ಬೆಂಗಳೂರು: ಕಾಂಗ್ರೆಸ್(Congress) ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಗ್ರಾಹಕರಿಗೆ ಶಾಕ್ ಕೊಟ್ಟಿತ್ತು. ದಿಢೀರನೆ ವಿದ್ಯುತ್ ದರ ಏರಿಕೆಯಾಗಿತ್ತು(Electricity Bill Hike). 200 ಯುನಿಟ್ ಉಚಿತ ವಿದ್ಯುತ್ ಘೋಷಿಸಿ ಈಗ ಏರಿಕೆ ಮಾಡಿದೆ ಎಂದು ಜನ ಸಮಾನ್ಯರು ಆಕ್ರೋಶ ಹೊರ ಹಾಕಿದ್ದರು. ಆದ್ರೆ ಕಾಂಗ್ರೆಸ್ ಇದು ಹಿಂದಿನ ಸರ್ಕಾರ ಮಾಡಿದ ತಪ್ಪು ಎಂದು ಸುಮ್ಮನಾಗಿತ್ತು. ಆದ್ರೆ ಈಗ ವಿದ್ಯುತ್ ದರ ಏರಿಕೆ ಕೇವಲ ಜನ ಸಾಮಾನ್ಯರಿಗಷ್ಟೇ ಅಲ್ಲದೆ ಕೈಗಾರಿಕೆಗಳು ಮತ್ತು ಸರ್ಕಾರಿ ಸಂಸ್ಥೆಗಳ ಮೇಲೂ ಪರಿಣಾಮ ಬೀರಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವಿದ್ಯುತ್ ಬಿಲ್ ಹೆಚ್ಚಳದ ನಂತರ ನೀರಿನ ದರವನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲು ಮುಂದಾಗಿದೆ.
BWSSB ತೊರೆಕಾಡನಹಳ್ಳಿ, ಹಾರೋಹಳ್ಳಿ, ಟಿಕೆ ಹಳ್ಳಿ ಮತ್ತು ತಾತುಗುಣಿಯಲ್ಲಿನ ಪಂಪಿಂಗ್ ಸ್ಟೇಷನ್‌ಗಳ ಮೂಲಕ ನಗರಕ್ಕೆ ನೀರನ್ನು ಪೂರೈಸುತ್ತಿದೆ. ನೀರನ್ನು ಪಂಪ್ ಮಾಡಲು ಮತ್ತು ಮನೆಗಳಿಗೆ ಸರಬರಾಜು ಮಾಡಲು, BWSSB ವಿದ್ಯುತ್ ಅನ್ನು ಬಳಸುತ್ತದೆ. ಪಂಪಿಂಗ್ ಸ್ಟೇಷನ್‌ಗಳು, ಉಪ ವಿಭಾಗಗಳು ಹಾಗೂ ಪ್ರಧಾನ ಕಚೇರಿ ಸೇರಿದಂತೆ ಇತರೆ ಕಚೇರಿಗಳಲ್ಲಿ ಬಳಸಿದ ವಿದ್ಯುತ್‌ಗೆ ಮಾಸಿಕ 80 ಕೋಟಿ ರೂ. ಶುಲ್ಕ ಪಾವತಿ ಮಾಡಲಾಗುತ್ತಿತ್ತು. ಆದ್ರೆ ಈಗ ವಿದ್ಯುತ್ ಶುಲ್ಕ ಏರಿಕೆಯಾಗಿರುವುದರಿಂದ ಜಲಮಂಡಳಿಯು ತಿಂಗಳಿಗೆ ಹೆಚ್ಚುವರಿಯಾಗಿ 10-12 ಕೋಟಿ ರೂ. ಹೆಚ್ಚುವರಿ ಬಿಲ್ ಕಟ್ಟುವಂತಾಗಿದೆ. ವಿದ್ಯುತ್ ದರಗಳ ಹೆಚ್ಚಳದಿಂದಾಗಿ, BWSSB ಹಣಕಾಸು ನಿರ್ವಾಹಣೆ ಕಷ್ಟವಾಗಿದೆ. ಹೀಗಾಗಿ ನೀರಿನ ದರವನ್ನು ಹೆಚ್ಚಿಸಲು ವಿನಂತಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲು ಚಿಂತನೆ ನಡೆಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ: ಡಿಸಿಎಂ ಡಿಕೆ ಶಿವಕುಮಾರ್
BWSSB ಅಧಿಕಾರಿಗಳ ಪ್ರಕಾರ, ಹೆಚ್ಚಿದ ವಿದ್ಯುತ್ ದರದೊಂದಿಗೆ ಇಲಾಖೆಯು ತಿಂಗಳಿಗೆ 10-12 ಕೋಟಿ ಹೆಚ್ಚುವರಿ ಬಿಲ್‌ಗಳನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ ಈ ಹೊರೆಯನ್ನು ಶೀಘ್ರದಲ್ಲೇ ಗ್ರಾಹಕರಿಗೂ ವರ್ಗಾವಣೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ. ವಿದ್ಯುತ್ ದರ ಹೆಚ್ಚಳವನ್ನು ಸರಿದೂಗಿಸಲು ನೀರಿನ ಬಿಲ್ ಶೇಕಡಾ 12-15% ಕ್ಕೆ ಏರುವ ಸಾಧ್ಯತೆಯಿದೆ ಎಂದು BWSSB ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ಮೂರು ವರ್ಷಕ್ಕೊಮ್ಮೆ ನೀರಿನ ದರ ಪರಿಷ್ಕರಣೆ ಮಾಡಬೇಕೆಂಬ ನಿಯಮವಿದೆ. ಆದರೆ ಕಳೆದ 2014ರಿಂದ ಇಲ್ಲಿಯವರೆಗೂ ನೀರಿನ ದರ ಪರಿಷ್ಕರಣೆಯಾಗಿಲ್ಲ. ಈ ಹಿಂದಿನ ಸರಕಾರಕ್ಕೆ ನೀರಿನ ದರ ಪರಿಷ್ಕರಣೆಗೆ ಪ್ರಸ್ತಾವ ಸಲ್ಲಿಸಿದಾಗ ಕೊರೊನಾ ಸೇರಿದಂತೆ ಇನ್ನಿತರೆ ಕಾರಣ ನೀಡಿ ಅನುಮತಿ ತಿರಸ್ಕರಿಸಿತ್ತು. ಸದ್ಯ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಹಾಗೂ ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಈಗಾಗಲೇ ಜಲಮಂಡಳಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ವಿದ್ಯುತ್ ದರ ಏರಿಕೆಯಿಂದ ಎದುರಾಗಿರುವ ಸಮಸ್ಯೆ ಬಗ್ಗೆ ಜಲಮಂಡಳಿ ಅಧ್ಯಕ್ಷ ಎನ್. ಜಯರಾಂ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳು ಸಭೆ ನಡೆಸಿದ್ದಾರೆ. ನೀರಿನ ದರ ಏರಿಕೆ ಬಗ್ಗೆಯೂ ಚರ್ಚಿಸಲಾಗುತ್ತಿದೆ. ಹೀಗಾಗಿ ನೀರಿದ ದರ ಆದಷ್ಟು ಬೇಗ ಏರಿಕೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ