Bengaluru Water Supply Cut; ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು, ನಾಳೆ ಕಾವೇರಿ ನೀರು ಪೂರೈಕೆ ಇರಲ್ಲ
ಬೆಂಗಳೂರು ನೀರು ಪೂರೈಕೆ ಸ್ಥಗಿತ; ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂದು ಮತ್ತು ನಾಳೆ ನಗರದ ಹಲವಾರು ಭಾಗಗಳಲ್ಲಿ 24 ಗಂಟೆಗಳ ನೀರು ಸರಬರಾಜು ಕಡಿತವನ್ನು ಘೋಷಿಸಿದೆ. ಯಾವೆಲ್ಲ ಪ್ರದೇಶಗಳಲ್ಲಿ ನೀರು ಪೂರೈಕೆ ಇರುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಜೂನ್ 5: ಭೀಕರ ಬರಗಾಲದ ಪರಿಣಾಮ ನೀರಿನ ಬಿಕ್ಕಟ್ಟು ಸೇರಿದಂತೆ ಹಲವು ಕಾರಣಗಳಿಂದ ಈ ವರ್ಷ ಬೆಂಗಳೂರು (Bengaluru) ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಅತಿ ಹೆಚ್ಚಿನ ಕಾರ್ಪೊರೇಟ್ ಕಚೇರಿಗಳನ್ನು ಹೊಂದಿರುವ ಬೆಂಗಳೂರು ಕಳೆದ ಕೆಲವೇ ವಾರಗಳ ಹಿಂದೆ ಹೀಟ್‌ವೇವ್‌ನಿಂದಲೂ ತತ್ತರಿಸಿತ್ತು. ಈ ಎಲ್ಲದರಿಂದಾಗಿ ನಗರದ ನಿವಾಸಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿತ್ತು. ಇದೀಗ ಎಲ್ಲ ಸಮಸ್ಯೆ ಬಗೆಹರಿದು ನಗರವಾಸಿಗಳು ನಿರಾಳರಾಗುವಂತಾಗಿದೆ. ಈ ಮಧ್ಯೆ, ಕಾವೇರಿ ಐದನೇ ಹಂತದ ಯೋಜನೆ ಅನುಷ್ಠಾನದ ಕಾಮಗಾರಿಯ ಕಾರಣ ಇಂದು ಮತ್ತು ನಾಳೆ (ಜೂನ್ 6 ಮತ್ತು 7ರಂದು) ನಗರದ ಹಲವೆಡೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BSWWB) ತಿಳಿಸಿದೆ.
ಕಾವೇರಿ 5 ನೇ ಹಂತದ ಯೋಜನೆಯ ಕಾಮಗಾರಿಯ ಕಾರಣಕ್ಕಾಗಿ, ಜಕ ಮಂಡಳಿಯು ತನ್ನ ಎಲ್ಲಾ ಪಂಪಿಂಗ್ ಸ್ಟೇಷನ್‌ಗಳನ್ನು ಜೂನ್ 6 ರಂದು ಮುಚ್ಚಿದೆ. ಈ ಕಾರಣ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಈ ಬಗ್ಗೆ ಈಗಾಗಲೇ ಪೀಡಿತ ಪ್ರದೇಶಗಳ ನಿವಾಸಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಜಲ ಮಂಡಳಿ ತಿಳಿಸಿದೆ.
ನೀರು ಪೂರೈಕೆ ಸ್ಥಗಿತದ ಸಮಯ, ಪ್ರದೇಶಗಳ ವಿವರ
ಆರಂಭದಲ್ಲಿ ಜೂನ್ 4 ಮತ್ತು ಜೂನ್ 5 ಕ್ಕೆ ನೀರು ಪೂರೈಕೆ ಸ್ಥಗಿತ ಘೋಷಿಸಲಾಗಿತ್ತು. ಆದರೆ ನಂತರ ಕಾಮಗಾರಿಯನ್ನು ಮರು ನಿಗದಿಪಡಿಸಿದ ಕಾರಣ ದಿನಾಂಕ ಬದಲಾಯಿತು. ಮಂಡಳಿಯ ಪ್ರಕಾರ, ಕಾವೇರಿ ಹಂತ 1, 2 ಮತ್ತು 3 ರ ನೀರು ಸರಬರಾಜು ಘಟಕಗಳು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ 12 ಗಂಟೆಗಳ ಕಾಲ ಸ್ಥಗಿತಗೊಳ್ಳಲಿವೆ. ನಾಲ್ಕನೇ ಹಂತದ ಮೊದಲ ಮತ್ತು ಎರಡನೇ ಹಂತದ ನೀರು ಸರಬರಾಜು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರ ವರೆಗೆ ನಾಲ್ಕು ಗಂಟೆಗಳ ಕಾಲ ಸ್ಥಗಿತಗೊಳ್ಳಲಿವೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳ ನೀರು ಪೂರೈಕೆಯಲ್ಲಿ ಸ್ಥಗಿತ ಅಥವಾ ವ್ಯತ್ಯಯವಾಗುತ್ತಿದೆ.
ಇದನ್ನೂ ಓದಿ: ನಿಮ್ಮ ಮಕ್ಕಳಿಗೆ ಓದು ಬಿಡಿಸಿ, ರಿಯಾಲಿಟಿ ಶೋಗಳಿಗೆ ಕಳಿಸ್ತಿದ್ದೀರಾ? ಹಾಗಾದ್ರೆ ತಪ್ಪದೇ ಈ ಸುದ್ದಿ ಓದಿ
ನೀರು ಪೂರೈಕೆ ಸ್ಥಗಿತದ ಮತ್ತು ಕಡಿತದ ಮಾಹಿತಿ ನೀಡಲಾಗಿದ್ದು, ಜನರು ಸಹಕರಿಸುವಂತೆ ಮಂಡಳಿ ಕೋರಿತ್ತು. ಎರಡೂ ದಿನಗಳಿಗೆ ಮೊದಲೇ ಸಾಕಷ್ಟು ನೀರು ಸಂಗ್ರಹಿಸಿಡುವಂತೆ ಸಲಹೆ ನೀಡಿತ್ತು. ನಿಗದಿತ ಪ್ರದೇಶಗಳಲ್ಲಿನ ನಾಗರಿಕರು ನೀರನ್ನು ಪೋಲು ಮಾಡದೆ ಹೆಚ್ಚು ಕಾಳಜಿ ವಹಿಸಿ ಬಳಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಲಹೆ ನೀಡಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:38 pm, Wed, 5 June 24