ಕ್ಯಾಬ್ ಬುಕ್ ಮಾಡಿ ರದ್ದುಗೊಳಿಸಿದ್ದಕ್ಕೆ ಮಹಿಳೆಯ ವಾಟ್ಸಪ್ಗೆ ನಗ್ನ ವಿಡಿಯೋ, ಫೋಟೋಸ್ ಕಳುಹಿಸಿದ ಚಾಲಕ
ಕ್ಯಾಬ್ ರೈಡ್ ಕ್ಯಾನ್ಸಲ್ ಮಾಡಿದ್ದಕ್ಕೆ ಸಿಟ್ಟಿಗೆದ್ದ ಚಾಲಕ ಮಹಿಳೆಯ ವಾಟ್ಸಪ್ಗೆ ನಗ್ನ ವಿಡಿಯೋ ಹಾಗೂ ಫೋಟೋಸ್ಗಳನ್ನು ಕಳುಹಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಷ್ಟಕ್ಕೂ ಮಹಿಳೆ ಕ್ಯಾಬ್ ಬುಕ್ ಮಾಡಿ ಬಳಿಕ ರೈಡ್ ಕ್ಯಾನ್ಸಲ್ ಮಾಡಿದ್ಯಾಕೆ? ಚಾಲಕ ಕೋಪಮಾಡಿಕೊಂಡಿದ್ಯಾಕೆ? ಮಹಿಳೆ ಕೊಟ್ಟ ದೂರಿನಲ್ಲೇನಿದೆ? ವಿವರ ಈ ಕೆಳಗಿನಂತಿದೆ ನೋಡಿ.
ಬೆಂಗಳೂರು, (ಅಕ್ಟೋಬರ್ 13): ರೈಡ್ ಶೇರಿಂಗ್ ಆಪ್ ಮೂಲಕ ಕ್ಯಾಬ್ (Cab) ಬುಕ್ ಮಾಡಿ ಕ್ಯಾನ್ಸಲ್ ಮಾಡಿದ ಮಹಿಳೆಯ ವಾಟ್ಸಾಪ್ಗೆ ಚಾಲಕ(Cab Driver) ಅಶ್ಲೀಲ ಫೋಟೋಸ್ ಮತ್ತು ವಿಡಿಯೋಗಳನ್ನು ಕಳುಹಿಸಿರುವ ವಿಲಕ್ಷಣ ಘಟನೆ ಬೆಂಗಳೂರಿನ(Bengaluru) ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. 32 ವರ್ಷದ ಪರಿಣಿತಿ(ಹೆಸರು ಬದಲಿಸಲಾಗಿದೆ) ಎನ್ನುವ ಮಹಿಳೆ, ತನ್ನ ಮಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರಲು ಕ್ಯಾಬ್ ಬುಕ್ ಮಾಡಿದ್ದಾಳೆ. ಆದ್ರೆ, ಕ್ಯಾಬ್ ಬರುವುದು ತಡವಾಗಿದ್ದರಿಂದ ರೈಡ್ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಕೋಪಗೊಂಡ ಕ್ಯಾಬ್ ಚಾಲಕ ದಿನೇಶ್ ಎನ್ನುವಾತ ಬುಕ್ ಮಾಡಿದ್ದ ಮಹಿಳೆಯ ವಾಟ್ಸಪ್ ನಂಬರ್ಗೆ ನಗ್ನ ಚಿತ್ರ ಹಾಗೂ ವಿಡಿಯೋಗಳನ್ನು ಕಳುಹಿಸಿದ್ದಾನೆ. ಇದನ್ನು ನೋಡಿ ಶಾಕ್ ಆದ ಮಹಿಳೆ ಕೂಡಲೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ದೂರಿನ ಮೇರೆಗೆ ಪೊಲೀಸರು ಆರೋಪಿ ಚಾಲಕ ದಿನೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ. ಹಾಗಾದ್ರೆ, ಮಹಿಳೆ ಕೊಟ್ಟ ದೂರಿನಲ್ಲಿ ಏನಿದೆ ಎನ್ನುವ ವಿವರ ಕೆಳಗಿನಂತಿದೆ.
ಮಹಿಳೆ ನೀಡಿದ ದೂರಿನಲ್ಲಿ ಏನಿದೆ?
ಇನ್ನು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಏನಿದೆ ಎನ್ನುವುದನ್ನು ನೋಡುವುದಾದರೆ, ಪೋಷಕರ ಸಭೆ ಹಿನ್ನೆಲೆಯಲ್ಲಿ ಶಾಲೆಗೆ ಹೋಗಿದ್ದೆ. ಬಳಿಕ ವಾಪಸ್ ಮನೆಗೆ ಬರುವಾಗ ಮಗಳು ನಡೆಯುವುದಕ್ಕೆ ತಯಾರಿಲ್ಲದೆ ಹಠ ಮಾಡಿದಳು. ಈ ಹಿನ್ನಲೆಯಲ್ಲಿ ಕ್ಯಾಬ್ ಬುಕ್ ಮಾಡಿದ್ದೆ. ಆದ್ರೆ, ಕ್ಯಾಬ್ ಬೇಗ ಬರಲಿಲ್ಲ. ಕ್ಯಾಬ್ ಚಾಲಕ, ಫೋನ್ ಕರೆ ಮಾಡಿ ಬರುತ್ತಿರುವುದಾಗಿ ತಿಳಿಸಿದ್ದ. ಮಗಳು ಹಠ ಹಿಡಿದು ಅಳುತ್ತಿರುವುದನ್ನು ತಿಳಿಸಿ ಬೇಗ ಬರುಲು ಹೇಳಿದ್ದೆ. ಆದರೂ ಕ್ಯಾಬ್ ಬೇಗ ಬರಲಿಲ್ಲ. ಇತ್ತ ಇತ್ತ ಮಗಳು ಸಹ ಜೋರಾಗಿ ಅಳುವುದಕ್ಕೆ ಶುರುಮಾಡಿದಳು. ಅದೇ ವೇಳೆ ಅಲ್ಲೇ ಆಟೋ ಕಾಣಿಸಿತ್ತು. ಅದರಲ್ಲಿ ಹೋಗಬೇಕು ಎಂದು ಹಠ ಹಿಡಿದಳು. ಹೀಗಾಗಿ ಆಪ್ ಮೂಲಕ ಬುಕ್ ಮಾಡಿದ್ದ ಕ್ಯಾಬ್ ಕ್ಯಾನ್ಸಲ್ ಮಾಡಿದ್ದೆ. ಇದಕ್ಕಾಗಿ ನನ್ನ ಖಾತೆಯಿಂದ 60 ರೂಪಾಯಿ ಕಡಿತವಾಗಿದೆ.
ಇದನ್ನೂ ಓದಿ: ನಡುರಸ್ತೆಯಲ್ಲಿ ಯುವತಿಯನ್ನು ಥಳಿಸಿ, ಬಲವಂತವಾಗಿ ಕ್ಯಾಬ್ಗೆ ಹತ್ತಿಸಿದ ವ್ಯಕ್ತಿಯ ವಿಡಿಯೋ ವೈರಲ್
ರೈಡ್ ರದ್ದು ಮಾಡಿದ್ದೆ ತಡ ಚಾಲಕ ದಿನೇಶ್ ಫೋನ್ ಕರೆ ಮಾಡಿ, ಈಗಾಗಲೇ 5 ಕಿ.ಮೀ. ಬಂದಿದ್ದೆ. ಇನ್ನೇನು ಲೊಕೇಶನ್ ಸಮೀಪ ಇರುವಾಗ ರೈಡ್ ಕ್ಯಾನ್ಸಲ್ ಮಾಡಿದ್ರಿ. ತೊಂದರೆ ಆಯಿತು ಎಂದು ಕಿರಿಕಿರಿ ಮಾಡಲಾರಂಭಿಸಿದ್ದ. ಮಗಳು ಹಠ ಹಿಡಿದು ಅಳುತ್ತಿದ್ದ ಕಾರಣವನ್ನೂ ತಿಳಿಸಿದೆ. ಈ ಬಗ್ಗೆ ಕ್ಷಮೆಯಾಚಿಸಿದೆ. ಆದರೂ ಬಿಡದೆ ಪದೇಪದೆ ಫೋನ್ ಕರೆ ಮಾಡಿ ಕಿರಿಕಿರಿ ಉಂಟುಮಾಡಿದ್ದ. ಮೆಸೇಜ್ ಮೇಲೆ ಮೆಸೇಜ್ ಕಳುಹಿಸಿದ್ದ. ಅದರಲ್ಲಿ ಅಶ್ಲೀಲ ಫೋಟೋಸ್ ಮತ್ತು ವಿಡಿಯೋಸ್ ಕೂಡ ಇದ್ದವು . ಅದನ್ನು ನೋಡಿ ಗಾಬರಿಯಾಗಿ ಅಳುತ್ತಿದ್ದಾಗ, ನೆರೆಮನೆಯವರು ಫೋನ್ ತಗೊಂಡು ಆ ಟ್ಯಾಕ್ಸಿ ಚಾಲಕನಿಗೆ ಬೈದಿದ್ದರು. ಇದಾಗುತ್ತಿದ್ದಂತೆ ಆತ ವಾಟ್ಸಾಪ್ ಸಂದೇಶಗಳನ್ನು ಡಿಲೀಟ್ ಮಾಡಿಕೊಂಡಿದ್ದಾನೆ ಎಂದು ಮಹಿಳೆ, ಅಕ್ಟೋಬರ್ 09ರಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಈ ದೂರಿನ ಮೇರೆಗೆ ಪೊಲೀಸರು ಕ್ಯಾಬ್ ಚಾಲಕ ದಿನೇಶ್ಗಾಗಿ ಹುಡುಕಾಟ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲ ಕ್ಲಿಕ್ ಮಾಡಿ
Published On - 9:18 am, Fri, 13 October 23