ಬೆಂಗಳೂರು, (ಆಗಸ್ಟ್ 29): ಕರ್ನಾಟಕದ ಚಿಂತಕರು, ಸಾಹಿತಿಗಳಿಗೆ ಕೊಲೆ ಬೆದರಿಕೆ (life threatening)ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ್ದು, ಸಿಸಿಬಿ (CCB) ಅಧಿಕಾರಿಗಳ ತನಿಖೆಯಿಂದ ಮಹತ್ವದ ಮಾಹಿತಿ ಲಭ್ಯವಾಗಿದೆ. ಒಬ್ಬನೇ ವ್ಯಕ್ತಿ 7 ಜನರಿಗೂ ಪತ್ರ ಬರೆದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ದಾವಣಗೆರೆ ಮೂಲದಿಂದ ಬೆದರಿಕೆ ಪತ್ರ ಬಂದಿರುವುದು ಖಚಿತವಾಗಿದ್ದು, ಒಬ್ಬನೇ ಪತ್ರ ಬರೆದು ಬೇರೆ ಬೇರೆ ಜಿಲ್ಲೆ, ತಾಲೂಕುಗಳಿಗೆ ಹೋಗಿ ಪತ್ರಗಳನ್ನು ಪೋಸ್ಟ್ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು, ಇದೀಗ ಆ ವ್ಯಕ್ತಿಯ ಪತ್ತೆಗೆ ಸಿಸಿಬಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಕರ್ನಾಟಕದ ಲೇಖಕರು ಹಾಗೂ ಸಾಹಿತಿಗಳು ಸೇರಿದಂತೆ ಒಟ್ಟು ಹದಿನೈದಕ್ಕೂ ಹೆಚ್ಚು ಬುದ್ಧಿಜೀವಿಗಳಿಗೆ(scholar) ಜೀವ ಬೆದರಿಕೆ(life threatening) ಹಾಕಲಾಗಿದೆ. ಪ್ರೊ ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಬಳಿಕ ಈಗ ಮತ್ತೆ ಕಳೆದೊಂದು ವರ್ಷದಿಂದ ಸಾಹಿತಿ, ಲೇಖಕರಿಗೆ ಜೀವ ಬೆದರಿಕೆ ಬಂದಿರುವುದು ಬುದ್ಧಿಜೀವಿಗಳು ಆತಂಕಗೊಂಡಿದ್ದಾರೆ. ಕೋಮುವಾದ, ಜಾತಿವಾದ, ಮೌಡ್ಯವಿರೋಧಿ ನಿಲುವುಳ್ಳ ಸಾಹಿತಿಗಳು ಹಾಗೂ ಬುದ್ಧಿಜೀವಿಗಳಿಗೆ ಪತ್ರದ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಇದರಿಂದ , ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಮಾನಸಿಕ ಹಿಂಸೆಗೊಳಗಾಗಿದ್ದು, ಯಾವ ಸಂದರ್ಭದಲ್ಲಾದರೂ ತಮ್ಮ ಮೇಲೆ ದಾಳಿಯಾಗಬಹುದು ಎನ್ನುವ ಆತಂಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಹಿತಿ, ಲೇಖಕರು ತಮಗೆ ರಕ್ಷಣೆ ನೀಡಬೇಕೆಂದು ಸರ್ಕಾರದ ಮೊರೆ ಹೋಗಿದ್ದರು.
ಕೆ. ಮರುಳಸಿದ್ದಪ್ಪ ನೇತೃತ್ವದಲ್ಲಿ ಪರಮೇಶ್ವರ ಅವರನ್ನು ಮೊನ್ನೇ ಅಷ್ಟೇ ಭೇಟಿ ಮಾಡಿದ್ದ ಸಾಹಿತಿಗಳು, ನಿರಂತರವಾಗಿ ಬೆದರಿಕೆ ಕರೆಗಳು ಮತ್ತು ಪತ್ರಗಳು ಬರುತ್ತಿರುವ ಕುರಿತು ಮಾಹಿತಿ ನೀಡಿದ್ದರು. ಈ ಕುರಿತು ಗೃಹ ಸಚಿವರು ವಿವರವಾಗಿ ಮಾಹಿತಿ ಪಡೆದುಕೊಂಡು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.