ಬೆಳಗಾವಿ: ಸ್ಟಾರ್ಟಪ್ (Startup) ಉದ್ಯಮ ಕ್ಷೇತ್ರದಲ್ಲಿ ದೇಶಕ್ಕೆ ಗಣನೀಯ ಕೊಡುಗೆ ನೀಡುತ್ತಿರುವ ಕರ್ನಾಟಕ (Karnataka) ಇದೀಗ ನವೋದ್ಯಮಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ 25,000 ಸ್ಟಾರ್ಟಪ್ಗಳ ಸ್ಥಾಪನೆಗೆ ನೆರವಾಗುವ ಗುರಿಯೊಂದಿಗೆ ಹೊಸ ನೀತಿಯನ್ನು ರೂಪಿಸಲಾಗಿದ್ದು, ಇದಕ್ಕೆ ಸಚಿವ ಸಂಪುಟ (Karnataka cabinet) ಅನುಮೋದನೆ ನೀಡಿದೆ. ‘ಕರ್ನಾಟಕ ಸ್ಟಾರ್ಟಪ್ ನೀತಿ 2022’ರ ಅಡಿಯಲ್ಲಿ 100 ಕೋಟಿ ರೂ. ಮೊತ್ತದ ಸಾಹಸೋದ್ಯಮ ಬಂಡವಾಳ ನಿಧಿ (Venture Capital Fund) ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಹೊಸದಾಗಿ ಅಭಿವೃದ್ಧಿಹೊಂದುತ್ತಿರುವ ಟೆಕ್, ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ಎಲೆಕ್ಟ್ರಿಕ್ ವಾಹನಗಳು, ರೋಬಾಟಿಕ್ಸ್, ಡ್ರೋನ್ ಸೇರಿದಂತೆ ತಂತ್ರಜ್ಞಾನ ಮತ್ತು ಇತರ ಎಲ್ಲ ಕ್ಷೇತ್ರಗಳ ಸ್ಟಾರ್ಟಪ್ಗಳ ಉತ್ತೇಜನಕ್ಕೆ ಸಾಹಸೋದ್ಯಮ ಬಂಡವಾಳ ನಿಧಿಯನ್ನು ಉಪಯೋಗಿಸಲಾಗುತ್ತದೆ.
ಇದನ್ನೂ ಓದಿ: Good News: ಜಾಗತಿಕ ಕಂಪನಿಗಳಲ್ಲಿ ಉದ್ಯೋಗ ಕಡಿತದ ನಡುವೆ ಭಾರತದ ಸ್ಟಾರ್ಟಪ್ಗಳಲ್ಲಿ 2.3 ಲಕ್ಷ ಉದ್ಯೋಗ ಸೃಷ್ಟಿ
ಒಂದು ಬಾರಿಯ ಸಹಾಯಧನವಾಗಿ ಸ್ಟಾರ್ಟಪ್ಗಳಿಗೆ 50 ಲಕ್ಷ ರೂ. ನೀಡಲು ಹೊಸ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಹೊಸದಾಗಿ ಉದ್ಯಮ ಆರಂಭಿಸುವವರಿಗೆ ತುಸು ಹಣಕಾಸು ನೆರವು ದೊರೆಯಲಿದ್ದು, ಪ್ರಯೋಜನವಾಗಲಿದೆ. ಇಷ್ಟೇ ಅಲ್ಲದೆ, ರಾಜ್ಯ ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿ ಸ್ಟಾರ್ಟಪ್ಗಳಿಗೆ ಉತ್ತೇಜನ ನೀಡುವ ಗುರಿಯನ್ನೂ ಹೊಸ ನೀತಿ ಒಳಗೊಂಡಿದೆ. ಬೆಂಗಳೂರು ನಗರ ಜಿಲ್ಲೆಯಿಂದ ಹೊರಭಾಗದಲ್ಲಿರುವ ತಂತ್ರಜ್ಞಾನ ಸಂಸ್ಥೆಗಳಲ್ಲಿ 50 ನ್ಯೂ ಏಜ್ ಇನ್ನೋವೇಷನ್ ನೆಟ್ವರ್ಕ್ಗಳನ್ನು ಸ್ಥಾಪಿಸುವ ಗುರಿಯನ್ನೂ ಹೊಂದಿದೆ. ಪ್ರತಿಯೊಂದು ನ್ಯೂ ಏಜ್ ಇನ್ನೋವೇಷನ್ ನೆಟ್ವರ್ಕ್ಗೂ ವಿದ್ಯಾರ್ಥಿ ಯೋಜನೆಗಳಿಗಾಗಿ 3 ವರ್ಷಗಳಿಗೆ 5 ಲಕ್ಷ ರೂ. ಮತ್ತು ಕಾರ್ಯಾಚರಣೆ ವೆಚ್ಚವಾಗಿ ಪ್ರತಿ ವರ್ಷ 12 ಲಕ್ಷ ರೂ. ನೀಡಲು ಹೊಸ ನೀತಿ ಉದ್ದೇಶಿಸಿದೆ.
ಮೂರು ವರ್ಷಗಳ ಅವಧಿಗೆ ಒಟ್ಟು ವೆಚ್ಚದ ಶೇಕಡಾ 25ರಷ್ಟು, ಗರಿಷ್ಠ 45 ಲಕ್ಷ ರೂ.ವರೆಗೆ ನೀಡಲು ಸರ್ಕಾರ ಉದ್ದೇಶಿಸಿದೆ. ಮಹಿಳಾ ಉದ್ಯಮಿಗಳಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ 10 ಲಕ್ಷ ರೂ. ನೇರ ನಿಧಿ ನೀಡಲು ನೀತಿಯಡಿ ಅವಕಾಶವಿದೆ. 100 ಕೋಟಿ ರೂ. ಮೊತ್ತದ ಸಾಹಸೋದ್ಯಮ ಬಂಡವಾಳ ನಿಧಿಯಲ್ಲಿ ಮಹಿಳೆಯರಿಗೆ ಶೇಕಡಾ 25ರ ಮೀಸಲಾತಿ ನೀಡುವ ಬಗ್ಗೆಯೂ ಉಲ್ಲೇಖಿಸಿದೆ.
ದೇಶದ ಆರ್ಥಿಕತೆಯಲ್ಲಿ ಕರ್ನಾಟಕದ ಕೊಡುಗೆ ಸಾಕಷ್ಟಿದೆ. ಸ್ಟಾರ್ಟಪ್ ಕ್ಷೇತ್ರದಲ್ಲಿ ಬೆಂಗಳೂರು ಗಣನೀಯ ಕೊಡುಗೆ ಸಲ್ಲಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಉದ್ಘಾಟನಾ ಸಂದರ್ಭದಲ್ಲಿ ಹೇಳಿದ್ದರು. ಕರ್ನಾಟಕವು ಸಂಪ್ರದಾಯ ಮತ್ತು ತಂತ್ರಜ್ಞಾನ ಒಳಗೊಂಡ ಪ್ರದೇಶ. ಇದು ಪ್ರಕೃತಿ ಮತ್ತು ಸಂಸ್ಕೃತಿಯ ವಿಶಿಷ್ಟ ಸಂಗಮವಿರುವ ಸ್ಥಳವಾಗಿದೆ. ಪ್ರತಿಭೆ ಮತ್ತು ತಂತ್ರಜ್ಞಾನದ ಬಗ್ಗೆ ಯೋಚನೆ ಮಾಡಿದರೆ ನಮ್ಮ ಮನಸಿನಲ್ಲಿ ಬರುವ ಮೊದಲ ಚಿತ್ರಣ ಬೆಂಗಳೂರಿನದ್ದಾಗಿದೆ ಎಂದು ಮೋದಿ ಬಣ್ಣಿಸಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:48 am, Fri, 23 December 22