ಬೆಂಗಳೂರು, ನ.19: ನಗರದ (Bengaluru) ವೈಟ್ಫೀಲ್ಡ್ನ ಕಾಡುಗೋಡಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಬಾಣಂತಿ ಹಾಗೂ 9 ತಿಂಗಳ ಹಸುಗೂಸು ಇಬ್ಬರೂ ಸ್ಥಳದಲ್ಲೇ ಮೃತಪಟ್ಟ ಪ್ರಕರಣ ಸಂಬಂಧ ಪೊಲೀಸರು ಬೆಸ್ಕಾಂನ (BESCOM) ಇಇ ಶ್ರೀರಾಮ್ ಸೇರಿದಂತೆ ಐವರು ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಕಾರ್ಯನಿರ್ವಾಹಕ ಅಭಿಯಂತರ ಶ್ರೀರಾಮ್, ಸಹಾಯಕ ಕಾರ್ಯನಿರ್ವಕ ಅಭಿಯಂತರ ಸುಬ್ರಹ್ಮಣ್ಯ, ವೈಟ್ ಫೀಲ್ಡ್ ವಿಭಾಗದ ಸಹಾಯಕ ಅಭಿಯಂತರ ಚೇತನ್, ವೈಟ್ ಫೀಲ್ಡ್ ವಿಭಾಗದ ಕಿರಿಯ ಅಭಿಯಂತರ ರಾಜಣ್ಣ, ಸ್ಟೇಷನ್ ಆಪರೇಟರ್ ಮಂಜುನಾಥ್ ಬಂಧಿತರಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.
ಬೆಂಗಳೂರಿನ ವೈಟ್ಫೀಲ್ಡ್ನ ಕಾಡುಗೋಡಿಯಲ್ಲಿ ಇಂದು ಬೆಳ್ಳಂ ಬೆಳಗ್ಗೆ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಎರಡು ಅಮಾಯಕ ಜೀವಗಳು ಬಲಿಯಾಗಿದ್ದವು. ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಬಾಣಂತಿ ಸೌಂದರ್ಯ (23) ಮತ್ತು 9 ತಿಂಗಳ ಮಗು ಲೀಲಾ ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು.
ಮೃತ ಸೌಂದರ್ಯ ಕಾಡುಗೋಡಿಯ ಎ.ಕೆ.ಗೋಪಾಲ್ ಕಾಲೋನಿಯ ನಿವಾಸಿಯಾಗಿದ್ದು, ಚೆನ್ನೈಗೆ ಮದುವೆ ಮಾಡಿಕೊಡಲಾಗಿತ್ತು. ದೀಪಾವಳಿ ಹಬ್ಬ ಆಚರಿಸಲು ಗಂಡ, ಹೆಂಡತಿ, ಮಗು ಊರಿಗೆ ಹೋಗಿದ್ದರು. ಇಂದು ಮುಂಜಾನೆ ಊರಿನಿಂದ ಹಸುಗೂಸು ಜೊತೆ ದಂಪತಿ ಬೆಂಗಳೂರಿಗೆ ಬಂದಿದ್ದರು.
ಇದನ್ನೂ ಓದಿ: ಬೆಸ್ಕಾಂ ಬೇಜವಾಬ್ದಾರಿಗೆ ತಾಯಿ, ಹಸುಗೂಸು ಬಲಿ: ಎಇ-ಎಇಇ ಅಮಾನತು
ಬಸ್ ಇಳಿದು ಮುಂಜಾನೆ ಐದು ಗಂಟೆ ಸುಮಾರಿಗೆ ಕತ್ತಲಿನಲ್ಲಿ ಮನೆಗೆ ನಡೆದು ಹೋಗುವಾಗ ರಸ್ತೆ ಬದಿ ತುಂಡಾಗಿ ಬಿದ್ದಿದ್ದ ತಂತಿಯನ್ನು ಸೌಂದರ್ಯ ತುಳಿದಿದ್ದಾರೆ. ಇದರಿಂದ ವಿದ್ಯುತ್ ಶಾಕ್ ಹೊಡೆದು ಬೆಂಕಿ ಹತ್ತಿಕೊಂಡಿದ್ದು ಪತಿ ಎದುರೇ ಪತ್ನಿ ಹಾಗೂ 9 ತಿಂಗಳ ಹಸುಗೂಸು ಲೀಲಾ ಸಜೀವದಹನವಾಗಿದ್ದರು.
ಬೆಸ್ಕಾಂಗೆ ಕರೆ ಮಾಡಿ ಒಂದು ಗಂಟೆಯಾದರೂ ಸ್ಥಳಕ್ಕೆ ಯಾರೂ ಬಂದಿಲ್ಲ. ಸೂಕ್ತ ಸಮಯಕ್ಕೆ ಸ್ಥಳೀಯ ನಿವಾಸಿಗಳೂ ಸಹಾಯಕ್ಕೆ ಬಂದಿರಲಿಲ್ಲ. ಇದರಿಂದಾಗಿ ಕಣ್ಣ ಮುಂದೆ ಹೆಂಡತಿ, ಮಗು ಪ್ರಾಣಬಿಟ್ಟರೂ ಏನು ಮಾಡಲಾಗದ ಸ್ಥಿತಿಯಲ್ಲಿ ಸಂತೋಷ್ ಇದ್ದರು. ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದು, ಘಟನೆ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304ಎ ಅಡಿ ಪ್ರಕರಣ ದಾಖಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ