ಬೆಂಗಳೂರು: ರಾಜ್ಯದಲ್ಲಿ ಸುರಿದ ಮಹಾ ಮಳೆ (Karnataka Rains) ಹಿನ್ನೆಲೆ ಮಳೆ ಹಾನಿ ಪ್ರದೇಶಗಳ ವೀಕ್ಷಣೆಗೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಕೊಡಗುಗೆ ಹೋಗಿದ್ದಾಗ ಕೆಲ ಕಿಡಿಗೇಡಿಗಳು ಸಿದ್ದು ವಿರುದ್ಧ ಘೋಷಣೆ ಕೂಗಿ, ಅವರ ಕಾರಿನ ಮೇಲೆ ಮೊಟ್ಟೆ ದಾಳಿ ಮಾಡಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿಂದತೆ ಶಾಸಕರ ಭವನಕ್ಕೂ ಮೊಟ್ಟೆ ಬಿಸಿ ತಟ್ಟಿದ್ದು, ಶಾಸಕರ ಭವನದಲ್ಲಿ ಮೊಟ್ಟೆ ಬ್ಯಾನ್ ಮಾಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ದಾಳಿ ಸಾಧ್ಯತೆ ಹಿನ್ನೆಲೆ ಅಪ್ಪಚ್ಚು ರಂಜನ್, ಕೆ.ಜಿ ಬೊಪಯ್ಯ ಕೊಠಡಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಈ ಹಿಂದೆ ಯತ್ನಾಳ್ ಕೊಠಡಿ ಮೇಲೆ ಕೈ ಕಾರ್ಯಕರ್ತರು ದಾಳಿ ಮಾಡಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ ಕಾರು ಮೇಲೆ ಮೊಟ್ಟೆ ಎಸೆತ: ಮಡಿಕೇರಿ ಚಲೋ ಬೃಹತ್ ಪಾದಯಾತ್ರೆಗೆ ಮುಂದಾದ ಅಭಿಮಾನಿಗಳು
ಮಳೆಯಿಂದ ಹಾನಿಯಾದವರಿಗೆ ಸರ್ಕಾರ 1 ರೂಪಾಯಿ ಕೊಟ್ಟಿಲ್ಲ
ಮಳೆಯಿಂದ ಹಾನಿಯಾದವರಿಗೆ ಸರ್ಕಾರ 1 ರೂಪಾಯಿ ಕೊಟ್ಟಿಲ್ಲ. 2019ರಲ್ಲಿ ಮಳೆಯಿಂದ ಮೃತಪಟ್ಟವರಿಗೂ ಪರಿಹಾರ ನೀಡಿಲ್ಲ. ಸುಮಾರು 5.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈವರೆಗೂ ಬೆಳೆ ಹಾನಿಯ ಬಗ್ಗೆ ರಾಜ್ಯ ಸರ್ಕಾರ ಸರ್ವೆ ಮಾಡಿಸಿಲ್ಲ ಎಂದು ಹಾಸನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಹದಿನೆಂಟು ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಪರಿಹಾರ ಕೊಟ್ಟಿದ್ದೀವಿ ಅಂತ ಹೇಳ್ತಾರೆ, ರೈತರಿಗೆ ತಲುಪಿದೆಯಾ. ಯಾವ ಸಚಿವರು, ಯಾವ ಜಿಲ್ಲೆಗೂ ಭೇಟಿ ನೀಡಿಲ್ಲ. ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದಾಗ ಆರ್‌ಎಸ್‌ಎಸ್, ಬಜರಂಗದಳ ಕಾರ್ಯಕರ್ತರಿಂದ ಕಪ್ಪುಬಾವುಟ ಪ್ರದರ್ಶಿಸಿದ್ದು, ಕಪ್ಪುಬಾವುಟ ಪ್ರದರ್ಶಿಸೋದು ಅದೇನು ಧೀರರು, ವೀರರ ಕೆಲಸವೇ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ರಾಜ್ಯಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ
ಕಪ್ಪುಬಾವುಟ ಪ್ರದರ್ಶನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಇಟ್ ಈಸ್ ಎ ಸ್ಟೇಟ್ ಸ್ಪಾನ್ಸ್‌ರ್ಡ್ ಪ್ರೊಟೆಸ್ಟ್ ಎಂದು ರಾಜ್ಯಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು. ಪ್ರತಿಭಟನೆ ಬಗ್ಗೆ ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಸಿದ್ದರಾಮಯ್ಯ ಜೀವಕ್ಕೆ ಆಪತ್ತಿದೆ ಎಂದು ಚರ್ಚೆ ವಿಚಾರವಾಗಿ ಮಾತನಾಡಿದ್ದು, ಬಿಜೆಪಿಯವರು ನೀಚರು, ನೀಚ ಕೆಲಸ ಮಾಡಲು ತಯಾರಾಗಿದ್ದಾರೆ. ನಮ್ಮದು ದಾವಣಗೆರೆ ಸಮಾವೇಶ ಬಳಿಕ ಬಿಜೆಪಿಯವರಿಗೆ ಭಯ ಶುರುವಾಗಿದೆ. ಸೋಲುತ್ತೇವೆಂದು ಗೊತ್ತಾದ ನಂತರ ಇವೆಲ್ಲಾ ಮಾಡುತ್ತಿದ್ದಾರೆ. ತಿತಿಮತಿ, ಮಡಿಕೇರಿಯಲ್ಲಿ ನನ್ನ ವಿರುದ್ಧ ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆ ವೇಳೆ ಪೊಲೀಸರು ಸುಮ್ಮನೇ ನಿಂತುಕೊಂಡಿದ್ದರು. ರೌಂಡ್ ಅಪ್ ಮಾಡಿ ಕರೆದುಕೊಂಡು ಹೋಗಲು ಆಗ್ತಿರಲಿಲ್ಲವಾ ಎಂದು ಪೊಲೀಸರಿಗೆ ಇದೇನಾ ದೊಡ್ಡ ಕೆಲಸನಾ ಎಂದು ಕೊಡಗು ಎಸ್‌ಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದರು.
ನಾನು ರಂಭಾಪುರಿ ಶ್ರೀಗಳ ಬಳಿ ಯಾವುದೇ ನೋವು ತೋಡಿಕೊಂಡಿಲ್ಲ
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಪಶ್ಚಾತ್ತಾಪ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ನಾನು ರಂಭಾಪುರಿಶ್ರೀ ಬಳಿ ಯಾವುದೇ ನೋವು ತೋಡಿಕೊಂಡಿಲ್ಲ. ಪ್ರತ್ಯೇಕ ಧರ್ಮದ ವಿಚಾರದಲ್ಲಿ ಏನಾಯ್ತು ಅಂತ ವಿವರಿಸಿದ್ದೇನೆ. ಆಗ ನಾನು ಏನೇನು ಮಾಡಿದ್ದೇನೆ ಅಂತ ಹೇಳಿದ್ದೀನಿ ಅಷ್ಟೇ. ಇದು ಅಪಪ್ರಚಾರ ಆಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ಧರ್ಮದ ಬಗ್ಗೆ ನಾನೇನು ತಲೆ ಕೆಡಿಸಿಕೊಳ್ಳಲು ಹೋಗಿರಲಿಲ್ಲ. ಶಾಮನೂರು ಶಿವಶಂಕರಪ್ಪರವರು ಒಂದು ಅರ್ಜಿ ಕೊಟ್ಟಿದ್ದರು. ವೀರಶೈವ ಧರ್ಮ ಮಾಡಿ ಅಂತ ಅರ್ಜಿಯನ್ನು ಕೊಟ್ಟಿದ್ದರು. ಆಗಿನಿಂದ ಇದು ಶುರುವಾಯ್ತು ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:32 am, Sat, 20 August 22