ಬೆಂಗಳೂರು (ಜುಲೈ 22): ಯುವತಿಗೆ ಕಾರು ಚಾಲನೆ ತರಬೇತಿ ನೀಡುವಾಗ ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ ಆರೋಪದಡಿ ಡ್ರೈವಿಂಗ್ ಸ್ಕೂಲ್‌ನ ತರಬೇತುದಾರನ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಾಲಕ್ಷ್ಮಿಪುರದ 18 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್‌ನ ತರಬೇತುದಾರ ಅಣ್ಣಪ್ಪ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಇನ್ನು ಕಾರಿ ಚಾಲನಾ ತರಬೇತಿದಾರನ ಅಸಭ್ಯ ವರ್ತನೆಯ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿರುವುದನ್ನು ಗಮನಿಸಿದ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಬಸವೇಶ್ವರನಗರ ಮಾರುತಿ ಡ್ರೈವಿಂಗ್ ಸ್ಕೂಲ್ ಪರವಾನಗಿ ಹಾಗೂ ಚಾಲಕ ಅಣ್ಣಪ್ಪ ಚಾಲನಾ ಪರವಾನಗಿ ಕೂಡಲೇ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಡ್ರೈವಿಂಗ್ ಸ್ಕೂಲ್ ಗಳಲ್ಲಿ ಈ ರೀತಿ ಘಟನೆ ಮರುಕಳಿಸದಂತೆ ನಿರ್ದೇಶನ ನೀಡುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಕಾರು ಚಾಲನೆ ಕಲಿಯಲು ಯುವತಿ ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್‌ನಲ್ಲಿ ನೋಂದಣಿ ಮಾಡಿಕೊಂಡು ಕೋರ್ಸ್ ಮುಗಿಸಿದ್ದಳು. ಡ್ರೈವಿಂಗ್ ಸ್ಕೂಲ್‌ನ ತರಬೇತುದಾರ ಅಣ್ಣಪ್ಪನೇ ಕಾರು ಚಾಲನೆ ಬಗ್ಗೆ ತರಬೇತಿ ನೀಡಿದ್ದ. ಕೋರ್ಸ್ ಮುಗಿದ ಬಳಿಕ ಅಣ್ಣಪ್ಪ, ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್‌ಗೆ ₹750 ಕೊಡಬೇಕು ಎಂದು ಯುವತಿಗೆ ಹೇಳಿದ್ದ. ಯುವತಿ 15 ದಿನಗಳ ವಿಶೇಷ ಕ್ಲಾಸ್‌ಗೆ ಅಣ್ಣಪ್ಪನಿಗೆ 10,500 ರೂ. ಪಾವತಿಸಿದ್ದಾರೆ.
ಇದನ್ನೂ ಓದಿ: ನಕಲಿ ದಾಖಲೆ, ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಆಸ್ತಿ ಕಬಳಿಕೆ; ಕುಖ್ಯಾತ ಭೂಕಬಳಿಕೆದಾರ ಅರೆಸ್ಟ್
ಅದರಂತೆ ಜೂ.26ರಂದು ವಿಶೇಷ ಕ್ಲಾಸ್ ಆರಂಭಿಸಿದ್ದ ಅಣ್ಣಪ್ಪ, ಪ್ರತಿ ದಿನ ಯುವತಿಯ ಮನೆ ಬಳಿ ಬಂದು ಆಕೆ ಕಾರಿನಲ್ಲೇ ಒಂದು ಗಂಟೆ ಚಾಲನೆ ತರಬೇತಿ ನೀಡುತ್ತಿದ್ದ. ಜು.7ರಂದು ಬೆಳಗ್ಗೆ 6 ಗಂಟೆಗೆ ಯುವತಿ ಮನೆ ಬಳಿ ಬಂದಿದ್ದ ಅಣ್ಣಪ್ಪ, ಯುವತಿಗೆ ಚಾಲನೆ ಮಾಡಲು ಕಾರು ನೀಡಿದ್ದಾನೆ. ಯುವತಿ ಬಸವೇಶ್ವರನಗರದ ನ್ಯಾಷನಲ್ ಶಾಲೆಯ ಮೇಲ್ಸೇತುವೆಯಲ್ಲಿ ಯುವತಿ ಕಾರು ಚಾಲನೆ ಮಾಡುತ್ತಿದ್ದರು.
ಈ ವೇಳೆ ಪಕ್ಕದ ಆಸನದಲ್ಲಿ ಕುಳಿತಿದ್ದ ಅಣ್ಣಪ್ಪ, ಹಸ್ತಮೈಥುನ ಮಾಡಿಕೊಂಡಿದ್ದಾನೆ. ಇದರಿಂದ ಆತಂಕಗೊಂಡ ಯುವತಿ, ಕಾರನ್ನು ಮನೆಗೆ ಕಡೆಗೆ ತಿರುಗಿಸಿದ್ದಾರೆ. ಈ ವೇಳೆ ಅಣ್ಣಪ್ಪ ಎಚ್ಚೆತ್ತುಕೊಂಡು ಸುಮ್ಮನಾಗಿದ್ದ. ನಂತರ ಕಾರು ಚಾಲನೆ ತರಬೇತಿ ನೆಪದಲ್ಲಿ ಅನುಚಿತವಾಗಿ ವರ್ತಿಸಿ ಮುಜುಗರ ಉಂಟು ಮಾಡಿದ ಅಣ್ಣಪ್ಪ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ದೂರು ನೀಡಿದ್ದಳು. ಈ ದೂರಿನ ಮೇರೆಗೆ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ