ಬೆಂಗಳೂರು, ಸೆ.16: ನಕಲಿ ನೋಟು (Fake Note) ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ವನಿತಾಗೆ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ 6 ವರ್ಷ ಜೈಲುಶಿಕ್ಷೆ ಜೊತೆಗೆ 20 ಸಾವಿರ ದಂಡ ವಿಧಿಸಿದೆ. 2018ರಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ರಾಜ್ಯಕ್ಕೆ ಖೋಟಾ ನೋಟು ಸಾಗಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಎನ್ಐಎ, ಪೊಲೀಸರು ಕಾರ್ಯಾಚರಣೆ ನಡೆಸಿ, 8 ಜನರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು. ಈ ವೇಳೆ ಅಪರಾಧಿ ವನಿತಾ ಅಲಿಯಾಸ್ ತಂಗಂ ಬಳಿ 2.50 ಲಕ್ಷ ನಕಲಿ ನೋಟು ಪತ್ತೆಯಾಗಿತ್ತು. ಈ ಕುರಿತು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಇದೀಗ ಪ್ರಕರಣದ 6ನೇ ಆರೋಪಿ ವನಿತಾ ಆರೋಪ ಸಾಬೀತಾದ ಹಿನ್ನೆಲೆ ಶಿಕ್ಷೆ ವಿಧಿಸಲಾಗಿದೆ.
ಬೆಂಗಳೂರು ಗ್ರಾಮಾಂತರ: ಕೇಬಲ್ ರಿಪೇರಿ ಮಾಡಲು ಹೋದ ವೇಳೆ ವಿದ್ಯುತ್ ಶಾಕ್ ಅವಘಡವಾದ ಘಟನೆ ದೊಡ್ಡಬಳ್ಳಾಪುರ ನಗರದ ಬಸವೇಶ್ವರ ನಗರದಲ್ಲಿ ನಡೆದಿದೆ. ಜಯಕುಮಾರ್ (26) ವಿದ್ಯುತ್ ಶಾಕ್ಗೆ ಒಳಗಾದ ಕೇಬಲ್ ರಿಪೇರಿ ಯುವಕ. ಕೂಡಲೇ ಇತನನ್ನು ದೊಡ್ಡಬಳ್ಳಾಪುರ ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಡಿಶ್ ರಿಪೇರಿ ಮಾಡುವ ವೇಳೆ ಪಕ್ಕದಲ್ಲೇ ಇದ್ದ ಲೈನ್ನಿಂದ ಶಾಕ್ ಹೊಡೆದಿದ್ದು,ಶೇಕಡಾ 60 ರಷ್ಟು ಸುಟ್ಟು ಗಾಯಗಳಾಗಿವೆ. ಈ ಘಟನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು, ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಯುವತಿ ಸಾವನ್ನಪ್ಪಿರುವ ಧಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಕಾಸರಗೋಡು ಜಿಲ್ಲೆಯ ಬಾಕ್ರಬೈಲು ನಿವಾಸಿ ಪ್ರೀತಿಕಾ ಶೆಟ್ಟಿ(21) ಮೃತ ವ್ಯಕ್ತಿ. ಬೈಕ್ ಸವಾರ ಬಂಟ್ವಾಳದ ಮನ್ವಿತ್ ರಾಜ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಉಡುಪಿಯಿಂದ ಮಂಗಳೂರು ಕಡೆ ಬರುವಾಗ ಈ ದುರ್ಘಟನೆ ನಡೆದಿದ್ದು, ಈ ವೇಳೆ ಬೈಕ್ನಿಂದ ರಸ್ತೆಗೆ ಬಿದ್ದ ಯುವತಿ ತಲೆಗೆ ಗಂಭೀರ ಗಾಯವಾಗಿತ್ತು. ಬಳಿಕ ಆಸ್ಪತ್ರೆಗೆ ಸಾಗಿಸುವ ಮೊದಲೇ ಗಾಯಾಳು ಪ್ರೀತಿಕಾ ಶೆಟ್ಟಿ ಸಾವನ್ನಪ್ಪಿದ್ದಾಳೆ. ಈ ಕುರಿತು ಮುಲ್ಕಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ