ್ವತವಾಗಿ ಕೂರಬೇಕಾಗುತ್ತದೆ. 5 ರಾಜ್ಯಗಳ ಫಲಿತಾಂಶ ಕರ್ನಾಟಕದಲ್ಲಿ ಮರುಕಳಿಸುತ್ತದೆ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಗುಡುಗಿದ್ದಾರೆ.

ಈ ವೇಳೆ ಮಧ್ಯ ಪ್ರವೇಶ ಮಾಡಿದ ರಾಮಲಿಂಗಾರೆಡ್ಡಿ, ಬಜೆಟ್ ಮೇಲೆ ಚರ್ಚೆ ಬಿಟ್ಟು ಕಾಂಗ್ರೆಸ್ ವಿಚಾರ ಏಕೆ. ಕಾಂಗ್ರೆಸ್ ಧೂಳೀಪಟ ವಿಚಾರ ಏಕೆ ಮಾತನಾಡುತ್ತೀರಿ? ಎಂದು ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಕೇಳಿದ್ದಾರೆ. ಅದು ನಾನು ಹೇಳಬೇಕಿಲ್ಲ, ಜನ ತೀರ್ಮಾನಿಸುತ್ತಾರೆ. ನೀವು ಕಾಂಗ್ರೆಸ್ ಮುಕ್ತ ಮಾಡೋದು ಬಿಡಿ, ಬಿಜೆಪಿಯವರು ಯಡಿಯೂರಪ್ಪ ಮುಕ್ತ ಮಾಡಿದ್ದಾರೆ ಎಂದು ಈ ವೇಳೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್ ಮೇಲೆ ಬಿ.ಎಸ್. ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿ, ಡಿಸಿಎಂ ಆಗಿ 8 ಬಜೆಟ್ ಮಂಡಿಸಿದ್ದೇನೆ. ಕಳೆದ 2 ವರ್ಷದಲ್ಲಿ ಕೊರೋನಾದಿಂದ ಲಾಕ್​ಡೌನ್ ಆಯಿತು. ಲಾಕ್​​ಡೌನ್ ಮಾಡಿದ್ದರಿಂದ ಆರ್ಥಿಕ ಕುಸಿತ ಆಯಿತು. ಸಹಜವಾಗಿ ರಾಜಸ್ವ ಕೊರತೆಯಾಯಿತು. ಕೊರತೆಯಿಂದ ಸಮನ್ವಯತೆ ಕಾಯ್ದುಕೊಳ್ಳುವುದು ಕಷ್ಟ. ಕೊರತೆ ಗಮನಿಸಿದಾಗ ಸತತ ವಿತ್ತೀಯ ಕೊರತೆ ಆಗಿದೆ. ಸಿದ್ದರಾಮಯ್ಯ ಆಡಳಿತದಲ್ಲೂ ವಿತ್ತೀಯ ಕೊರತೆಯಾಗಿದೆ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೂ ನೀವು ಮತ್ತೆ ಸಿಎಂ ಆಗಲ್ಲ: ಸಿದ್ದರಾಮಯ್ಯ ವ್ಯಂಗ್ಯ

ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಮುಕ್ತ ಮಾಡಿದರು. ಸಿಎಂ ಸ್ಥಾನದಿಂದ ಇಳಿಯುವಾಗಿ ಯಡಿಯೂರಪ್ಪ ಕಣ್ಣೀರು ಹಾಕಿದರು. ಕಣ್ಣೀರು ಸುಮ್ ಸುಮ್ನೆ ಬರುತ್ತದೋ? ಎಲೆಕ್ಷನ್​ನಲ್ಲಿ 135 ಸೀಟು ಬರುತ್ತೆ ಎಂದು ಯಡಿಯೂರಪ್ಪ ಹೇಳಿದ್ರು. ಕಳೆದ ಎಲೆಕ್ಷನ್​ನಲ್ಲಿ ಬಿಜೆಪಿಗೆ ಬಂದದ್ದು 104 ಸೀಟು ಮಾತ್ರ. ಯಡಿಯೂರಪ್ಪ ಇತ್ತೀಚೆಗೆ ಜನರ ಬಳಿ ಹೋಗಿಲ್ಲ ಅನಿಸುತ್ತೆ. ಜನ ಬಿಜೆಪಿಯನ್ನ ಹೊರ ಹಾಕಲು ತೀರ್ಮಾನ ಮಾಡಿದ್ದಾರೆ. ನಿಮ್ಮನ್ನು ಸಿಎಂ ಸ್ಥಾನದಿಂದ ಇಳಿಸಿದಾಗಲೇ ತೀರ್ಮಾನಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೂ ನೀವು ಮತ್ತೆ ಸಿಎಂ ಆಗಲ್ಲ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಉತ್ತರ ಪ್ರದೇಶ ಚುನಾವಣೆ ಬೇರೆ, ಕರ್ನಾಟಕ ಬೇರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ಸ್ಥಾನದಿಂದ ಯಡಿಯೂರಪ್ಪ ಅನಗತ್ಯವಾಗಿ ಮುಕ್ತ ಮಾಡಲಾಗಿದೆ. ನೋವಿನಿಂದ ಯಡಿಯೂರಪ್ಪ ವ್ಯಂಗ್ಯವಾಗಿ ಮಾತಾಡ್ತಿದ್ದಾರೆ. BJPಯಿಂದ ಜನರಿಗೆ ನೋವಾಗಿದೆ ಎಂಬ ನೋವು ನಮಗಿದೆ. ನಾವು ಭ್ರಮೆಯಲ್ಲಿ ಇಲ್ಲ, ಜನ ತೀರ್ಮಾನ ಮಾಡಿಯಾಗಿದೆ. ಇತ್ತೀಚೆಗೆ ನಡೆದ ಎಲೆಕ್ಷನ್​ನ ಫಲಿತಾಂಶಗಳು ಗೊತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ, ಯಡಿಯೂರಪ್ಪ ಮತ್ತೆ ಅಧಿಕಾರಕ್ಕೆ ಬರುವ ಬಗ್ಗೆ ಹೇಳಿದ್ದಾರೆ. ಆದರೆ ನೀವು ಬೇರೆ ಪಕ್ಷದ ಬಾಗಿಲಿಗೆ ಹೋಗಿ ಕೇಳಿಕೊಂಡಿದ್ರಿ. ನೀವೇ ಸಿಎಂ ಆಗಿ ಎಂದು ಕೇಳಿಕೊಂಡಿದ್ದು ನೀವಲ್ಲವೇ. ಫಲಿತಾಂಶ ಬರುವುದಕ್ಕೂ ಮುನ್ನವೇ ಹೋಗಿ ಕೇಳಿಕೊಂಡಿದ್ರಿ ಎಂದು ಸಿದ್ದರಾಮಯ್ಯರನ್ನು ಉದ್ದೇಶಿಸಿ ಸಚಿವ ಮಾಧುಸ್ವಾಮಿ ಕೇಳಿದ್ದಾರೆ. ಕೋಮುವಾದಿ ಪಕ್ಷವನ್ನು ದೂರ ಇಡಲು ನಾವು ಕೇಳಿದೆವು. ಅವರಿಗೆ ಸಿಎಂ ಆಗುವಂತೆ ನಾವು ಹೇಳಿದ್ದೆವು ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ನೀವು ಕರ್ನಾಟಕ ರಾಜ್ಯದಲ್ಲಿ ಮಾತ್ರ ಸ್ವಲ್ಪ ಉಸಿರಾಡುತ್ತಿದ್ದೀರಷ್ಟೇ: ಯಡಿಯೂರಪ್ಪ ಪ್ರತಿದಾಳಿ

ನಾನು ಸ್ವಯಂಪ್ರೇರಿತನಾಗಿ ರಾಜೀನಾಮೆ ನೀಡಿದ್ದೇನೆ. ನಾವೆಲ್ಲಾ ಸೇರಿ ಬೊಮ್ಮಾಯಿಯನ್ನು ಸಿಎಂ ಮಾಡಿದ್ದೇವೆ. ಈ ವಿಚಾರ ರಾಜ್ಯದ ಜನರಿಗೆ ಗೊತ್ತಿದೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ಬಿಎಸ್‌ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಕಾಲೆಳೆದ ಯಡಿಯೂರಪ್ಪ, ಸಿದ್ದರಾಮಯ್ಯನವರೇ ನೀವು ಮತ್ತೆ ವಿಪಕ್ಷದಲ್ಲೇ ಇದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟವಾಗುತ್ತದೆ. ಕಾಂಗ್ರೆಸ್ ಧೂಳೀಪಟವಾಗುವ ನೋವು ನನಗೂ ಇದೆ. ಆದರೆ ಆ ನೋವು ನಿಮಗೆ ಇದೆಯೋ ಇಲ್ವೋ ಗೊತ್ತಿಲ್ಲ. ದೇಶದಲ್ಲಿ ಕಾಂಗ್ರೆಸ್ ಅಡ್ರೆಸ್‌ಗೇ ಇಲ್ಲ. ನಿಮ್ಮ ನಾಯಕರು ಯಾರು ಸ್ವಾಮಿ ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಮಾತ್ರ ಸ್ವಲ್ಪ ಉಸಿರಾಡುತ್ತಿದ್ದೀರಷ್ಟೇ ಎಂದು ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಸದಾ ಜನರ ಮನಸ್ಸಿನಲ್ಲಿರುತ್ತಾರೆ: ಬಸವರಾಜ ಬೊಮ್ಮಾಯಿ

ಬಿ.ಎಸ್.ಯಡಿಯೂರಪ್ಪ ಸದಾ ಜನರ ಮನಸ್ಸಿನಲ್ಲಿರುತ್ತಾರೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ ಜನರ ಮನದಲ್ಲಿರುತ್ತಾರೆ. ಯಡಿಯೂರಪ್ಪ ಮನಸ್ಸಿಗೆ ಎಷ್ಟೇ ನೋವಿದ್ರೂ ಗಟ್ಟಿತನ ಇದೆ. ಒಂದೆರಡು ಘಟನೆಗಳನ್ನು ನನ್ನ ಜೀವನದಲ್ಲಿ ಮರೆಯಲ್ಲ. ಸಿದ್ದರಾಮಯ್ಯ ನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ. ಕೆಲವೊಂದು ವಿಚಾರಗಳಲ್ಲಿ ಸಿದ್ದರಾಮಯ್ಯಗೆ ಸತ್ಯ ಗೊತ್ತಿದೆ. ಆದ್ರೂ ಜೋರಾಗಿ ಹೇಳಿದ್ರೆ ಜನ ನಂಬುತ್ತಾರೆಂದು ಮಾತಾಡ್ತಾರೆ ಎಂದು ಬಜೆಟ್ ಮೇಲೆ ಚರ್ಚೆ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಪಂಚರಾಜ್ಯಗಳಲ್ಲಿ ನಿನ್ನೆ ಬಿಜೆಪಿ ನಾಲ್ಕು ಕಡೆ ಗೆಲುವು ಸಾಧಿಸಿತು. ಬಿಜೆಪಿಯೇ ಎರಡು, ಮೂರು ಬಾರಿ ಗೆಲುವು ಸಾಧಿಸಿರೋದು. ಕಾಂಗ್ರೆಸ್ ಪಕ್ಷ ಪಂಜಾಬ್‌ನಲ್ಲಿ ಗೆಲ್ಲಲೇ ಇಲ್ಲ. ಅಧಿಕಾರದಲ್ಲಿ ಇದ್ದು, ಮತ್ತೆ ಗೆಲ್ಲುವುದೇ ಸಾಧನೆ ಎಂದು ಸಿಎಂ ಹೇಳಿದ್ದಾರೆ. ಚುನಾವಣೆ ವೇಳೆಯೇ ಜನ ನಾಡಿ ಮಿಡಿತ ತೋರಿಸೋದು. ನಾವು ಜನರ ವಿಶ್ವಾಸ ಗಳಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನಮ್ಮ ಶ್ರಮದ ಮೇಲೆ ವಿಶ್ವಾಸ ಇದೆ. ಪ್ರಧಾನಿ ಮೋದಿ ನಾಯಕತ್ವ ಪ್ಯಾನ್ ಇಂಡಿಯಾ ಆಗಿದೆ. ಎಲ್ಲಾ ಕಡೆ ಬಿಜೆಪಿಗೆ ಮುದ್ರೆ ಸಿಕ್ಕಿದೆ. ಮೋದಿ ಪ್ರಭಾವ, ಯಡಿಯೂರಪ್ಪ ನಾಯಕತ್ವ ಇದೆ. ಇದರ ಜೊತೆಗೆ ನಮ್ಮ ಕಾರ್ಯಕ್ರಮಗಳೂ ಇದೆ. 2023ಕ್ಕೆ ಜನರ ಆಶೀರ್ವಾದ ನಮ್ಮ ಮೇಲೆ ಇರುತ್ತದೆ ಎಂದು ಬಜೆಟ್ ಮೇಲೆ ಚರ್ಚೆ ವೇಳೆ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರನ್ನು ರಿಪೇರಿ ಮಾಡಲು ವಿಶ್ವಸಂಸ್ಥೆ ಬಂದ್ರೂ ಆಗಲ್ಲ: ವಿಧಾನ ಪರಿಷತ್​ನಲ್ಲಿ ಕೆಎಸ್ ಈಶ್ವರಪ್ಪ ಉತ್ತರ

ಇದನ್ನೂ ಓದಿ: ಅಧ್ಯಕ್ಷರೇ, ಕುಮಾರಸ್ವಾಮಿ ಸದನದ ಕಾಲಹರಣ ಮಾಡುತ್ತಿದ್ದಾರೆ; ನೀವು ಅದಕ್ಕೆ ಅವಕಾಶ ನೀಡುತ್ತಿರುವಿರಿ: ಸ್ಪೀಕರ್​ಗೆ ಹೇಳಿದರು ಸಿದ್ದರಾಮಯ್ಯ

Published On - 12:47 pm, Fri, 11 March 22